ಕನ್ನಡ ಚಿತ್ರ ರಂಗಕ್ಕೆ ಕರೊನಾ ವಿರಾಮ

corona move 19 mar 20
Published on

ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂಥದ್ದೊಂದು ಪರಿಸ್ಥಿತಿ ನಿರ್ವಣವಾಗಿದೆ. ಈ ಹಿಂದೆ ಭಾರತ್ ಬಂದ್ ಆದಾಗ, ಯುದ್ಧಗಳಾದಾಗ, ಭಯೋತ್ಪಾದನಾ ಚಟುವಟಿಕೆಗಳಿಂದ ಭೀತಿಯ ವಾತಾವರಣ ಉಂಟಾದಾಗ, ಬೇರೆ ಸಮಸ್ಯೆಗಳು ಎದುರಾದಾಗ ಪ್ರದೇಶವಾರು ಚಿತ್ರ ಪ್ರದರ್ಶನ ಮತ್ತು ಸಿನಿಮಾ ಚಟುವಟಿಕೆಗಳು ರದ್ದಾದ ಉದಾಹರಣೆಗಳಿವೆ. ಅವೆಲ್ಲ ಕೆಲವು ದಿನಗಳ ಮಟ್ಟಿಗೆ ಮಾತ್ರ. ಆದರೆ, ಕರೊನಾ ಎಂಬ ಸಾಂಕ್ರಾಮಿಕ ವೈರಸ್​ನಿಂದಾಗಿ ಇಡೀ ಭಾರತೀಯ ಚಿತ್ರರಂಗವೇ ಅನಿರ್ದಿಷ್ಟಾವಧಿ ಬಂದ್ ಆಗಿದೆ. ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಮಾರ್ಚ್ 31ರವರೆಗೆ ಚಿತ್ರೀಕರಣ ಮಾಡುವಂತಿಲ್ಲ ಎಂದು ಹೇಳಿದೆ. ಇನ್ನು ಆಯಾ ರಾಜ್ಯಗಳು ಚಿತ್ರ ಪ್ರದರ್ಶನ ರದ್ದು ಮಾಡಿವೆ. ಹಾಗಂತ ಏಪ್ರಿಲ್​ನಿಂದ ಎಲ್ಲವೂ ಯಥಾಸ್ಥಿತಿಗೆ ಬರುತ್ತದೆ ಎಂದು ನಂಬುವ ಹಾಗಿಲ್ಲ. ಬರಬಹುದು ಅಥವಾ ಇನ್ನಷ್ಟು ಸಮಯ ಚಿತ್ರರಂಗದ ಬಂದ್ ಮುಂದುವರಿಯಲೂಬಹುದು. ಈಗಿರುವ ಆತಂಕವನ್ನು ನೋಡಿದರೆ, ಕರೊನಾ ಎಂಬ ಮಾರಕ ವೈರಸ್ ಚಿತ್ರರಂಗವನ್ನು ಇನ್ನಷ್ಟು ಕಾಡುವ ಸಾಧ್ಯತೆ ಇದೆ. ಚಿತ್ರ ಪ್ರದರ್ಶನ ಮತ್ತು ಸಿನಿಮಾ ಚಟುವಟಿಕೆಗಳು ಅನಿರ್ದಿಷ್ಟಾವಧಿ ಬಂದ್ ಆಗುವ ಭಯ ಚಿತ್ರರಂಗವನ್ನು ಕಾಡುತ್ತಿದೆ. ಇದರಿಂದ ಎಷ್ಟೆಲ್ಲ ನಷ್ಟ ಮತ್ತು ಮುಂದೆ ಏನೆಲ್ಲ ಸಮಸ್ಯೆಗಳು ಕಾದಿವೆ ಎಂಬ ಚಿತ್ರಣ ಇಲ್ಲಿದೆ...

ಬೆಂಗಳೂರು: ಒಂದು ವಾರವಾಯಿತು ರಾಜ್ಯದಲ್ಲಿ ಚಿತ್ರಗಳ ಪ್ರದರ್ಶನ ನಿಂತು ಹೋಗಿ. ಅದಾಗಿ ಎರಡು ದಿನಗಳ ಕಾಲ ಚಿತ್ರೀಕರಣ ಚಟುವಟಿಕೆಗಳು ಮುಂದುವರಿಯಿತಾದರೂ, ಕಳೆದ ಐದು ದಿನಗಳಿಂದ ಸಿನಿಮಾ ಶೂಟಿಂಗ್ ನಿಂತು ಹೋಗಿದೆ. ಕಿರುತೆರೆ ಕಾರ್ಯಕ್ರಮಗಳು, ಸಾಕ್ಷ್ಯಚಿತ್ರಗಳು ಮತ್ತು ವೆಬ್​ಸೀರಿಸ್​ನ ಚಿತ್ರೀಕರಣಕ್ಕೂ ಗುರುವಾರದಿಂದ ಬ್ರೇಕ್ ಬಿದ್ದಿದೆ. ಇಷ್ಟಕ್ಕೆಲ್ಲ ಕಾರಣ ಕರೊನಾ ಭೀತಿ. ಈ ಭೀತಿ ಯಾವಾಗ ಕಡಿಮೆಯಾಗುತ್ತದೆ, ಚಿತ್ರ ಪ್ರದರ್ಶನ ಯಾವಾಗಿಂದ ಶುರುವಾಗುತ್ತದೆ, ಚಿತ್ರೀಕರಣ ಯಾವತ್ತಿನಿಂದ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ.

ರಾಜ್ಯ ಸರ್ಕಾರವೇನೋ ಮಾರ್ಚ್ 31ರವರೆಗೂ ನಿರ್ಬಂಧ ಮುಂದುವರಿಸುವಂತೆ ಆದೇಶ ಹೊರಡಿಸಿದೆ. ಇನ್ನು ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (ಐಎಂಪಿಪಿಎ) ಸಹ ಮಾ.31ರವರೆಗೆ ಸಿನಿಮಾ, ಧಾರಾವಾಹಿ, ವೆಬ್ ಸೀರಿಸ್, ಸಾಕ್ಷ್ಯಚಿತ್ರ ... ಹೀಗೆ ಎಲ್ಲ ತರಹದ ಚಿತ್ರೀಕರಣಕ್ಕೂ ತಡೆಯೊಡ್ಡಿದೆ. ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈ ಥರದ್ದು ಮೊದಲು ಎನ್ನುತ್ತಾರೆ ಚಿತ್ರರಂಗದ ಹಿರಿಯರು. ಈ ಹಿಂದೆ ಕರ್ನಾಟಕದಲ್ಲಿ ಡಾ. ರಾಜಕುಮಾರ್ ಅವರ ಅಪಹರಣ ಆದ ಸಂದರ್ಭದಲ್ಲಿ ಕನ್ನಡ ಚಿತ್ರರಂಗವೇ ಸ್ವಯಂಪ್ರೇರಿತವಾಗಿ 108 ದಿನಗಳ ಕಾಲ ಚಿತ್ರೀಕರಣ ನಿಲ್ಲಿಸಿತ್ತು. ಕೆಲವು ವಾರಗಳ ಕಾಲ ಚಿತ್ರ ಪ್ರದರ್ಶನ ರದ್ದಾಗಿತ್ತು. ಅದು ಬಿಟ್ಟರೆ, ಕನ್ನಡ ಚಿತ್ರರಂಗದಲ್ಲಿ ಈ ತರಹದ ಅನಿರ್ದಿಷ್ಟಾವಧಿ ಬಂದ್ ಆಗಿರಲಿಲ್ಲ. ಇನ್ನು ದೇಶದ ವಿಷಯವಾಗಿ ಹೇಳುವುದಾದರೆ, ಈ ಹಿಂದೆ ದೇಶ ಅನೇಕ ಸಮಸ್ಯೆಗಳನ್ನು ಎದುರಿಸಿದೆ. ಆ ಬಿಸಿ ಆಯಾ ಭಾಷೆಯ ಮತ್ತು ಭಾಗದ ಚಿತ್ರರಂಗವನ್ನು ತಟ್ಟಿದ್ದು ಬಿಟ್ಟರೆ, ಇಡೀ ದೇಶಕ್ಕೆ ತಟ್ಟಿರಲಿಲ್ಲ. ಚಲನಚಿತ್ರ ಪ್ರದರ್ಶನ ಮತ್ತು ಚಿತ್ರೀಕರಣ ಚಟುವಟಿಕೆಗಳು ಕೆಲವು ದಿನಗಳ ಕಾಲ ಸ್ಥಗಿತಗೊಂಡಿದ್ದು ಬಿಟ್ಟರೆ, ಹೀಗೆ ಅನಿರ್ದಿಷ್ಟಾವಧಿ ಕಾಲ ನಿಲ್ಲುವ ಭಯ ಹುಟ್ಟಿಸಿರಲಿಲ್ಲ.

ಆದರೆ, ಈ ಬಾರಿ ಸರ್ಕಾರಗಳೇ ಜನರ ಹಿತ ಕಾಪಾಡುವ ದೃಷ್ಟಿಯಿಂದ ಮತ್ತು ಕರೊನಾ ಎಂಬ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂಥದ್ದೊಂದು ಕ್ರಮ ಕೈಗೊಂಡಿದೆ. ಕರ್ನಾಟಕ, ಕೇರಳ, ದೆಹಲಿ ಮುಂತಾದ ರಾಜ್ಯಗಳಲ್ಲಿ ಚಿತ್ರ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಇದೆಲ್ಲದರಿಂದ ಚಿತ್ರರಂಗಕ್ಕೆ ಆಗುವ ನಷ್ಟ ಅಪಾರ.

ಈ ಕುರಿತು ಮಾತನಾಡುವ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ. ಚಂದ್ರಶೇಖರ್, ‘ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ರಾಜ್ಯದಲ್ಲಿ 575 ಸಿಂಗಲ್ ಸ್ಕ್ರೀನ್​ಗಳಿವೆ, 240 ಮಲ್ಟಿಪ್ಲೆಕ್ಸ್ ಪರದೆಗಳಿವೆ. ಇವೆಲ್ಲ ಬಂದ್ ಆಗುವುದರಿಂದ ಒಂದು ದಿನಕ್ಕೆ 10 ಕೋಟಿ ರೂ. ನಷ್ಟವಾಗುತ್ತದೆ. ಇನ್ನು ಕರ್ನಾಟಕದಿಂದ ಕೇಂದ್ರಕ್ಕೆ ಒಂದು ದಿನಕ್ಕೆ 1.8 ಕೋಟಿ ರೂ. ತೆರಿಗೆ ರೂಪದಲ್ಲಿ ಪಾವತಿಸಲಾಗುತ್ತದೆ. ಇದು ಒಂದು ರಾಜ್ಯದ್ದಾದರೆ, ಇಡೀ ದೇಶದಲ್ಲಿ ಅಷ್ಟೂ ರಾಜ್ಯಗಳಿಂದ ಒಂದು ದಿನಕ್ಕೆ ಎಷ್ಟು ಕೋಟಿ ರೂ. ನಷ್ಟ ಲೆಕ್ಕ ಹಾಕಿ’ ಎನ್ನುತ್ತಾರೆ ಚಂದ್ರಶೇಖರ್.

ಇದು ಬರೀ ಚಿತ್ರಪ್ರದರ್ಶನ ರದ್ದಾಗುವುದರಿಂದ ಆಗುತ್ತಿರುವ ನಷ್ಟ. ಇನ್ನು ಚಿತ್ರೀಕರಣ ನಿಂತಿರುವುದರಿಂದ, ಆಗುತ್ತಿರುವ ನಷ್ಟ ಇನ್ನೂ ದೊಡ್ಡದು. ಪ್ರಮುಖವಾಗಿ ಚಿತ್ರೀಕರಣ ಮತ್ತು ಚಿತ್ರ ಪ್ರದರ್ಶನ ನಿಂತಿರುವುದರಿಂದ, ಈಗಾಗಲೇ ಮಾಡಿಕೊಂಡಿದ್ದ ಪ್ಲ್ಯಾನ್​ಗಳೆಲ್ಲ ತಲೆಕೆಳಗಾದಂತಾಗಿವೆ. ಏಕೆಂದರೆ, ಬಿಡುಗಡೆಯಾಗಬೇಕಿದ್ದ ಚಿತ್ರಗಳೆಲ್ಲ ಮುಂದಕ್ಕೆ ಹೋಗಿವೆ. ಇದರ ಪರಿಣಾಮ ಬೇರೆ ಚಿತ್ರಗಳ ಮೇಲೂ ಆಗುತ್ತದೆ. ಇನ್ನು ಆದಷ್ಟು ಬೇಗ ಚಿತ್ರೀಕರಣ ಮುಗಿಸಿ, ಚಿತ್ರ ಬಿಡುಗಡೆ ಮಾಡಬೇಕೆನ್ನುವವರಿಗೂ ಪೆಟ್ಟು ಬಿದ್ದಿದೆ. ಏಕೆಂದರೆ, ಸದ್ಯದ ಸ್ಥಿತಿಯ ಪ್ರಕಾರ ಮಾ.31ರವರೆಗೂ ಚಿತ್ರೀಕರಣ ಮಾಡುವಂತಿಲ್ಲ. ಆಮೇಲೆ ಅನುಮತಿ ಸಿಕ್ಕರೆ ಚಿತ್ರೀಕರಣ ಮುಂದುವರಿಸಬಹುದು. ಇಲ್ಲವಾದರೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.

ಒಂದು ಪಕ್ಷ ದೇಶಾದ್ಯಂತ ಕರೊನಾ ಭೀತಿ ಕಡಿಮೆಯಾಗಿ, ಸರ್ಕಾರವೇ ಚಿತ್ರಪ್ರದರ್ಶನ ಮತ್ತು ಚಿತ್ರೀಕರಣ ಚಟುವಟಿಕೆಗಳನ್ನು ಮುಂದುವರಿಸುವುದಕ್ಕೆ ಆದೇಶಿಸಿದರೂ, ತಕ್ಷಣವೇ ಎಲ್ಲವೂ ಸರಿ ಹೋಗುತ್ತದೆ ಮತ್ತು ಮತ್ತೊಮ್ಮೆ ಚಿತ್ರಮಂದಿರಗಳು ಕಿಕ್ಕಿರಿದು ತುಂಬುತ್ತವೆ ಎಂದು ಹೇಳುವುದು ಕಷ್ಟ. ಅದಕ್ಕೆ ಕಾರಣ, ಭಯ. ಸಾರ್ವಜನಿಕ ಸ್ಥಳಗಳಲ್ಲೇ ಹೆಚ್ಚಾಗಿ ಕರೊನಾ ವೈರಸ್ ಹರಡುತ್ತದೆ ಎಂಬ ವಿಷಯ ಜನರ ಮನಸ್ಸಿನಲ್ಲಿ ಅಚ್ಚಾಗಿರುವಾಗ, ಇನ್ನೂ ಕೆಲವು ತಿಂಗಳುಗಳ ಕಾಲ ಚಿತ್ರಮಂದಿರಗಳಿಗೆ ಹೋಗಿ ಚಿತ್ರ ನೋಡುವವರ ಸಂಖ್ಯೆ ಕಡಿಮೆಯಾಗಲಿದೆ. ಒಂದೊಮ್ಮೆ ಸರ್ಕಾರವು ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟರೂ ಪ್ರೇಕ್ಷಕರ ಅಭಾವ ಇದ್ದೇ ಇರುತ್ತದೆ. ಇನ್ನು ಚಿತ್ರೀಕರಣದ ವಿಷಯದಲ್ಲೂ ಅಷ್ಟೇ. ಜನ ಮಾಮೂಲಿನಂತೆಯೇ ಚಿತ್ರೀಕರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ, ಸಿನಿಮಾ ಸಂಬಂಧ ಕಾರ್ಯಕ್ರಮಗಳು ನಡೆಯುವುದಕ್ಕೆ ಇನ್ನಷ್ಟು ಸಮಯ ಖಂಡಿತ ಬೇಕಾಗುತ್ತದೆ. ಹಾಗಾಗಿ ಮೊದಲು ಜನರ ಮನಸ್ಥಿತಿ ಬದಲಾಗಬೇಕಿದೆ. ಭಯದ ವಾತಾವರಣ ಕಡಿಮೆಯಾಗುತ್ತಿದೆ, ಇನ್ನು ಮುಕ್ತವಾಗಿ ಓಡಾಡಬಹುದು, ಚಿತ್ರ ನೋಡಬಹುದು ಎಂದು ಸ್ಪಷ್ಟವಾದ ಮೇಲೆಷ್ಟೇ ಚಿತ್ರರಂಗ ಮತ್ತೆ ಗರಿಗೆದರಲಿದೆ.

ಅದೇ ಕಾರಣಕ್ಕೆ ಕೆಲವರು ಮುಂದಾಲೋಚನೆಯಿಂದ, ತಮ್ಮ ಚಿತ್ರಗಳ ಬಿಡುಗಡೆ ಮತ್ತು ಚಿತ್ರೀಕರಣವನ್ನು ಬಹಳ ಮುಂದಕ್ಕೆ ಹಾಕಿದ್ದಾರೆ. ಎಲ್ಲವೂ ತಹಬದಿಗೆ ಬಂದು, ಮಾರುಕಟ್ಟೆ ಒಂದಿಷ್ಟು ಗರಿಗೆದರಿದ ನಂತರ ಅಖಾಡಕ್ಕೆ ಇಳಿಯುವ ತೀರ್ಮಾನ ಮಾಡಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ‘ನೋ ಟೈಮ್ ಟು ಡೈ’ ಎಂಬ ಬಾಂಡ್ ಚಿತ್ರ. ಏಪ್ರಿಲ್ 10ಕ್ಕೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ ನವೆಂಬರ್​ನಲ್ಲಿ ತೆರೆ ಕಾಣಲಿದೆ. ಅಂದರೆ, ಆ ಚಿತ್ರಕ್ಕಾಗಿ ಜಗತ್ತಿನಾದ್ಯಂತ ಪ್ರೇಕ್ಷಕರು ಕಾಯುತ್ತಿದ್ದರೂ ಏಳು ತಿಂಗಳು ಮುಂದೂಡಲ್ಪಟ್ಟಿದೆ. ಇಷ್ಟೆಲ್ಲ ಆಗುತ್ತಿದೆಯೆಂದರೆ, ಕರೊನಾ ವೈರಸ್​ನ ಭೀಕರತೆ ಚಿತ್ರರಂಗಕ್ಕೆ ಅರ್ಥವಾದಂತಿದೆ.

ಹಾಗಾದರೆ ಮುಂದೇನು ಎಂಬ ಪ್ರಶ್ನೆಗೆ ತಕ್ಷಣಕ್ಕೆ ಉತ್ತರ ಕಷ್ಟ. ಸದ್ಯಕ್ಕೆ ಹೇಳುವುದಾದರೆ, ಏಪ್ರಿಲ್ ಒಂದರವರೆಗಂತೂ ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳು ನಡೆಯುವುದಿಲ್ಲ. ಸರ್ಕಾರ ಮುಂದಿನ ಆದೇಶ ಹೊರಡಿಸಿದ ಮೇಲಷ್ಟೇ ಮುಂದಿನ ಲೆಕ್ಕಾಚಾರ. ಏಕೆಂದರೆ, ಕರೊನಾ ಅವಾಂತರ ಸದ್ಯಕ್ಕೆ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ.

ನಷ್ಟವಾದವರಿಗೆ ಮೊದಲ ಆದ್ಯತೆ

ಕರೊನಾ ವೈರಸ್ ಹಬ್ಬುವ ಭಯದಿಂದ ಚಿತ್ರ ಪ್ರದರ್ಶನ ನಿಲ್ಲಿಸಿರುವುದರಿಂದ ನೇರ ಪರಿಣಾಮ ಎದುರಿಸುತ್ತಿರುವುದು, ಈಗಾಗಲೇ ಬಿಡುಗಡೆಯಾದ ಚಿತ್ರಗಳು. ರಾಜ್ಯ ಸರ್ಕಾರವು ಚಿತ್ರ ಪ್ರದರ್ಶನವನ್ನು ಬಂದ್ ಮಾಡಿರುವುದರಿಂದ ಕಳೆದ ಎರಡು ವಾರಗಳಲ್ಲಿ ಬಿಡುಗಡೆಯಾದ ಚಿತ್ರಗಳಿಗೆ ನೇರ ಹೊಡೆತ ಬಿದ್ದಿದೆ. ಭಯದ ವಾತಾವರಣ ಸ್ವಲ್ಪ ಕಡಿಮೆಯಾಗಿ, ಚಿತ್ರ ಪ್ರದರ್ಶನ ಮತ್ತೆ ಮೊದಲಿನಂತೆ ಶುರುವಾದಾಗ ಪುನಃ ಚಿತ್ರ ಬಿಡುಗಡೆ ಮಾಡುವುದಾಗಿ ‘ಒಂದು ಶಿಕಾರಿಯ ಕಥೆ’ ಮತ್ತು ‘ಶಿವಾರ್ಜುನ’ ಚಿತ್ರತಂಡಗಳು ಘೋಷಿಸಿವೆ. ಅದಕ್ಕೆ ಪೂರಕವಾಗಿ, ಸಮಸ್ಯೆ ಎದುರಿಸಿದ ಚಿತ್ರಗಳಿಗೆ ಮೊದಲ ಪ್ರಾಶಸ್ಱ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಹೇಳಿದೆ.

ನಡೆ ಮುಂದೆ, ನಡೆ ಮುಂದೆ

ಪ್ರಮುಖವಾಗಿ ಕೆಲವು ಚಿತ್ರಗಳು ಮಾರ್ಚ್ ಕೊನೆಯ ವಾರ ಮತ್ತು ಏಪ್ರಿಲ್​ನ ಮೊದಲೆರೆಡು ವಾರಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದ್ದವು. ಅವೆಲ್ಲವೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಕನ್ನಡದಲ್ಲಿ ‘ಸಲಗ’, ‘ಪ್ರಾರಂಭ’, ‘ರಾಬರ್ಟ್’ ಮುಂತಾದ ಚಿತ್ರಗಳ ಬಿಡುಗಡೆ ಮುಂದಕ್ಕೆ ಹೋಗಿದೆ. ಇದರಿಂದ ಈ ಚಿತ್ರಗಳ ಬಿಡುಗಡೆಗೆ ಕಾದಿದ್ದ ಇನ್ನಷ್ಟು ಚಿತ್ರಗಳು ಸಹ ಮುಂದಕ್ಕೆ ಹೋಗಲಿವೆ. ಇನ್ನು ‘ಯುವರತ್ನ’, ‘ಪೊಗರು’ ಮುಂತಾದ ಚಿತ್ರಗಳ ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಅವನ್ನೆಲ್ಲ ಮುಗಿಸಿ, ಏಪ್ರಿಲ್ ಕೊನೆ ಅಥವಾ ಮೇನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡಗಳು ಚಿಂತನೆ ನಡೆಸಿದ್ದವು. ಈಗ ಆ ಚಿತ್ರಗಳ ಬಿಡುಗಡೆ ದಿನಾಂಕದಲ್ಲೂ ಏರುಪೇರಾಗುವ ಸಾಧ್ಯತೆ ಇದೆ. ಈ ಸಮಸ್ಯೆ ಬರೀ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಬೇರೆ ಭಾಷೆ ಚಿತ್ರರಂಗಗಳ ಮೇಲೂ ಪರಿಣಾಮ ಬೀರಿದೆ. ಅಕ್ಷಯ್ ಕುಮಾರ್ ಅಭಿನಯದ ‘ಸೂರ್ಯವಂಶಿ’ ಮಾ.24ಕ್ಕೆ ಬಿಡುಗಡೆಯಾಗಬೇಕಿತ್ತು. ಇನ್ನು ರಣವೀರ್ ಸಿಂಗ್ ಅಭಿನಯದ ‘83’ ಏ.10ಕ್ಕೆ ಬಿಡುಗಡೆ ಎಂದು ಹೇಳಲಾಗಿತ್ತು. ಈ ಎರಡೂ ಚಿತ್ರಗಳು ಈಗ ಮುಂದಕ್ಕೆ ಹೋಗಿವೆ. ಇನ್ನು ಜಾಗತಿಕ ಮಟ್ಟದಲ್ಲಿ ಹೇಳುವುದಾದರೆ, ಜಗತ್ತಿನಾದ್ಯಂತ ಸಾಕಷ್ಟು ಕುತೂಹಲ ಕೆರಳಿಸಿದ್ದ ಡಿಸ್ನಿ ನಿರ್ವಣದ ‘ಮ್ಯುಲಾನ್’, ‘ಫಾಸ್ಟ್ 9’, ‘ಬ್ಲಾಕ್ ವಿಡೋ’ ಮುಂತಾದ ಚಿತ್ರಗಳು ಸಹ ಮುಂದಕ್ಕೆ ಹೋಗಿವೆ. ಇನ್ನು ಹಿಂದಿಯ ‘ಬ್ರಹ್ಮಾಸ್ತ್ರ’, ‘ಪೃಥ್ವಿರಾಜ್’, ‘ತಖ್ತ್’, ಇಂಗ್ಲಿಷ್​ನ ‘ಮಿಷನ್ ಇಂಪಾಸಿಬಲ್ 7’ ಚಿತ್ರಗಳ ಚಿತ್ರೀಕರಣ ಮುಂದೂಡಲ್ಪಟ್ಟಿದೆ.

ಚಿತ್ರರಂಗಕ್ಕಿಲ್ಲ ಆಕ್ಷನ್ ಸದ್ಯಕ್ಕೆ ಬರೀ ಕಟ್...

ಮಾರ್ಚ್ ಮೊದಲ ಶುಕ್ರವಾರ ‘ದ್ರೋಣ’, ‘ಒಂದು ಶಿಕಾರಿಯ ಕಥೆ’ ಮುಂತಾದ ಚಿತ್ರಗಳು ಬಿಡುಗಡೆಯಾಗಿದ್ದವು. ಇನ್ನು ಎರಡನೆಯ ವಾರಕ್ಕೆ ‘ಶಿವಾರ್ಜುನ’, ‘ನರಗುಂದ ಬಂಡಾಯ’ ಚಿತ್ರಗಳು ಬಿಡುಗಡೆಯಾದವು. ಈ ಎಲ್ಲ ಸಿನಿಮಾಗಳಿಗೆ ಚಿತ್ರ ಪ್ರದರ್ಶನ ಬಂದ್ ಆಗಿದ್ದರಿಂದ ಬಿಸಿ ಮುಟ್ಟಿದೆ.

ಚೇತನ್ ನಾಡಿಗೇರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net