ಚಿತ್ರೀಕರಣ ಪ್ರಗತಿಯಲ್ಲಿದೆ; ಮೂರನೆ ಅಲೆಯ ನಡುವೆಯೂ ಚಿತ್ರರಂಗ ಸಕ್ರಿಯ

xdfdfsdf
Published on
ಕರೊನಾ ಮೂರನೆಯ ಅಲೆ ದಿನೇದಿನೇ ಹೆಚ್ಚಾಗುತ್ತಿದೆ. ಜನಬಾರದೆ, ರಾಜ್ಯದ ಹಲವು ಚಿತ್ರಮಂದಿರಗಳು ಈಗಾಗಲೇ ಪ್ರದರ್ಶನ ನಿಲ್ಲಿಸಿವೆ. ಚಿತ್ರಪ್ರದರ್ಶನ ನಿಂತಿರಬಹುದು. ಆದರೆ, ಇದರಿಂದ ಚಿತ್ರರಂಗದ ಚಟುವಟಿಕೆಗಳು ಮಾತ್ರ ಸ್ತಬ್ಧವಾಗಿಲ್ಲ ಎನ್ನುವುದು ಸ್ವಲ್ಪ ನೆಮ್ಮದಿ ಕೊಡುವ ವಿಷಯ. ಪ್ರದರ್ಶನ ಹೊರತುಪಡಿಸಿ ಮಿಕ್ಕಂತೆ ಚಿತ್ರೀಕರಣ, ಪೋಸ್ಟ್- ಪ್ರೊಡಕ್ಷನ್ ಕೆಲಸಗಳು ಎಲ್ಲವೂ ನಿರಂತರವಾಗಿ ನಡೆಯುತ್ತಲೇ ಇವೆ...

|ಚೇತನ್ ನಾಡಿಗೇರ್

ಕರೊನಾ ಮೊದಲನೇ ಮತ್ತು ಎರಡನೇ ಅಲೆಗಳು ಶುರುವಾದಾಗ ಮೊದಲ ಪೆಟ್ಟು ಬಿದ್ದಿದ್ದೇ ಚಿತ್ರೀಕರಣ ಚಟುವಟಿಕೆಗಳಿಗೆ. ಕರೊನಾ ಹೆಚ್ಚಾಗುತ್ತಿದೆ ಎನ್ನುವಷ್ಟರಲ್ಲೇ ಹಲವರು ತಮ್ಮ ಚಿತ್ರಗಳ ಚಿತ್ರೀಕರಣವನ್ನು ನಿಲ್ಲಿಸಿದರು. ಆ ನಂತರ ಸರ್ಕಾರ ಸಹ ಲಾಕ್​ಡೌನ್ ಘೋಷಿಸಿದ್ದರಿಂದ, ಚಿತ್ರರಂಗ ಕೆಲವು ತಿಂಗಳುಗಳ ಕಾಲ ಯಾವುದೇ ಚಟುವಟಿಕೆ ಇಲ್ಲದೆ ಸ್ಥಬ್ಧವಾಯಿತು. ಆದರೆ, ಈ ಬಾರಿ ಕರೊನಾ ತಾರಕಕ್ಕೇರುತ್ತಿದ್ದರೂ, ಚಿತ್ರಮಂದಿರಗಳು ಬಂದ್ ಆಗುತ್ತಿದ್ದರೂ, ಚಿತ್ರೀಕರಣ ಮತ್ತು ಇತರೆ ಚಟುವಟಿಕೆಗಳು ಮಾತ್ರ ಅವ್ಯಾಹತವಾಗಿ ಸಾಗಿವೆ.

ಕ್ಯಾಮೆರಾ ಮುಂದೆ ಜನಪ್ರಿಯ ನಟರು: ಹೌದು, ಹಿರಿತೆರೆಯಷ್ಟೇ ಅಲ್ಲ, ಕಿರುತೆರೆಯ ಚಿತ್ರೀಕರಣ ಯಾವುದೇ ಸಮಸ್ಯೆ ಇಲ್ಲದೆಯೇ ನಡೆದಿದೆ. ಇತ್ತೀಚೆಗಷ್ಟೇ, ಶಿವರಾಜಕುಮಾರ್ ಅಭಿನಯದ ‘ಭೈರಾಗಿ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ‘ವೇದ’ ನಡೆಯುತ್ತಿದೆ. ಪ್ರಜ್ವಲ್ ಅಭಿನಯದ ‘ಮಾಫಿಯಾ’, ಶರಣ್ ಅಭಿನಯದ ‘ಗುರು ಶಿಷ್ಯರು’, ಜಗ್ಗೇಶ್ ಅಭಿನಯದ ‘ಗುರು ರಾಘವೇಂದ್ರ ಸ್ಟೋರ್ಸ್’, ರಿಷಭ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ ‘ಕಾಂತಾರ’, ಸತೀಶ್ ನೀನಾಸಂ ಅಭಿನಯದ ‘ಮ್ಯಾಟ್ನಿ’ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಸಹ ಮುಗಿದಿದೆ.

ಬರೀ ಬೆಂಗಳೂರಿಗೆ ಸೀಮಿತವಲ್ಲ: ಇದು ಬರೀ ಜನಪ್ರಿಯ ನಟರ ಚಿತ್ರಗಳ ಪಟ್ಟಿಯಷ್ಟೇ. ಮಿಕ್ಕಂತೆ, ಅದೆಷ್ಟು ಹೊಸಬರ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆಯೋ ನಿಖರವಾಗಿ ಹೇಳುವುದು ಕಷ್ಟ. ಮೂಲಗಳ ಪ್ರಕಾರ, ಕರೊನಾ ಹಾವಳಿಯ ನಡುವೆಯೂ 30ಕ್ಕೂ ಹೆಚ್ಚು ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆಯಂತೆ. ಬರೀ ಬೆಂಗಳೂರಷ್ಟೇ ಅಲ್ಲ, ತೀರ್ಥಹಳ್ಳಿಯಲ್ಲಿ ‘ಗುರು ರಾಘವೇಂದ್ರ ಸ್ಟೋರ್ಸ್’ ತಂಡ ಬೀಡುಬಿಟ್ಟಿದ್ದರೆ, ‘ಕಾಂತಾರ’ ಚಿತ್ರದ ಚಿತ್ರೀಕರಣ ಉಡುಪಿಯಲ್ಲಿ ನಡೆಯುತ್ತಿದೆ. ಈ ಎರಡೂ ಚಿತ್ರಗಳನ್ನು ಹೊಂಬಾಳೆ ಫಿಲಂಸ್​ನ ವಿಜಯ್ಕುಮಾರ್ ಕಿರಗಂದೂರು ನಿರ್ವಿುಸುತ್ತಿದ್ದು, ಎರಡೂ ಚಿತ್ರತಂಡಗಳಿಗೆ ಇನ್ಶೂರೆನ್ಸ್ ಮಾಡಿಸಿದ್ದಾರೆ ಎನ್ನಲಾಗಿದೆ.

ಮಾರ್ಗಸೂಚಿಗಳ ಪ್ರಕಾರ ಚಿತ್ರೀಕರಣ: ಮಿಕ್ಕಂತೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡುವುದು, ಅಂತರ ಕಾಪಾಡಿಕೊಳ್ಳುವುದು ... ಹೀಗೆ ಮಾರ್ಗಸೂಚಿಗಳನ್ನು ಅನುಸರಿಸಿ ಚಿತ್ರೀಕರಣ ಮಾಡುವುದು ಮುಂದುವರೆದಿರುವುದರಿಂದ ಚಿತ್ರೀಕರಣಕ್ಕೆ ಅಥವಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ವಾರಾಂತ್ಯ ಮತ್ತು ತಡರಾತ್ರಿ ಚಿತ್ರೀಕರಣ ಮಾಡುವಂತಿಲ್ಲ ಎಂಬುದು ಬಿಟ್ಟರೆ, ಕರೊನಾ ಮೂರನೆಯ ಅಲೆಯ ಭಯದಿಂದ ಯಾವೊಂದು ಚಿತ್ರ ಸಹ ನಿಂತಿರುವ ಸುದ್ದಿ ಇಲ್ಲ. ಕಳೆದ ಎರಡು ವರ್ಷಗಳಲ್ಲಿ ಕರೊನಾ ಮತ್ತು ಲಾಕ್​ಡೌನ್​ನಿಂದ ಚಿತ್ರರಂಗ ಕೆಲವು ತಿಂಗಳುಗಳಿಗಾದರೂ ಯಾವುದೇ ಚಟುವಟಿಕೆ ಇಲ್ಲದೆ ಸ್ಥಬ್ಧವಾಗಿತ್ತು. ಆದರೆ, ಈ ಬಾರಿ ಅಂತಹ ಸಮಸ್ಯೆ ಇಲ್ಲ. ಲಾಕ್​ಡೌನ್ ಮಾಡುವ ತೀವ್ರತೆ ಇಲ್ಲದಿರುವುದು ಒಂದು ಪ್ರಮುಖ ಕಾರಣವಾದರೆ, ಚಿತ್ರರಂಗದ ಹಲವು ಕಲಾವಿದರು ಮತ್ತು ಕಾರ್ವಿುಕರು ಎರಡೆರಡು ಡೋಸ್ ಲಸಿಕೆ ಪಡೆದಿರುವುದು ಸಹ ಯಾವುದೇ ಸಮಸ್ಯೆ ಇಲ್ಲದೆ ಚಿತ್ರೀಕರಣ ಮಾಡುತ್ತಿರುವುದಕ್ಕೆ ಸಾಧ್ಯವಾಗುತ್ತಿದೆ.

ಮತ್ತೆ ಹೊಸ ಚಿತ್ರಗಳ ಬಿಡುಗಡೆ?: ಕಳೆದ ಶುಕ್ರವಾರದಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿದ್ದವು. ಹೊಸ ಚಿತ್ರಗಳು ಪ್ರದರ್ಶನಕ್ಕಿಲ್ಲದೆ, ಹಳೆಯ ಚಿತ್ರಗಳನ್ನು ನೋಡುವವರಿಲ್ಲದೆ, ಎಲ್ಲಕ್ಕಿಂತ ಹೆಚ್ಚಾಗಿ ವಾರಾಂತ್ಯ ಕರ್ಫ್ಯೂನಿಂದಾಗಿ ... ಕೆಲವು ದಿನಗಳ ಕಾಲ ಚಿತ್ರಮಂದಿರಗಳನ್ನು ಬಂದ್ ಮಾಡಿದರೇ ಒಳ್ಳೆಯದು ಎಂಬ ತೀರ್ವನಕ್ಕೆ ಹಲವರು ಬಂದಿದ್ದರು. ಅದು ಈ ವಾರ ಇನ್ನಷ್ಟು ಮುಂದುವರೆದಿದೆ. ಇಂದಿನಿಂದ ಮೈಸೂರಿನ ಪ್ರಮುಖ ಚಿತ್ರಮಂದಿರಗಳು ತಾತ್ಕಾಲಿಕವಾಗಿ ಪ್ರದರ್ಶನ ನಿಲ್ಲಿಸಲಿವೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಮತ್ತೆ ಚಿತ್ರಮಂದಿರಗಳು ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ತೆರವುಗೊಳಿಸಬೇಕೆಂದು ಹಲವು ಚಿತ್ರಮಂದಿರಗಳ ಬೇಡಿಕೆಯಾಗಿದ್ದು, ಈ ಸಂಬಂಧ ಇಂದು ಸರ್ಕಾರದ ಮಹತ್ವದ ಸಭೆ ಇದೆ. ರಾತ್ರಿ ಮತ್ತು ವಾರಾಂತ್ಯದ ಕರ್ಫ್ಯೂ ರದ್ದು ಮಾಡುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡರೆ, ಆಗ ಹೊಸ ಚಿತ್ರಗಳು ಬಿಡುಗಡೆಯಾಗಿ, ಚಿತ್ರಮಂದಿರಗಳು ಸಹ ಶೇ. 50ರಷ್ಟು ಹಾಜರಾತಿಯ ನಡುವೆಯೇ ಚಿತ್ರಪ್ರದರ್ಶನ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net