ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್-ಕಾವ್ಯಾ: ಏನಿದು ಹೊಸ ಪದ್ಧತಿ? ಇಲ್ಲಿದೆ ಸಂಪೂರ್ಣ ಮಾಹಿತಿ... Self-Respect Marriage

ತಮಿಳುನಾಡಿನ ಖ್ಯಾತ ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸಾಮಿ ಅವರು ಆರಂಭಿಸಿದ 'ಸ್ವಾಭಿಮಾನಿ ಚಳವಳಿ'ಯ (Self-Respect Movement) ಮೂಲ ಆಶಯವೇ ಈ ವಿವಾಹ ಪದ್ಧತಿಯಾಗಿದೆ.
Self-Respect Marriage
ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಸೆಲ್ಫ್ ರೆಸ್ಪೆಕ್ಟ್ ಮ್ಯಾರೇಜ್ ಆದ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್!
Published on: 

ಚೆನ್ನೈ: ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ತಂಡದ ಸಹ-ಮಾಲೀಕಿ, ಉದ್ಯಮಿ ಕಾವ್ಯಾ ಮಾರನ್ ನವೆಂಬರ್ 11ರಂದು ಗ್ರೀಸ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ತಾರಾ ಜೋಡಿಯ ಮದುವೆಯು ಕೇವಲ ಅದ್ಧೂರಿತನಕ್ಕೆ ಮಾತ್ರವಲ್ಲದೆ, ಅವರು ಆಯ್ಕೆ ಮಾಡಿಕೊಂಡ ವಿಶಿಷ್ಟ ವಿವಾಹ ಪದ್ಧತಿಯಿಂದಾಗಿ ( Self-Respect Marriage ) ಇಡೀ ದೇಶದ ಗಮನ ಸೆಳೆದಿದೆ.

ಹೌದು, ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು ಹಾಗೂ ಪುರೋಹಿತರ ಮಂತ್ರಘೋಷಗಳ ಬದಲಿಗೆ, ಸಮಾನತೆ ಮತ್ತು ಪರಸ್ಪರ ಗೌರವವನ್ನು ಸಾರುವ 'ಸ್ವಾಭಿಮಾನಿ ವಿವಾಹ' (Self-Respect Marriage) ಪದ್ಧತಿಯ ಮೂಲಕ ಇವರಿಬ್ಬರೂ ಸತಿ-ಪತಿಗಳಾಗಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ನಡೆದ ಈ ವಿವಾಹದ ಫೋಟೋಗಳು ವೈರಲ್ ಆದ ಬೆನ್ನಲ್ಲೇ, ಏನಿದು ಸ್ವಾಭಿಮಾನಿ ವಿವಾಹ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.

Also Read
ಕಾವ್ಯಾ-ಅನಿರುದ್ಧ್ ಅದ್ಧೂರಿ ವಿವಾಹ: ಗ್ರೀಸ್‌ನಲ್ಲಿ ನಡೆದ ಈ ರಾಯಲ್ ವೆಡ್ಡಿಂಗ್‌ಗೆ ಖರ್ಚಾಗಿದ್ದೆಷ್ಟು? ಮದುವೆ ವಿಶೇಷತೆಗಳೇನು? Kavya Maran-Anirudh Ravichander wedding
Self-Respect Marriage

ನವೆಂಬರ್ 10ರಂದು ನಿಶ್ಚಿತಾರ್ಥ ಸಮಾರಂಭದೊಂದಿಗೆ ಗ್ರೀಸ್‌ನಲ್ಲಿ ವಿವಾಹ ಮಹೋತ್ಸವಕ್ಕೆ ಚಾಲನೆ ಸಿಕ್ಕಿತ್ತು. ಮರುದಿನ ನಡೆದ ಮದುವೆಯಲ್ಲಿ ಅನಿರುದ್ಧ್ ಅವರು ಕಾವ್ಯಾ ಅವರ ಕುತ್ತಿಗೆಗೆ ಸರ (ಚೈನ್) ತೊಡಿಸುತ್ತಿರುವ ಹಾಗೂ ಇಬ್ಬರೂ ಒಂದೇ ರೀತಿಯ ಪೆಂಡೆಂಟ್‌ಗಳನ್ನು ಬದಲಾಯಿಸಿಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇಲ್ಲಿ ಮಿಸ್​ ಆಗಿದ್ದೇನೆಂದರೆ, ತಾಳಿ ಕಟ್ಟುವ ಸಂಪ್ರದಾಯ. ಈ ವಿಶೇಷ ಮದುವೆಯ ಕುರಿತು ಈ ಕುರಿತು ಎಕ್ಸ್ (X) ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಡಿಎಂಕೆ ಐಟಿ ವಿಂಗ್ ಕಾರ್ಯದರ್ಶಿ ಡಾ. ಟಿ.ಆರ್.ಬಿ. ರಾಜಾ ಅವರು, "ಹೌದು, ಕಾವ್ಯಾ ಮತ್ತು ಅನಿರುದ್ಧ್ ಪರಸ್ಪರ ಹಾರ ಬದಲಾಯಿಸಿಕೊಂಡರು. ತಲೈವರ್ (ಎಂ.ಕೆ. ಸ್ಟಾಲಿನ್) ಅವರು ಕಾವ್ಯಾ ಅವರಿಗೆ ಸರವನ್ನು ನೀಡಿದರೆ, ಸೂಪರ್‌ಸ್ಟಾರ್ (ರಜನಿಕಾಂತ್) ಅವರು ಅನಿರುದ್ಧ್ ಅವರಿಗೆ ಸರವನ್ನು ಹಸ್ತಾಂತರಿಸಿದರು. ವಧು-ವರರು ಪರಸ್ಪರ ಸರ ಬದಲಾಯಿಸಿಕೊಳ್ಳುವ ಮೂಲಕ ಕುಟುಂಬಸ್ಥರು ಮತ್ತು ಸ್ನೇಹಿತರ ಆಶೀರ್ವಾದದೊಂದಿಗೆ ಸ್ವಾಭಿಮಾನಿ ವಿವಾಹವಾದರು" ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಏನಿದು ಸ್ವಾಭಿಮಾನಿ ವಿವಾಹ?

ಅಷ್ಟಕ್ಕೂ ಏನಿದು 'ಸ್ವಾಭಿಮಾನಿ ವಿವಾಹ'? ತಮಿಳುನಾಡಿನ ಖ್ಯಾತ ಸಮಾಜ ಸುಧಾರಕ ಪೆರಿಯಾರ್ ಇ.ವಿ. ರಾಮಸಾಮಿ ಅವರು ಆರಂಭಿಸಿದ 'ಸ್ವಾಭಿಮಾನಿ ಚಳವಳಿ'ಯ (Self-Respect Movement) ಮೂಲ ಆಶಯವೇ ಈ ವಿವಾಹ ಪದ್ಧತಿಯಾಗಿದೆ. ಜಾತಿ ತಾರತಮ್ಯ, ಸಾಮಾಜಿಕ ಶ್ರೇಣೀಕರಣ ಮತ್ತು ಪುರುಷಪ್ರಧಾನ ಸಂಪ್ರದಾಯಗಳನ್ನು ವಿರೋಧಿಸಿ, ವ್ಯಕ್ತಿಗತ ಘನತೆ ಮತ್ತು ಸ್ತ್ರೀ-ಪುರುಷ ಸಮಾನತೆಯನ್ನು ಎತ್ತಿಹಿಡಿಯುವುದು ಇದರ ಪ್ರಮುಖ ಉದ್ದೇಶವಾಗಿದೆ. ಈ ಪದ್ಧತಿಯ ಪ್ರಕಾರ ಮದುವೆಗೆ ಪುರೋಹಿತರಾಗಲಿ, ಅಗ್ನಿಸಾಕ್ಷಿಯಾಗಲಿ ಅಥವಾ ಸಂಕೀರ್ಣವಾದ ಧಾರ್ಮಿಕ ಆಚರಣೆಗಳಾಗಲಿ ಬೇಕಾಗಿಲ್ಲ. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಧು-ವರರು ಪರಸ್ಪರ ಒಪ್ಪಿಗೆಯನ್ನು ಘೋಷಿಸಿ, ಹಾರ, ಉಂಗುರ ಅಥವಾ ಸರವನ್ನು ಬದಲಾಯಿಸಿಕೊಳ್ಳುವ ಮೂಲಕ ಸರಳವಾಗಿ ಮತ್ತು ಅರ್ಥಪೂರ್ಣವಾಗಿ ದಾಂಪತ್ಯಕ್ಕೆ ಕಾಲಿಡಬಹುದು.

ಈ ಸ್ವಾಭಿಮಾನಿ ವಿವಾಹಕ್ಕೆ ಕಾನೂನಿನ ಮಾನ್ಯತೆಯೂ ಇದೆ ಎಂಬುದು ವಿಶೇಷ. 1967ರಲ್ಲಿ ತಮಿಳುನಾಡು ಸರ್ಕಾರವು ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 'ಸೆಕ್ಷನ್ 7-ಎ' ಅನ್ನು ಸೇರ್ಪಡೆಗೊಳಿಸಿತು. ಇದರ ಅನ್ವಯ, ಯಾವುದೇ ಧಾರ್ಮಿಕ ವಿಧಿವಿಧಾನಗಳಿಲ್ಲದೆ ಕೇವಲ ಬಂಧು-ಮಿತ್ರರ ಸಮ್ಮುಖದಲ್ಲಿ ಹಾರ ಅಥವಾ ಉಂಗುರ ಬದಲಾಯಿಸಿಕೊಂಡು ಘೋಷಿಸಿಕೊಳ್ಳುವ ಸ್ವಾಭಿಮಾನಿ ವಿವಾಹಗಳಿಗೆ ಸಂಪೂರ್ಣ ಕಾನೂನುಬದ್ಧ ಮಾನ್ಯತೆ ನೀಡಲಾಗಿದೆ. ಗಂಡು-ಹೆಣ್ಣಿನ ನಡುವೆ ಮೇಲು-ಕೀಳು ಎಂಬ ಭಾವನೆ ಇಲ್ಲದೆ, ಇಬ್ಬರೂ ಸಮಾನರು ಎಂಬ ಸಂದೇಶವನ್ನು ಸಾರುವ ಈ ಪ್ರಗತಿಪರ ಪದ್ಧತಿಯನ್ನು ಅನಿರುದ್ಧ್ ಮತ್ತು ಕಾವ್ಯಾ ತಮ್ಮ ಜೀವನದ ಅತ್ಯಂತ ಮಹತ್ವದ ಘಟ್ಟದಲ್ಲಿ ಅಳವಡಿಸಿಕೊಂಡಿರುವುದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Also Read
ಅನಿರುದ್ಧ್-ಕಾವ್ಯಾ ಮದುವೆ ಸಂಭ್ರಮದಲ್ಲಿ ರಜನಿಕಾಂತ್ ಭರ್ಜರಿ ಡ್ಯಾನ್ಸ್! ವಿಡಿಯೋ ವೈರಲ್...Rajani dance
Self-Respect Marriage

ತಮ್ಮ ವೃತ್ತಿಜೀವನದಲ್ಲಿ ಸದಾ ಸುದ್ದಿಯಲ್ಲಿರುವ ಅನಿರುದ್ಧ್ ಮತ್ತು ಕಾವ್ಯಾ, ತಮ್ಮ ಪ್ರೇಮಕಥೆಯನ್ನು ಮಾತ್ರ ಅತ್ಯಂತ ಗೌಪ್ಯವಾಗಿಟ್ಟಿದ್ದರು. 2025ರಲ್ಲಿ ಯುಕೆ ಮೂಲದ ಟ್ರಾವೆಲ್ ವ್ಲಾಗರ್ ಒಬ್ಬರು ನ್ಯೂಯಾರ್ಕ್ ಬೀದಿಗಳಲ್ಲಿ ಯೂಟ್ಯೂಬ್ ಲೈವ್ ಸ್ಟ್ರೀಮ್ ಮಾಡುತ್ತಿದ್ದಾಗ, ಇವರಿಬ್ಬರೂ ಜೊತೆಯಾಗಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಆಕಸ್ಮಿಕವಾಗಿ ಸೆರೆಯಾಗಿತ್ತು. ಅಂದಿನಿಂದ ಇವರಿಬ್ಬರ ಡೇಟಿಂಗ್ ವದಂತಿಗಳು ಕಾಡ್ಗಿಚ್ಚಿನಂತೆ ಹಬ್ಬಿದ್ದವು. ಆದರೆ, ಜೂನ್ 2025ರಲ್ಲಿ ಈ ವದಂತಿಗಳನ್ನು ತಳ್ಳಿಹಾಕಿದ್ದ ಅನಿರುದ್ಧ್, "ಮದುವೆಯಾ? ಹಹ್ಹಾ.. ಸುಮ್ಮನೆ ವದಂತಿ ಹಬ್ಬಿಸಬೇಡಿ" ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದರು. ಕಡೆಗೂ ಅಕ್ಟೋಬರ್ 2026ರಲ್ಲಿ ಕಾವ್ಯಾ ಅವರ ಪೋಷಕರಾದ ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ ಅವರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಮಗಳ ಆರತಕ್ಷತೆಗೆ ಆಹ್ವಾನ ನೀಡಿದಾಗ ಮದುವೆ ಸುದ್ದಿ ಅಧಿಕೃತಗೊಂಡಿತ್ತು.

ಗ್ರೀಸ್‌ನಲ್ಲಿ ನಡೆದ ಈ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಸಿನಿಮಾ, ರಾಜಕೀಯ ಮತ್ತು ಉದ್ಯಮ ಕ್ಷೇತ್ರದ ದಿಗ್ಗಜರು ಸಾಕ್ಷಿಯಾಗಿದ್ದರು. ಅನಿರುದ್ಧ್ ಅವರ ಸೋದರಮಾವ ಆಗಿರುವ ಸೂಪರ್‌ಸ್ಟಾರ್ ರಜನಿಕಾಂತ್, ಪತ್ನಿ ಲತಾ ಹಾಗೂ ಪುತ್ರಿ ಐಶ್ವರ್ಯಾ ರಜನಿಕಾಂತ್ ಅವರೊಂದಿಗೆ ಗ್ರೀಸ್‌ಗೆ ತೆರಳಿ ನವಜೋಡಿಗೆ ಆಶೀರ್ವದಿಸಿದರು. ಮತ್ತೊಂದೆಡೆ, ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ಅವರಿಗೆ ಸಂಬಂಧಿಕರಾಗಿರುವ ತಮಿಳುನಾಡು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್, ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹಾಗೂ ದಯಾನಿಧಿ ಮಾರನ್ ಸೇರಿದಂತೆ ಇಡೀ ಕುಟುಂಬ ಸಂಭ್ರಮದಲ್ಲಿ ಭಾಗಿಯಾಗಿತ್ತು. ಮದುವೆಯ ಬಳಿಕ ಕಾವ್ಯಾ ಜತೆಗಿನ ಸುಂದರ ಫೋಟೋ ಹಂಚಿಕೊಂಡಿರುವ ಅನಿರುದ್ಧ್, "ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಸಂಗಾತಿ, ಇಡೀ ಜೀವನಕ್ಕಾಗಿ 11.11" ಎಂದು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.

Also Read
"ಜೀವಮಾನವಿಡೀ ಜೊತೆಯಾಗಿರುವ ಸಂಗಾತಿ": ಗ್ರೀಸ್‌ನಲ್ಲಿ ಸಪ್ತಪದಿ ತುಳಿದ ಅನಿರುದ್ಧ್- ಕಾವ್ಯಾ; ಮದುವೆ ಫೋಟೋಗಳು ವೈರಲ್! Anirudh Weds Kavya
Self-Respect Marriage

ಚಿತ್ರರಂಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ಜೋಡಿ ಈಗ ಪವರ್ ಕಪಲ್ ಆಗಿ ಹೊರಹೊಮ್ಮಿದೆ. '3', 'ಜೈಲರ್', 'ವಿಕ್ರಮ್', 'ಲಿಯೋ' ಮತ್ತು 'ಜವಾನ್' ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಸಂಗೀತ ನೀಡಿರುವ ಅನಿರುದ್ಧ್ ಇಂದು ಭಾರತದ ಅತ್ಯಂತ ಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದಾರೆ. ಇತ್ತ ಸನ್ ಗ್ರೂಪ್ ಅಧ್ಯಕ್ಷ ಕಲಾನಿಧಿ ಮಾರನ್ ಅವರ ಪುತ್ರಿಯಾಗಿರುವ ಕಾವ್ಯಾ ಮಾರನ್, ಸನ್ ಟಿವಿ ನೆಟ್‌ವರ್ಕ್ ಹಾಗೂ ಐಪಿಎಲ್‌ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸಹ-ಮಾಲೀಕಿಯಾಗಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಗ್ರೀಸ್‌ನಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿರುವ ಈ ಜೋಡಿ, ಇದೀಗ ತವರಿನಲ್ಲಿ ಭರ್ಜರಿ ಆರತಕ್ಷತೆಗೆ ಸಜ್ಜಾಗಿದೆ. ಇದೇ ನವೆಂಬರ್ 21ರಂದು ಚೆನ್ನೈನ ಪ್ರತಿಷ್ಠಿತ ಐಟಿಸಿ ಗ್ರ್ಯಾಂಡ್ ಚೋಳ (ITC Grand Chola) ಹೋಟೆಲ್‌ನಲ್ಲಿ ಅದ್ಧೂರಿ ವೆಡ್ಡಿಂಗ್ ರಿಸೆಪ್ಶನ್ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ಚಿತ್ರರಂಗದ ತಾರೆಯರು, ಪ್ರಮುಖ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಕ್ರಿಕೆಟ್ ಲೋಕದ ಗಣ್ಯರು ಆಗಮಿಸುವ ನಿರೀಕ್ಷೆಯಿದ್ದು, ವರ್ಷದ ಅತ್ಯಂತ ದೊಡ್ಡ ತಾರಾ ಸಮಾಗಮಕ್ಕೆ ಚೆನ್ನೈ ಸಾಕ್ಷಿಯಾಗಲಿದೆ, (ಏಜೆನ್ಸೀಸ್​).

Related Stories