ಭವ್ಯ ರಾಮ ಮಂದಿರದಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ: ಧರ್ಮ ಧ್ವಜದ ವಿಶೇಷತೆ ಹೀಗಿದೆ ನೋಡಿ... Ram Mandir

ರಾಮ ಮಂದಿರದಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ
ರಾಮ ಮಂದಿರದಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿ ಮೋದಿ
Published on

ಪ್ರಮುಖ ಮುಖ್ಯಾಂಶಗಳು

  • ಹಿಂದುಗಳ ಹೆಮ್ಮೆಯ ಪ್ರತೀಕ ರಾಮ ಮಂದಿರದಲ್ಲಿ ಧ್ವಜಾರೋಹಣ ಸಮಾರಂಭ
  • ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೇಸರಿ ಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ
  • ರಾಮ ಮತ್ತು ಸೀತೆಯ ವಿವಾಹ ಪಂಚಮಿಯ ಮುಹೂರ್ತದಂದೇ ಧ್ವಜಾರೋಹಣ
  • ಭಗವಾನ್ ರಾಮನಿಗೆ ಸಂಬಂಧಿಸಿದ ಎಲ್ಲ ಗುಣಗಳನ್ನು ಪ್ರತಿನಿಧಿಸುವ ಕೇಸರಿ ಧ್ವಜ
ಅಯೋಧ್ಯೆ: ಹಿಂದುಗಳ ಹೆಮ್ಮೆಯ ಪ್ರತೀಕವಾಗಿರುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾಗಿ ನಿರ್ಮಾಣವಾಗಿರುವ ರಾಮ ಮಂದಿರದ ( Ram Mandir ) ಇಂದಿನ "ಧ್ವಜಾರೋಹಣ" ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಧ್ವಜ ಹಾರಿಸಿದರು.
ಪ್ರಧಾನಿ ಮೋದಿ ಅವರು 22 ಅಡಿ ಎತ್ತರದ ಧಾರ್ಮಿಕ ಧ್ವಜವನ್ನು ಹಾರಿಸಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದರು. ತ್ರಿಕೋನ ಕೇಸರಿ ಧ್ವಜವು ಸೂರ್ಯನ ಸಂಕೇತವನ್ನು ಹೊಂದಿದ್ದು, ಇದು ಶಾಶ್ವತ ಶಕ್ತಿ, ದೈವಿಕ ತೇಜಸ್ಸು, ಸದ್ಗುಣ ಮತ್ತು ಜ್ಞಾನೋದಯ ಸೇರಿದಂತೆ ಭಗವಾನ್ ರಾಮನಿಗೆ ಸಂಬಂಧಿಸಿದ ಎಲ್ಲ ಗುಣಗಳನ್ನು ಪ್ರತಿನಿಧಿಸುತ್ತದೆ.
'ಓಂ' ಚಿಹ್ನೆಯನ್ನು ಸಹ ಧ್ವಜದಲ್ಲಿ ಮುದ್ರಿಸಲಾಗಿದೆ. ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರದ 'ಶಿಖರ'ದ ಮೇಲೆ ಧ್ವಜವನ್ನು ಇರಿಸಲಾಗಿದೆ. ಈ ಧ್ವಜಾರೋಹಣ ಸಮಾರಂಭವು ರಾಮ ಮತ್ತು ಸೀತೆಯ ವಿವಾಹ ಪಂಚಮಿಯ ಮುಹೂರ್ತಕ್ಕೆ ಹೊಂದಿಕೆಯಾಗುವ ದಿನದಂದೇ ನಡೆಯಿತು ಎಂದು ಪ್ರಧಾನ ಮಂತ್ರಿ ಕಚೇರಿ ( ಪಿಎಂಒ) ತಿಳಿಸಿದೆ. ಅಲ್ಲದೆ, ಈ ದಿನಾಂಕವು 17ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ನಿರಂತರ ಧ್ಯಾನ ಮಾಡಿದ್ದ ಒಂಬತ್ತನೇ ಸಿಖ್ ಗುರು ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ಸಹ ಸೂಚಿಸುತ್ತದೆ ಪಿಎಂಒ ಹೇಳಿದೆ.
ಪ್ರಸಿದ್ಧ ಕಾಶಿ ವಿದ್ವಾಂಸ ಗಣೇಶೇಶ್ವರ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಅಯೋಧ್ಯೆ, ಕಾಶಿ ಮತ್ತು ದಕ್ಷಿಣ ಭಾರತದ 108 ಆಚಾರ್ಯರು ಧ್ವಜಾರೋಹಣ ಆಚರಣೆಗಳನ್ನು ನೆರವೇರಿಸಿದರು. ಇಂದು ಮಧ್ಯಾಹ್ನ 2.30 ರವರೆಗೆ QR-ಕೋಡೆಡ್ ಪಾಸ್‌ಗಳನ್ನು ಹೊಂದಿರುವ ಆಹ್ವಾನಿತ ಅತಿಥಿಗಳಿಗೆ ಮಾತ್ರ ದೇವಾಲಯವನ್ನು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಧ್ವಜಾರೋಹಣ ಸಮಾರಂಭ ಹಿನ್ನೆಲೆಯಲ್ಲಿ ಅಯೋಧ್ಯೆ ನಗರ ಮದವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದ್ದು, ಹೂವು ಹಾಗೂ ವಿದ್ಯುತ್​ ದೀಪಗಳಿಂದ ಅಲಂಕೃತಗೊಂಡಿದೆ. ಇಡೀ ನಗರ ಭೂಲೋಕದ ಸ್ವರ್ಗದಂತೆ ಭಾಸವಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕಾಗಿ ರಾಮ ಜನ್ಮಭೂಮಿ ಟ್ರಸ್ಟ್ ಸುಮಾರು 6,000 ಅತಿಥಿಗಳನ್ನು ಆಹ್ವಾನಿಸಿದೆ.
ಅಂದಹಾಗೆ, ಪ್ರಧಾನಿ ಮೋದಿ ಅವರು 2024, ಜನವರಿ 22ರಂದು ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆ ನೆರವೇರಿಸಿದ್ದರು. ಸುಪ್ರೀಂ ಕೋರ್ಟ್ 2.77 ಎಕರೆ ವಿವಾದಿತ ಭೂಮಿಯನ್ನು ದೇವಾಲಯ ನಿರ್ಮಾಣಕ್ಕೆ ಮಂಜೂರು ಮಾಡಿದ ಸುಮಾರು ಒಂದು ವರ್ಷದ ನಂತರ ಅಂದರೆ, 2020ರ ಆಗಸ್ಟ್​ ತಿಂಗಳಲ್ಲಿ ಪ್ರಧಾನಿ ಮೋದಿ ರಾಮ ಮಂದಿರಕ್ಕೆ ಅಡಿಪಾಯ ಹಾಕಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net