ಕಿರುತೆರೆಗೂ ಕರೊನಾ ಆತಂಕ

tv 16 mar 20
Published on

ಬೆಂಗಳೂರು: ಕರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಸಂಸ್ಥೆ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮಾ.19ರಿಂದ 31ರವರೆಗೂ ಸಿನಿಮಾ, ಧಾರಾವಾಹಿ, ವೆಬ್ ಸೀರಿಸ್, ಸಾಕ್ಷ್ಯಚಿತ್ರ ಸೇರಿ ಎಲ್ಲ ತರಹದ ಚಿತ್ರೀಕರಣಕ್ಕೆ ತಡೆಯೊಡ್ಡಿದೆ.

ಕರೊನಾ ವೈರಸ್​ಗೆ ಹೆದರಿ ಹಲವು ಚಿತ್ರತಂಡಗಳು ಸ್ವಯಂಪ್ರೇರಿತವಾಗಿ ಚಿತ್ರೀಕರಣ ಚಟುವಟಿಕೆಗಳನ್ನು ನಿಲ್ಲಿಸಿದ್ದವು. ಆದರೆ, ಕಿರುತೆರೆ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳ ಚಿತ್ರೀಕರಣ ಮುಂದುವರಿದಿತ್ತು. ಚಿತ್ರರಂಗಕ್ಕೆ ಹೋಲಿಸಿದರೆ ಕಿರುತೆರೆಯ ಚಟುವಟಿಕೆಗಳು ಜಾಸ್ತಿ ಇರುವುದರ ಜತೆಗೆ, ಸಾವಿರಾರು ಕಾರ್ವಿುಕರು ಒಳಗೊಂಡಿರುವುದರಿಂದ ಅವರಿಗೆ ಸಮಸ್ಯೆ ಆಗಬಾರದು ಎಂಬ ನಿಟ್ಟಿನಲ್ಲಿ ಎಲ್ಲ ರೀತಿಯ ಚಿತ್ರೀಕರಣ ನಿಲ್ಲಿಸುವ ಮಹತ್ವದ ನಿರ್ಧಾರವನ್ನು ಐಎಂಪಿಪಿಎ ತೆಗೆದುಕೊಂಡಿದೆ. ಚಿತ್ರತಂಡಗಳೇನೋ ಚಿತ್ರೀಕರಣವನ್ನು ಮುಂದಕ್ಕೆ ಹಾಕಬಹುದು. ಆದರೆ, ಪ್ರತಿದಿನ ಪ್ರಸಾರವಾಗುವ ಧಾರಾವಾಹಿಗಳ ಚಿತ್ರೀಕರಣ ತಡೆದರೆ, ಪ್ರಸಾರಕ್ಕೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆ ಬರಬಹುದು. ಅದೇ ಕಾರಣಕ್ಕೆ ಇನ್ನು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.

ಮುಂದಿನ ಮೂರು ದಿನಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಕಂತುಗಳನ್ನು ಚಿತ್ರೀಕರಣ ಮಾಡಿಟ್ಟುಕೊಂಡು, ಮಾ.19ರಿಂದ 31ರವರೆಗೆ ಚಿತ್ರೀಕರಣ ಚಟುವಟಿಕೆಗಳನ್ನು ನಿಲ್ಲಿಸಲು ಆದೇಶಿಸಿದೆ. ಚಿತ್ರೀಕರಣವನ್ನು ಪುನಃ ಪ್ರಾರಂಭಿಸುವ ಕುರಿತು ಮಾ.30ರಂದು ಸಭೆ ನಡೆಸಿ, ಆ ಸಭೆಯಲ್ಲಿ ಮುಂದಿನ ತೀರ್ವನವನ್ನು ತೆಗೆದುಕೊಳ್ಳುವುದಾಗಿ ಐಎಂಪಿಪಿಎ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net