

ಬೆಂಗಳೂರು: ಪಯಣದಲ್ಲಿರುವ ನಾಯಕಿ ಸ್ವಲ್ಪ ಎಚ್ಚರ ತಪ್ಪಿದ್ದರೂ ಯಾವುದೋ ದಾರಿ ಹಿಡಿದಿರಬೇಕಿತ್ತು ...ಹೌದು, ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಸ್ಫೂರ್ತಿ ಉಡಿಮನೆ ಸ್ವಲ್ಪದರಲ್ಲೇ ನಾಗರಹಾವಿನ ಕಡಿತದಿಂದ ಪಾರಾಗಿದ್ದಾರೆ.
ಇದೀಗ ಮೊದಲ ಹಂತದ ಶೂಟಿಂಗ್ ಮುಗಿಸಿರುವ ಚಿತ್ರತಂಡ ಕೆಲವು ದಿನಗಳ ಹಿಂದಷ್ಟೇ ನಡೆದಿರುವ ಈ ಸನ್ನಿವೇಶದ ಕುರಿತ ಮಾಹಿತಿಯನ್ನು ಹಂಚಿಕೊಂಡಿದೆ. ಖ್ಯಾತ ನಟ-ನಿರ್ದೇಶಕ ಕಂ ನಿರ್ವಪಕ ಕಾಶಿನಾಥ್ ಅವರ ಪುತ್ರ ಅಭಿಮನ್ಯು ನಾಯಕರಾಗಿ ಅಭಿನಯಿಸುತ್ತಿರುವ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರಕ್ಕೆ ನಿರ್ದೇಶಕ ಕಿರಣ್ ಸೂರ್ಯ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯರಾಗಿ ಸ್ಪೂರ್ತಿ ಉಡಿಮನೆ ಹಾಗೂ ವಿಜಯಶ್ರೀ ಕಲಬುರಗಿ ಅಭಿನಯಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವಿರಾಜಪೇಟೆಯ ಮನೆಯೊಂದರಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಚಿತ್ರತಂಡಕ್ಕೆ ನಾಗರಹಾವೊಂದು ಎದುರಾಗಿದ್ದು, ಅಲ್ಲಿದ್ದವರನ್ನೆಲ್ಲ ಕ್ಷಣಕಾಲ ಬೆಚ್ಚಿ ಬೀಳಿಸಿತ್ತಂತೆ.
‘ನನ್ನ ಹಾಗೂ ಮನೆಗೆಲಸದವಳ ಪಾತ್ರ ಇರುವ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಆಗ ನನ್ನ ಪಕ್ಕದಲ್ಲೇ ನಾಗರಹಾವೊಂದು ಕಾಣಿಸಿಕೊಂಡಿತ್ತು. ಕ್ಷಣಕಾಲ ಗಾಬರಿಯಾದರೂ ಬಳಿಕ ಅಲ್ಲೇ ಮತ್ತೆ ಶೂಟಿಂಗ್ ನಡೆಸಲಾಗಿದೆ’ ಎನ್ನುತ್ತಾ ಹಾವನ್ನು ಕಂಡ ಅನುಭವ ಹೇಳಿಕೊಳ್ಳುತ್ತಾರೆ ಸ್ಫೂರ್ತಿ.
ಇನ್ನು ಈ ಚಿತ್ರದ ಶೂಟಿಂಗ್ ವೇಳೆ ಕೆಲವು ರೋಚಕ ಘಟನೆಗಳು ಸಂಭವಿಸಿವೆಯಂತೆ. ‘ಇನ್ನೊಮ್ಮೆ ಅದೇ ಮನೆಯಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ಚಿತ್ರೀಕರಣಕ್ಕೆ ಬಳಸಿದ್ದ ದೊಡ್ಡ ಬಲ್ಬ್ ಸಿಡಿದಿತ್ತು. ಅದೃಷ್ಟವಶಾತ್ ಅದಕ್ಕೂ ಕೆಲವು ಸೆಕೆಂಡುಗಳ ಮುನ್ನ ನಾನು ಅಲ್ಲಿಂದ ಎದ್ದುಹೋಗಿದ್ದೆ’ ಎನ್ನುತ್ತಾರೆ ಸ್ಪೂರ್ತಿ. ‘ಸುದರ್ಶನ್ ಆರ್ಟ್ಸ್’
ಲಾಂಛನದಲ್ಲಿ ಎಂ.ಸಿ. ನಂದೀಶ್ ಗೌಡ ಹಾಗೂ ಜತಿನ್ ಜಿ. ಪಟೇಲ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಮಡಿಕೇರಿ ಹಾಗೂ ವಿರಾಜಪೇಟೆ ಸುತ್ತಮುತ್ತ 40 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಇನ್ನು ಮಾರ್ಚ್ ಕೊನೆಯಲ್ಲಿ ಈ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣ ಆರಂಭಿಸುವ ಯೋಜನೆ ಹಾಕಿಕೊಂಡಿದೆ. ಸಿನಿಮಾಗೆ ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಗಣೇಶ್ ನಾರಾಯಣ್ ಸಂಗೀತ ಸಂಯೋಜಿಸುತ್ತಿದ್ದಾರೆ. ಗೌತಮ್ ಮನು ಛಾಯಾಗ್ರಹಣ, ರವಿಚಂದ್ರನ್, ಗಣೇಶ್ ಸಂಕಲನ ಈ ಚಿತ್ರಕ್ಕಿದೆ.
2ನೇ ಅವಕಾಶದಲ್ಲೇ ಕಾಲಿವುಡ್ಗೆ ಪಯಣ
‘ಎಲ್ಲಿಗೆ ಪಯಣ ಯಾವುದೋ ದಾರಿ’ದ ನಾಯಕಿ ಸ್ಫೂರ್ತಿ ಉಡಿಮನೆ ಅವರಲ್ಲಿ ಮುಂದೆ ‘ಎಲ್ಲಿಗೆ ಪಯಣ?’ ಎಂದು ಕೇಳಿದರೆ, ಕಾಲಿವುಡ್ ಎನ್ನುತ್ತಾರೆ. ನೂರ್ದೀನ್ ನಿರ್ದೇಶನದಲ್ಲಿ ಅದಿತ್ ಅರುಣ್ ನಾಯಕನಾಗಿ ನಟಿಸಲಿರುವ ತಮಿಳು ಚಿತ್ರದಲ್ಲಿ ಸ್ಪೂರ್ತಿ ನಾಯಕಿ ಆಗಿ ಅಭಿನಯಿಸಲಿದ್ದಾರೆ. ‘ರೀಲ್ ಅಂದು ಪೋಚು’ ಎಂಬ ಶೀರ್ಷಿಕೆಯ ಈ ಚಿತ್ರಕ್ಕೆ ಕೆಲ ದಿನಗಳ ಬಳಿಕ ಚಿತ್ರೀಕರಣ ಆರಂಭವಾಗಲಿದೆ.