

ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ಬಾಸ್ ಅತಿ ಹೆಚ್ಚು ಟಿಆರ್ಪಿ ಹೊಂದಿರುವ ರಿಯಾಲಿಟಿ ಶೋ. ಈಗಾಗಲೇ ಯಶಸ್ವಿ 13 ಸೀಸನ್ಗಳನ್ನು ಮುಗಿಸಿಕೊಂಡಿರುವ ಬಿಗ್ಬಾಸ್, 14ನೇ ಸೀಸನ್ಗೆ ತಯಾರಿ ನಡೆಸಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತೊಗಾಗಲೇ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಶುರುವಾಗಬೇಕಿತ್ತು. ಆದರೆ, ಕರೊನಾ ಹಿನ್ನೆಲೆಯಲ್ಲಿ ಆ ಪ್ರಕ್ರಿಯೆಯೂ ಸ್ಥಗಿತಗೊಂಡಿತ್ತು. ಇದೀಗ ಆಡಿಷನ್ಗೆ ಚಾಲನೆ ನೀಡಲಾಗಿದೆ.
ಇದನ್ನೂ ನೋಡಿ: ಸುಶಾಂತ್ ಸಿಂಗ್ ಅಜರಾಮರ; ಕುಟುಂಬದಿಂದ ಹೊಸ ನಿರ್ಧಾರ…
ಹೌದು, ಲಾಕ್ಡೌನ್ ಕೊಂಚ ಸಡಿಲಗೊಂಡ ಹಿನ್ನೆಲೆಯಲ್ಲಿ ಆನ್ಲೈನ್ ಆಡಿಷನ್ಗೆ ಬಿಗ್ಬಾಸ್ ತಂಡ ನಿರ್ಧರಿಸಿದೆ. ಈಗಾಗಲೇ ಒಂದಷ್ಟು ಅಭ್ಯರ್ಥಿಗಳನ್ನು ಆಡಿಷನ್ ಮಾಡಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ರಿಯಾಲಿಟಿ ಶೋ ಶುರುವಾಗಲಿದೆ. ಇನ್ನು ಕೆಲ ಮೂಲಗಳ ಪ್ರಕಾರ ಈಗಾಗಲೇ 30 ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದ್ದು, ಆ ಪೈಕಿ 16 ಜನರನ್ನು ಆಯ್ದುಕೊಂಡು ಬಿಗ್ ಮನೆಗೆ ಕಳುಹಿಸಲಿದ್ದಾರಂತೆ. 13 ಜನ ಸೆಲೆಬ್ರಿಟಿಗಳಾದರೆ, ಇನ್ನುಳಿದ ಮೂವರು ಸಾಮಾನ್ಯರಾಗಿರಲಿದ್ದಾರೆ.
ಒಂದೊಂದು ಸೀಸನ್ನಲ್ಲೂ ಒಂದೊಂದು ಥೀಮ್ ಆಯ್ದುಕೊಳ್ಳಲಾಗುತ್ತಿತ್ತು. ಈ ಸಲ ಅರಣ್ಯದ ಥೀಮ್ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ. ಸದ್ಯ ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪ್ರಶ್ನೆ ಎದ್ದಿರುವುದರಿಂದ, ಪ್ರತಿ ಸ್ಪರ್ಧಿಯ ಕೋವಿಡ್ ಪರೀಕ್ಷೆ ಮಾಡಿಯೇ ಮನೆಒಳಗೆ ಬಿಡಲಾಗುತ್ತದೆಯಂತೆ. ಜತೆಗೆ ಮನೆಯಲ್ಲಿರುವವರ ಸುರಕ್ಷತೆಗೆ ಯಾವೆಲ್ಲ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತದೋ, ಅದೇ ಕ್ರಮಗಳನ್ನು ಶೂಟಿಂಗ್ ಸೆಟ್ನಲ್ಲೂ ಅಳವಡಿಸಿಕೊಳ್ಳಲು ತಂಡ ತೀರ್ಮಾನಿಸಿದೆ. (ಏಜೆನ್ಸೀಸ್)