75ನೇ ವಯಸ್ಸಲ್ಲಿ ಸ್ಲೋ ಮೋಷನ್​ನಲ್ಲಿ ನಡೆಯೋ ನನ್ನನ್ನು... ಎಲ್ಲರ ಮನಸ್ಸು ಗೆದ್ದ ರಜಿನಿಕಾಂತ್​ ಮಾತುಗಳು! Rajinikanth

Rajinikanth
Published on

Rajinikanth : ಸೂಪರ್ ಸ್ಟಾರ್ ರಜಿನಿಕಾಂತ್ 75ನೇ ಇಳಿ ವಯಸ್ಸಿನಲ್ಲೂ ಸರಣಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಸಾಲು ಸಾಲು ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇತ್ತೀಚೆಗೆ, ಪುಸ್ತಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಜಿನಿಕಾಂತ್​ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ತಮಿಳು ಬರಹಗಾರ ಸು. ವೆಂಕಟೇಶನ್ ಅವರ 'ವೇಲ್‌ಪರಿ' ಪುಸ್ತಕ ದಾಖಲೆಯ ಒಂದು ಲಕ್ಷ (100,000) ಪ್ರತಿಗಳು ಮಾರಾಟವಾದ ಹಿನ್ನೆಲೆಯಲ್ಲಿ ಚೆನ್ನೈನ ಕಲೈವಾನರ್ ಅರಂಗಂನಲ್ಲಿ ವೆಂಕಟೇಶನ್​ ಅವರಿಗೆ ಸನ್ಮಾನ ಸಮಾರಂಭ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ನಟ ರಜಿನಿಕಾಂತ್, ನಿರ್ದೇಶಕ ಶಂಕರ್, ಟಿವಿ ನಿರೂಪಕ ಗೋಪಿನಾಥ್ ಮತ್ತು ಇತರರು ಭಾಗವಹಿಸಿ ಪುಸ್ತಕದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಮಾತನಾಡಿದ ರಜಿನಿಕಾಂತ್, ಜ್ಞಾನವು ಏನು ಮಾತನಾಡಬೇಕೆಂದು ಹೇಳಿದರೆ, ನಿಮ್ಮ ಪ್ರತಿಭೆ ಹೇಗೆ ಮಾತನಾಡಬೇಕೆಂದು ಹೇಳುತ್ತದೆ. ಅದೇ ರೀತಿ ಮಾತನಾಡಬೇಕೆ ಬೇಡವೇ ಎಂದು ವೇದಿಕೆ ಹೇಳುತ್ತದೆ. ಆದರೆ, ನಿಮ್ಮ ಅನುಭವ ಮಾತ್ರ ಏನು ಮಾತನಾಡಬೇಕು ಮತ್ತು ಏನು ಮಾತನಾಡಬಾರದು ಎಂಬುದನ್ನು ಹೇಳುತ್ತದೆ. ಇತ್ತೀಚೆಗೆ, ಒಂದು ಕಾರ್ಯಕ್ರಮದಲ್ಲಿ ನಾನು ಮಾಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಯಿತು. ನಾವು ಏನೇ ಹೇಳಿದರೂ, ಎಚ್ಚರಿಕೆಯಿಂದ ಮಾತನಾಡಬೇಕು. ಏನು ಹೇಳಬೇಕು, ಎಷ್ಟು ಹೇಳಬೇಕು ಮತ್ತು ಹೇಗೆ ಹೇಳಬೇಕು ಎಂಬುದು ಕೂಡ ಜ್ಞಾನದ ವಿಷಯ ಎಂದು ರಜನಿಕಾಂತ್ ಹೇಳಿದರು.

ಮಾತು ಮುಂದುವರಿಸಿದ ರಜಿನಿಕಾಂತ್, ನಿರ್ದೇಶಕ ಶಿವಕುಮಾರ್ ಮತ್ತು ಕಮಲ್ ಹಾಸನ್ ಅವರಂತಹ ಜನರನ್ನು ಇಂತಹ ಕಾರ್ಯಕ್ರಮಗಳಿಗೆ ಆಹ್ವಾನಿಸಬೇಕು. ಏಕೆಂದರೆ, ಅವರು ನನಗಿಂತ ಹೆಚ್ಚು ಬುದ್ಧಿವಂತರು. ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದಾಗ ನನಗೆ ಆಶ್ಚರ್ಯವಾಯಿತು. 75 ವರ್ಷ ವಯಸ್ಸಾಗಿರುವ ಮತ್ತು ಕೂಲಿಂಗ್ ಗ್ಲಾಸ್ ಧರಿಸಿ ನಿಧಾನಗತಿಯಲ್ಲಿ ನಡೆಯುವ ನನ್ನನ್ನು ಇಂತಹ ಕಾರ್ಯಕ್ರಮಕ್ಕೆ ಏಕೆ ಆಹ್ವಾನಿಸಲಾಯಿತು ಎಂದು ನಾನು ಆಶ್ಚರ್ಯಪಟ್ಟೆ ಎಂದು ನಕ್ಕರು.

ರಜಿನಿಕಾಂತ್​ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಸೂಪರ್ ಸ್ಟಾರ್ ಆಗಿರುವ ರಜಿನಿಕಾಂತ್​ ಅವರ ಸರಳತೆಯನ್ನು ನೋಡಿ ಎಲ್ಲರು ಪ್ರಶಂಸಿಸುತ್ತಿದ್ದಾರೆ. ತಮ್ಮನ್ನೇ ತಾವು ಟೀಕಿಸಿಕೊಂಡು ಇತರ ತಾರೆಯರನ್ನು ಹೊಗಳುವುದು ಸುಲಭವಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net