

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟಿ ಶ್ರುತಿ ಹಾಸನ್ ( Shruti Haasan ) ತಮ್ಮ ವೈಯಕ್ತಿಕ ಜೀವನದ ಕುರಿತು ಮುಕ್ತವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಮದುವೆ, ಸಂಗಾತಿ ಹಾಗೂ ತಾಯ್ತನದ ಕುರಿತು ಶ್ರುತಿ ಹಂಚಿಕೊಂಡಿರುವ ಹೊಸ ವಿಚಾರಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ.
ಸಕಲಕಲಾವಲ್ಲಭ ಕಮಲ್ ಹಾಸನ್ ಅವರ ಹಿರಿಯ ಪುತ್ರಿಯಾಗಿ ಕಲಾ ಕುಟುಂಬದಿಂದ ಬಂದ ಶ್ರುತಿ ಹಾಸನ್, ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದಾರೆ. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಮುಂಚೂಣಿ ನಾಯಕಿಯಾಗಿ ಹೊರಹೊಮ್ಮಿರುವ ಶ್ರುತಿ, ಗಾಯಕಿಯಾಗಿಯೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಾಲ ಕಲಾವಿದೆಯಾಗಿ ಸಿನಿಪಯಣ ಆರಂಭಿಸಿದ ಶ್ರುತಿ, ಏಳಂ ಅರಿವು, ಥ್ರೀ, ವೇದಾಲಂ ಹಾಗೂ ಸಿಂಗಂ 3 ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರ 'ಇನಿಮೇಲ್' ಆಲ್ಬಮ್ ಹಾಗೂ ಮಣಿರತ್ನಂ ನಿರ್ದೇಶನದ 'ಥಗ್ ಲೈಫ್' ಚಿತ್ರದ "ಸ್ಪೇಸ್ ನಾಯಕ" ಹಾಡು ಯುವಜನರ ಮನಸೂರೆಗೊಂಡಿದೆ.
ಶ್ರುತಿ ಹಾಸನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾವುದೇ ಮುಚ್ಚುಮರೆ ಇಲ್ಲದೆ ನೇರವಾಗಿ ಮಾತನಾಡುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ತಮ್ಮ ಲವ್ ಸ್ಟೋರಿ ಹಾಗೂ ಬ್ರೇಕ್‌ಅಪ್ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದರು. ತಮ್ಮದೇಯಾದ ಸ್ಪಷ್ಟ ನಿಲುವುಗಳನ್ನು ಹೊಂದಿರುವ ಅವರು, ಜೀವನದ ಹಾದಿಯಲ್ಲಿ ಎದುರಾದ ಅನುಭವಗಳ ಬಗ್ಗೆಯೂ ಸದಾ ಮುಕ್ತ ಮನಸ್ಸಿನಿಂದ ಮಾತನಾಡುತ್ತಾ ಬಂದಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆ ಹಾಗೂ ಸಂಗಾತಿಯ ಕುರಿತು ಮಾತನಾಡಿರುವ ಶ್ರುತಿ ಹಾಸನ್, ಸಮಾಜದ ರೂಢಿಗತ ಕಟ್ಟುಪಾಡುಗಳಿಂದ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೀವನದಲ್ಲಿ ಒಬ್ಬ ಸಂಗಾತಿಯೊಂದಿಗೆ ಒಟ್ಟಾಗಿ ಜೀವಿಸುವುದು ಮುಖ್ಯವೇ ಹೊರತು, ಅದಕ್ಕೆ ಮದುವೆ ಎನ್ನುವ ಕಾಗದಪತ್ರದ ಬಂಧನ ಅಥವಾ ವಿಧಿ-ವಿಧಾನಗಳು ಅನಿವಾರ್ಯವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇವರ ಈ ದಿಟ್ಟ ಹೇಳಿಕೆಯು ಈಗ ಚರ್ಚೆಗೆ ಗ್ರಾಸವಾಗಿದ್ದು, ಅನೇಕರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮದುವೆಯ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಿದ್ದರೂ, ತಾಯ್ತನದ ಅನುಭವ ಪಡೆಯುವ ತೀವ್ರ ಆಸೆಯನ್ನು ಶ್ರುತಿ ಹಾಸನ್ ಮುಕ್ತವಾಗಿ ಹೊರಹಾಕಿದ್ದಾರೆ. ಭವಿಷ್ಯದಲ್ಲಿ ತಾಯಿಯಾಗುವ ಅಥವಾ ಮಗುವನ್ನು ದತ್ತು ಪಡೆದು ಬೆಳೆಸುವ ಆಲೋಚನೆ ತಮಗಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮಹಿಳೆಯೊಬ್ಬರ ಸ್ವಾತಂತ್ರ್ಯ ಮತ್ತು ವೈಯಕ್ತಿಕ ಆಯ್ಕೆಗಳಿಗೆ ಹಿಡಿದ ಕನ್ನಡಿಯಂತಿರುವ ಶ್ರುತಿ ಅವರ ಆಲೋಚನೆಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್ ಆಗಿರುವ ಮತ್ತು ವಿಭಿನ್ನ ಆಲೋಚನೆಗಳಿಂದ ಗುರುತಿಸಿಕೊಂಡಿರುವ ಶ್ರುತಿ ಹಾಸನ್ ಅವರ ಈ ಹೊಸ ಹೇಳಿಕೆಗಳು ನೆಟ್ಟಿಗರ ಗಮನ ಸೆಳೆದಿವೆ. ಬದುಕಿನ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ಷರತ್ತುಗಳ ಮೇಲೆ ಬದುಕುವ ಅವರ ದಿಟ್ಟತನಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವೈಯಕ್ತಿಕ ಬದುಕಿನ ಈ ನಿರ್ಧಾರಗಳು ಸದ್ಯ ಇಂಟರ್ನೆಟ್‌ನಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿವೆ, (ಏಜೆನ್ಸಿಸ್).