

ಈ ವರ್ಷ ಬಿಡುಗಡೆಯಾದ ಇಷ್ಟು ಚಿತ್ರಗಳ ಪೈಕಿ ಹೊಸಬರ ಪಾಲು ಎಂದಿನಂತೆ ದೊಡ್ಡದು. ಬಿಡುಗಡೆಯಾದ 100 ಚಿತ್ರಗಳ ಪೈಕಿ 70ಕ್ಕೂ ಹೆಚ್ಚು ಹೊಸಬರ ಚಿತ್ರಗಳಿವೆ. ಇನ್ನು ಸ್ಟಾರ್ಗಳ ವಿಷಯ ತೆಗೆದುಕೊಂಡರೆ, ಶಿವರಾಜಕುಮಾರ್ (ಭಜರಂಗಿ 2), ಪುನೀತ್ ರಾಜಕುಮಾರ್ (ಯುವರತ್ನ), ಸುದೀಪ್ (ಕೋಟಿಗೊಬ್ಬ 3), ಶ್ರೀಮುರಳಿ (ಮದಗಜ), ಗಣೇಶ್ (ಸಖತ್), ‘ದುನಿಯಾ’ ವಿಜಯ್ (ಸಲಗ), ಧ್ರುವ ಸರ್ಜಾ (ಪೊಗರು), ರಮೇಶ್ ಅರವಿಂದ್ (100), ಪ್ರೇಮ್ (ಪ್ರೇಮಂ ಪೂಜ್ಯಂ), ನಿಖಿಲ್ (ರೈಡರ್), ಕೃಷ್ಣ (ಶ್ರೀಕೃಷ್ಣಃಜಿಮೇಲ್ ಡಾಟ್ಕಾಮ್ ಅನೀಶ್ ತೇಜೇಶ್ವರ್ (ರಾಮಾರ್ಜುನ), ವಿನೋದ್ ಪ್ರಭಾಕರ್ (ಶ್ಯಾಡೋ), ಆದಿತ್ಯ (ಮುಂದುವರೆದ ಅಧ್ಯಾಯ), ಚಿರಂಜೀವಿ ಸರ್ಜಾ (ರಣಂ), ವಿಜಯ್ ರಾಘವೇಂದ್ರ (ಸೀತಾರಾಂ ಬಿನೋಯ್), ಯೋಗಿ (ಲಂಕೆ), ದಿಗಂತ್ (ಹುಟ್ಟುಹಬ್ಬದ ಶುಭಾಶಯಗಳು) ಮುಂತಾದ ಜನಪ್ರಿಯ ನಟರ ಒಂದೊಂದು ಚಿತ್ರಗಳು ಬಿಡುಗಡೆಯಾಗಿವೆ.
ಇನ್ನು, ರವಿಚಂದ್ರನ್ (ದೃಶ್ಯ2 ಮತ್ತು ಕನ್ನಡಿಗ), ಧನಂಜಯ್ (ರತ್ನನ್ ಪ್ರಪಂಚ ಮತ್ತು ಬಡವ ರಾಸ್ಕಲ್), ಪ್ರಜ್ವಲ್ (ಇನ್ಸ್ಪೆಕ್ಟರ್ ವಿಕ್ರಂ ಮತ್ತು ಅರ್ಜುನ್ ಗೌಡ), ಅಜೇಯ್ ರಾವ್ (ಕೃಷ್ಣ ಟಾಕೀಸ್ ಮತ್ತು ಲವ್ ಯೂ ರಚ್ಚು), ರಿಷಭ್ ಶೆಟ್ಟಿ (ಹೀರೋ ಮತ್ತು ಗರುಡ ಗಮನ ಋಷಭ ವಾಹನ) ಅಭಿನಯದ ಎರಡೆರಡು ಚಿತ್ರಗಳು ಬಿಡುಗಡೆಯಾಗಿವೆ. 100 ಪ್ಲಸ್ ಚಿತ್ರಗಳ ಪೈಕಿ ಎಲ್ಲ ಜನಪ್ರಿಯ ನಟರ ಚಿತ್ರಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, 30 ಚಿತ್ರಗಳು ಸಿಗುತ್ತವೆ. ಮಿಕ್ಕಂತೆ ಹೊಸಬರ 70 ಪ್ಲಸ್ ಚಿತ್ರಗಳು ಬಿಡುಗಡೆಯಾಗಿವೆ. ದುರಂತವೆಂದರೆ, ಇಷ್ಟು ಚಿತ್ರಗಳ ಪೈಕಿ ಯಾವೊಂದು ಚಿತ್ರ ಸಹ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ವಿಫಲವಾಗಿವೆ. ಈ ಚಿತ್ರಗಳ ನಿರ್ದೇಶಕರು, ನಿರ್ವಪಕರು, ನಾಯಕ-ನಾಯಕಿ, ತಂತ್ರಜ್ಞರು ಬಹುತೇಕ ಹೊಸಬರೇ. ಎಲ್ಲಿಂದ ಬಂದು ಎಲ್ಲಿಗೆ ಹೋದರು ಎಂದು ಗೊತ್ತಾಗದಂತೆ, ಇವರೆಲ್ಲ ಒಂದೊಂದು ಚಿತ್ರ ಮಾಡಿ ಮಾಯವಾಗಿದ್ದಾರೆ.
ಮಿಸ್ಸಿಂಗ್ ಇನ್ ಆ್ಯಕ್ಷನ್: ಸಿನಿಮಾಗಳು ರೆಡಿಯಿದ್ದರೂ ಬಿಡುಗಡೆ ಮುಂದಕ್ಕೆ ಹೋಗಿದ್ದರಿಂದ ಈ ವರ್ಷ ಕೆಲವು ನಟರು ದರ್ಶನ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಉಪೇಂದ್ರ, ಯಶ್, ರಕ್ಷಿತ್ ಶೆಟ್ಟಿ ಮತ್ತು ಶರಣ್ ಈ ವರ್ಷ ಮಿಸ್ ಆದವರು. ಈ ಪೈಕಿ ಯಶ್ ಅಭಿನಯದ ಚಿತ್ರ 3 ವರ್ಷದಿಂದ ಬಿಡುಗಡೆಯಾಗಿಲ್ಲ.
ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಸೂತಕದ ಛಾಯೆಯೇ ಹೆಚ್ಚಿತ್ತು. ಇದರ ಮಧ್ಯೆಯೂ ಕನ್ನಡಿಗರು ಖುಷಿಪಡುವ ಸಂಗತಿ ಎಂದರೆ, ಅದು ಸುದೀಪ್ ಬಣ್ಣ ಹಚ್ಚಿ 25 ವರ್ಷಗಳಾದ ಸಂಭ್ರಮದಲ್ಲಿ ದುಬೈನ ಭುರ್ಜ್ ಖಲೀಫಾದಲ್ಲಿ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಬಿಡುಗಡೆಯಾಯಿತು. 67ನೇ ರಾಷ್ಟ್ರಪ್ರಶಸ್ತಿ ಘೋಷಣೆಯಾಗಿ, ಈ ಪೈಕಿ ಕನ್ನಡಕ್ಕೆ ರಾಷ್ಟ್ರ ಮಟ್ಟದಲ್ಲಿ ಆರು ಪ್ರಶಸ್ತಿಗಳು ಸಿಕ್ಕಿದವು. ಪ್ರೇಮಿಗಳ ದಿನದಂದೇ ಕೃಷ್ಣ-ಮಿಲನಾ ಮದುವೆಯಾದರು. ನಂತರದ ದಿನಗಳಲ್ಲಿ ಚಂದನ್-ಕಾವ್ಯಾ ಗೌಡ, ಪ್ರಣೀತಾ-ನಿತಿನ್ ರಾಜು, ದಾನಿಶ್ ಸೇಠ್-ಅನ್ಯಾ, ‘ಬಹದ್ದೂರ್’ ಚೇತನ್-ಮಾನಸ ಮದುವೆಯಾಯಿತು. ‘ಬಿಗ್ ಬಾಸ್’ನ ಸೀಸನ್ 8ರಲ್ಲಿ ಮಂಜು ಪಾವಗಡ ಗೆದ್ದರು. ಕನಕಪುರ ರಸ್ತೆಯಲ್ಲಿ ಹೊಸ ಸ್ಟುಡಿಯೋ ನಿರ್ವಣಕ್ಕೆ ಉಮಾಪತಿ ಶ್ರೀನಿವಾಸ ಗೌಡ ಚಾಲನೆ ನೀಡಿದರು. ದೇವರಾಜ್ ಮತ್ತು ಪ್ರಕಾಶ್ ಬೆಳವಾಡಿ ರಾಜ್ಯೋತ್ಸವ ಪ್ರಶಸ್ತಿ ಪಡೆದರು. ಪುನೀತ್ ರಾಜಕುಮಾರ್ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಯಿತು.
ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸಂತೋಷಕ್ಕಿಂತ ದುಃಖವೇ ಜಾಸ್ತಿ. ಸಂತೋಷದ ಸಮಾರಂಭಗಳಾಗಿಲ್ಲ. ದಾಖಲೆ, ಹೆಗ್ಗಳಿಕೆ ಯಾವುದೂ ಇಲ್ಲ. ಅದರ ಬದಲು ಕನ್ನಡ ಚಿತ್ರರಂಗದ ಹಲವು ಜನಪ್ರಿಯ ಕಲಾವಿದರ ನಿಧನವಾರ್ತೆ ಕನ್ನಡಿಗರನ್ನು ಘಾಸಿಗೊಳಿಸಿದವು. ಅದರಲ್ಲೂ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ನಿಧನರಾದ ಪುನೀತ್ ರಾಜಕುಮಾರ್, ಬೈಕು ಅಪಘಾತದಲ್ಲಿ ಕೋಮಾಗೆ ಜಾರಿದ ಸಂಚಾರಿ ವಿಜಯ್ ನಿಧನದ ಶೋಕದಿಂದ ಕನ್ನಡಿಗರು ಇನ್ನೂ ಹೊರ ಬಂದಿಲ್ಲ. ಇನ್ನು, ನಿರ್ವಪಕರಾದ ರಾಮು, ಕೆಸಿಎನ್ ಚಂದ್ರಶೇಖರ್, ಸಮೀವುಲ್ಲಾ, ಕುಪ್ಪುಸ್ವಾಮಿ, ಚಂದ್ರಶೇಖರ್, ಬಿ. ವಿಜಯಕುಮಾರ್, ಕಲಾವಿದರಾದ ಪ್ರತಿಮಾ ದೇವಿ, ಜಯಂತಿ, ಬಿ.ಜಯಾ, ಜಿ.ಕೆ. ಗೋವಿಂದರಾವ್, ಶನಿ ಮಹದೇವಪ್ಪ, ಕೃಷ್ಣೇಗೌಡ, ಶಿವರಾಂ, ಸತ್ಯಜಿತ್, ‘ಶಂಖನಾದ’ ಅರವಿಂದ್, ‘ಬಿಗ್ ಬಾಸ್’ ಖ್ಯಾತಿಯ ಜಯಶ್ರೀ, ನಿರ್ದೇಶಕರಾದ ಕೆ.ವಿ. ರಾಜು, ರೇಣುಕಾಶರ್ವ, ತಿಪಟೂರು ರಘು, ಅಭಿರಾಮ್ ಮಂಜá-ನಾಥ್, ಡಿಸೈನರ್ ಮಸ್ತಾನ್ ಮುಂತಾದವರು ಈ ವರ್ಷ ಇನ್ನಿಲ್ಲವಾದರು.
ಯಾವುದೇ ವರ್ಷವಾಗಲೀ, ಯಾವುದೇ ಚಿತ್ರರಂಗವಾಗಲೀ, ಗೆಲುವಿನ (ಹಾಕಿದ ಬಂಡವಾಳ ಲಾಭದ ಸಮೇತ ವಾಪಸ್ಸಾಗುವುದು) ಪ್ರಮಾಣವೆಷ್ಟು ಎಂದರೆ ಶೇ. 10ರಷ್ಟು ಮಾತ್ರ. ಮಿಕ್ಕಂತೆ ಒಂದಿಷ್ಟು ಚಿತ್ರಗಳು ಆವರೇಜ್ (ಹಾಕಿದ ಬಂಡವಾಳ ಮರಳುವುದು) ಆದರೆ, ಇನ್ನೊಂದಿಷ್ಟು ಚಿತ್ರ ಗಳು ನಷ್ಟ ಅನುಭವಿಸುತ್ತವೆ. ಆದರೆ, ಈ ವರ್ಷದ ವಿಶೇಷತೆ ಯೆಂದರೆ, ಮೇಲೆ ಹೇಳಿದ ಬಹುತೇಕ ಚಿತ್ರಗಳು ಜನರಿಗೆ ಇಷ್ಟವಾಗಿದೆಯೋ ಇಲ್ಲವೋ ಎನ್ನುವುದು ಬೇರೆ ಮಾತು. ಆದರೆ, ಹಾಕಿದ ದುಡ್ಡಿಗೆ ಮೋಸವಾಗಿಲ್ಲ. ಕೆಲವು ಚಿತ್ರಗಳು ಚೆನ್ನಾಗಿಯೇ ಲಾಭ ಮಾಡಿವೆ. ಅದಕ್ಕೆ ಕಾರಣ, ಚಿತ್ರರಂಗ ಈಗ ಬರೀ ಚಿತ್ರಮಂದಿರ ಅಥವಾ ಸ್ಯಾಟಿಲೈಟ್ ಹಕ್ಕುಗಳನ್ನು ಮಾತ್ರ ನಂಬಿಕೊಂಡು ಕುಳಿತಿಲ್ಲ. ಅದಕ್ಕೆ ಬೇರೆಬೇರೆ ಆದಾಯದ ಮೂಲಗಳು ಸಿಕ್ಕಿವೆ. ಉದಾಹರಣೆಗೆ, ಡಿಜಿಟಲ್ (ಒಟಿಟಿ), ಪರಭಾಷೆಗಳಿಗೆ ಡಬ್ಬಿಂಗ್ ಹಕ್ಕುಗಳು. ಸ್ಟಾರ್ ಅಥವಾ ಜನಪ್ರಿಯ ನಟರ ಚಿತ್ರಗಳಿಗೆ ಈ ಸೌಲಭ್ಯಗಳು ಸಿಗುತ್ತಿರುವುದರಿಂದ ಸೇಫ್ ಆಗಿವೆ.