ನಾಯಿ ಕಡಿತವೇನು ದೊಡ್ಡ... ನಟಿ ನಿವೇತಾ ಪೇತುರಾಜ್​ ಹೇಳಿಕೆ ವಿರುದ್ಧ ತಿರುಗಿಬಿದ್ದ ಜನರು! Nivetha Pethuraj

ನಟಿ ನಿವೇತಾ ಪೇತುರಾಜ್​
ನಟಿ ನಿವೇತಾ ಪೇತುರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಬೀದಿ ನಾಯಿಗಳ ಬಗ್ಗೆ ಒಂದಿಲ್ಲೊಂದು ಒಂದು ಚರ್ಚೆ ನಡೆಯುತ್ತಲೇ ಇದೆ
  • ಸಾಮಾನ್ಯ ಜನರು ಮತ್ತು ಶ್ವಾನ ಪ್ರಿಯರ ನಡುವೆ ವಾದ-ವಿವಾದ ನಡೆಯುತ್ತಲೇ ಇದೆ
  • ಇದೀಗ ನಟಿ ನಿವೇತಾ ಪೇತುರಾಜ್ ಮಾಡಿರುವ ಕಾಮೆಂಟ್‌ಗಳು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ
ಚೆನ್ನೈ: ಇತ್ತೀಚೆಗೆ ಬೀದಿ ನಾಯಿಗಳ ಬಗ್ಗೆ ಒಂದಿಲ್ಲೊಂದು ಒಂದು ಚರ್ಚೆ ನಡೆಯುತ್ತಲೇ ಇದೆ. ಅದಕ್ಕೆ ಕಾರಣ ಬೀದಿ ನಾಯಿ ದಾಳಿ ಪ್ರಕರಣಗಳು. ಒಂದೆಡೆ ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡುತ್ತಿದ್ದರೆ, ಮತ್ತೊಂದೆಡೆ ಶ್ವಾನ ಪ್ರಿಯರು ಅದನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಮಾನ್ಯ ಜನರು ಮತ್ತು ಶ್ವಾನ ಪ್ರಿಯರ ನಡುವೆ ವಾದ-ವಿವಾದ ನಡೆಯುತ್ತಲೇ ಇದೆ. ಹೇಳುವುದಕಷ್ಟೇ ಶ್ವಾನ ಪ್ರಿಯರು ಆದರೆ, ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳುವುದಿಲ್ಲ ಎಂಬ ಟೀಕೆಗಳೂ ಇವೆ. ಇದೇ ಸಂದರ್ಭದಲ್ಲಿ, ಕಾಲಿವುಡ್​ ನಟಿ ನಿವೇತಾ ಪೇತುರಾಜ್ ( Nivetha Pethuraj )​ ಮಾಡಿರುವ ಕಾಮೆಂಟ್‌ಗಳು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.
ತಮಿಳು ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ನಿವೇತಾ ಪೇತುರಾಜ್, ಇಂದು ಬೆಳಗ್ಗೆ ಚೆನ್ನೈನಲ್ಲಿ ನಡೆದ ಬೀದಿ ನಾಯಿ ರಕ್ಷಣಾ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿವೇತಾ ಹೇಳಿದ ಮಾತುಗಳು ಇದೀಗ ಚರ್ಚೆಯ ವಿಷಯವಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಿವೇತಾ, ಎಲ್ಲರೂ ನಾಯಿ ಕಡಿತ ಪ್ರಕರಣಗಳನ್ನು ಭೂತಗನ್ನಡಿಯಿಂದಲೇ ನೋಡುತ್ತಿದ್ದಾರೆ. ಆದರೆ, ಅದು ಅಷ್ಟು ದೊಡ್ಡ ವಿಷಯವೇನಲ್ಲ. ನಾಯಿ ಕಡಿತವನ್ನೇ ದೊಡ್ಡದಾಗಿ ಕಾಣುವ ಮೂಲಕ ನಾವು ಜನರಲ್ಲಿ ಭಯ ಸೃಷ್ಟಿಸುತ್ತಿದ್ದೇವೆ. ಇನ್ನೂ ಅನೇಕ ಕ್ರೂರ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಿವೆ. ಆದರೆ, ಅವುಗಳ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ನಾಯಿ ಕಡಿತದಿಂದ ಉಂಟಾಗುವ ರೇಬೀಸ್ ಅಪಾಯಕಾರಿ ಕಾಯಿಲೆಯಾಗಿದೆ ಆದರೆ, ಅದರ ಬಗ್ಗೆ ಭಯವನ್ನು ಹರಡುವ ಬದಲು ಜನರಿಗೆ ಪರಿಹಾರದ ಬಗ್ಗೆ ತಿಳಿಸಬೇಕು. ಅದನ್ನು ಬಿಟ್ಟು ಬೀದಿ ನಾಯಿಗಳನ್ನು ಕೊಲ್ಲುವುದೇ ಪರಿಹಾರವಲ್ಲ ಎಂದು ನಿವೇತಾ ಹೇಳಿದರು.
ನಿವೇತಾ ಹೇಳಿಕೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಅವರ ವಿರುದ್ಧ ಮುಗಿಬಿದ್ದಿದ್ದಾರೆ. ನೀವು ದುಬೈನಲ್ಲಿ ಇರುವಾಗ ಇಲ್ಲಿನ ಸಮಸ್ಯೆಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತೀರಿ? ನೀವು ನಿಮ್ಮ ಕಾರುಗಳನ್ನು ಬಿಟ್ಟು ರಾತ್ರಿಯಲ್ಲಿ ರಸ್ತೆಗಳಲ್ಲಿ ಓಡಾಡಿದರೆ, ಬೀದಿ ನಾಯಿಗಳ ಹಾವಳಿ ಬಗ್ಗೆ ನಿಮಗೆ ಅರ್ಥವಾಗುತ್ತದೆ ಎಂದು ಅನೇಕ ನೆಟ್ಟಿಗರು ನಿವೇತಾಗೆ ಖಡಕ್​ ಉತ್ತರ ಕೊಡುತ್ತಿದ್ದಾರೆ. ಇದಕ್ಕೆಲ್ಲ ನಿವೇತಾ ಏನು ಉತ್ತರ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
ಅಂದಹಾಗೆ, ಇತ್ತೀಚೆಗೆ ನಿವೇತಾ ಪೇತುರಾಜ್ ಅವರು ದುಬೈ ಉದ್ಯಮಿ ರಜಿತ ಇಬ್ರಾನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. 2026ರ ಜನವರಿಯಲ್ಲಿ ಅವರು ವಿವಾಹವಾಗಲಿದ್ದಾರೆ. ಆ ನಂತರ ಅವರು ದುಬೈನಲ್ಲಿ ನೆಲೆಸಲಿದ್ದಾರೆ ಎಂದು ವರದಿಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net