ಚೆನ್ನೈ: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್. ಅವರ ಸ್ಟೈಲ್, ನಟನೆ ಮತ್ತು ಡ್ಯಾನ್ಸ್ಗೆ ಪ್ರತ್ಯೇಕ ಅಭಿಮಾನಿ ಬಳಗವೇ ಇದೆ. ಇದೀಗ ತಮ್ಮ ಸೋದರಳಿಯ, ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಮದುವೆಯಲ್ಲಿ ರಜನಿಕಾಂತ್ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಗ್ರೀಸ್ನಲ್ಲಿ ನಡೆದ ಅನಿರುದ್ಧ್ ಮತ್ತು ಉದ್ಯಮಿ ಕಾವ್ಯಾ ಮಾರನ್ ಅವರ ವಿವಾಹ ಸಮಾರಂಭದಲ್ಲಿ ರಜನಿಕಾಂತ್ ಮನಸಿಲಾಯೋ ಹಾಡಿಗೆ ನೃತ್ಯ ಮಾಡಿರುವ ದೃಶ್ಯ ಅಭಿಮಾನಿಗಳ ಗಮನ ಸೆಳೆದಿದೆ.
ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡದ ಸಹಮಾಲೀಕರಾದ ಕಾವ್ಯಾ ಮಾರನ್ ನವೆಂಬರ್ 11, 2026ರಂದು ಗ್ರೀಸ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಈ ಡೆಸ್ಟಿನೇಷನ್ ವೆಡ್ಡಿಂಗ್ನ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅನಿರುದ್ಧ್ ಕೂಡ ತಮ್ಮ ಮದುವೆಯ ಸುಂದರ ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಮದುವೆ ಸಂಭ್ರಮದ ವೇಳೆ ರಜನಿಕಾಂತ್ ನೃತ್ಯ ಮಾಡಿರುವ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ತಮ್ಮದೇ ನಟನೆಯ ‘ವೆಟ್ಟೈಯನ್’ ಸಿನಿಮಾದ ‘ಮನಸಿಲಾಯೋ’ ಹಾಡಿಗೆ ಅವರು ಖುಷಿಯಿಂದ ಹೆಜ್ಜೆ ಹಾಕಿದ್ದಾರೆ. ವಿಶೇಷವೆಂದರೆ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವುದು ಅನಿರುದ್ಧ್ ಅವರೇ. ಮದುವೆಯ ಸಂಭ್ರಮದಲ್ಲಿ ನವಜೋಡಿ ಕೂಡ ರಜನಿಕಾಂತ್ ಅವರ ನೃತ್ಯವನ್ನು ಸಂಭ್ರಮದಿಂದ ವೀಕ್ಷಿಸುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ. ಕೆಲವು ವರದಿಗಳ ಪ್ರಕಾರ, ಅವರು ಪೆಟ್ಟಾ ಚಿತ್ರದ ಹಾಡುಗಳಿಗೂ ಹೆಜ್ಜೆ ಹಾಕಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಸೂಪರ್ಸ್ಟಾರ್ ಅವರ ಸಂಭ್ರಮದ ಕ್ಷಣಗಳನ್ನು ಮೆಚ್ಚಿಕೊಂಡಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ತಮ್ಮ ವಿಶಿಷ್ಟ ಶೈಲಿಯಿಂದ ಗಮನ ಸೆಳೆಯುವ ರಜನಿಕಾಂತ್, ಕುಟುಂಬದ ಮದುವೆಯಲ್ಲಿ ಹೀಗೆ ಖುಷಿಯಿಂದ ನೃತ್ಯ ಮಾಡಿರುವುದು ಅಭಿಮಾನಿಗಳಿಗೆ ವಿಶೇಷ ಕ್ಷಣವಾಗಿದೆ.
ರಜನಿಕಾಂತ್ ಮತ್ತು ಅನಿರುದ್ಧ್ ನಡುವೆ ಕೇವಲ ಸಿನಿಮಾ ಕ್ಷೇತ್ರದ ಸಂಬಂಧವಷ್ಟೇ ಇಲ್ಲ, ಕುಟುಂಬದ ನಂಟೂ ಇದೆ. ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರ ಸಹೋದರಿಯೇ ಅನಿರುದ್ಧ್ ಅವರ ತಾಯಿ ಲಕ್ಷ್ಮಿ ರವಿಚಂದರ್. ಹೀಗಾಗಿ ಅನಿರುದ್ಧ್ ರಜನಿಕಾಂತ್ ಅವರ ಸೋದರಳಿಯ. ರಜನಿಕಾಂತ್ ನಟನೆಯ ಹಲವು ಸಿನಿಮಾಗಳಿಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪೆಟ್ಟಾ, ದರ್ಬಾರ್, ಜೈಲರ್ ಮತ್ತು ವೆಟ್ಟೈಯನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರಿಬ್ಬರ ವೃತ್ತಿಪರ ಸಹಯೋಗ ಗಮನ ಸೆಳೆದಿದೆ.
ಮದುವೆಯಲ್ಲಿ ಕಾವ್ಯಾ ಮಾರನ್ ಗುಲಾಬಿ ಛಾಯೆಯ ಲೆಹೆಂಗಾ ಧರಿಸಿದ್ದರು. ಅದಕ್ಕೆ ಹೊಂದುವಂತೆ ಸುಂದರ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅನಿರುದ್ಧ್ ಐವರಿ ಬಣ್ಣದ ಕುರ್ತಾ, ವೇಷ್ಟಿ ಹಾಗೂ ಕಸೂತಿ ಕೆಲಸವಿರುವ ಉದ್ದನೆಯ ಜಾಕೆಟ್ ಧರಿಸಿ ಮಿಂಚಿದ್ದರು. ನವಜೋಡಿಯ ಮದುವೆಯ ಫೋಟೋಗಳು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿವೆ. ಅನಿರುದ್ಧ್ ಅವರ ಮದುವೆಯ ಫೋಟೋಗೆ ನಟಿ ಪೂಜಾ ಹೆಗ್ಡೆ ಸೇರಿದಂತೆ ಹಲವು ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಅನಿರುದ್ಧ್ ತಮ್ಮ ಪೋಸ್ಟ್ಗೆ ‘My once in a lifetime, for a lifetime’ ಎಂದು ಬರೆದುಕೊಂಡಿದ್ದಾರೆ.
ಗ್ರೀಸ್ನಲ್ಲಿ ಮದುವೆಯಾದ ಬಳಿಕ ನವೆಂಬರ್ 21ರಂದು ಚೆನ್ನೈನಲ್ಲಿ ಅದ್ಧೂರಿ ಆರತಕ್ಷತೆ ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ವರದಿಯಾಗಿದೆ. ಚಿತ್ರರಂಗದ ನಟ-ನಟಿಯರು, ರಾಜಕೀಯ ನಾಯಕರು ಹಾಗೂ ಹಲವು ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈಗಾಗಲೇ ಮದುವೆಯ ಫೋಟೋಗಳು ಮತ್ತು ರಜನಿಕಾಂತ್ ಅವರ ಡ್ಯಾನ್ಸ್ ವಿಡಿಯೋ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಚೆನ್ನೈ ಆರತಕ್ಷತೆಯತ್ತ ಎಲ್ಲರ ಗಮನ ನೆಟ್ಟಿದೆ, (ಏಜೆನ್ಸೀಸ್).