

| ಮಂಜು ಕೊಟಗುಣಸಿ ಬೆಂಗಳೂರು
ನಿರ್ದೇಶಕ: ಕಾರ್ತಿಕ್ ಸರಗೂರುನಿರ್ಮಾಣ: ಪುಷ್ಕರ್ ಫಿಲಂಸ್, ಪರಮ್ವಾ ಸ್ಟುಡಿಯೋಸ್, ಲಾಸ್ಟ್ ಆಂಡ್ ಫೌಂಡ್ ಫಿಲಂಸ್ ಪಾತ್ರವರ್ಗ: ಅರವಿಂದ ಅಯ್ಯರ್, ಆರೋಹಿ, ಪ್ರಿಯಾಂಕಾ ತಿಮ್ಮೇಶ್, ಅಚ್ಯುತ್ ಕುಮಾರ್
ಊಟಕ್ಕೆ ಉಪ್ಪು, ಹುಳಿ, ಖಾರ ಎಷ್ಟು ಮುಖ್ಯವೋ ಜೀವನಕ್ಕೂ ಪ್ರೀತಿ, ಬಾಂಧವ್ಯ ಅಷ್ಟೇ ಮುಖ್ಯ. ಊಟದಲ್ಲಿ ಈ ಮೂರು ಪದಾರ್ಥಗಳಲ್ಲಿ ಯಾವುದಾದರೊಂದು ಕೊಂಚ ಕಡಿಮೆ ಅನಿಸಿದರೂ ಅದರ ಹದ ತಪ್ಪುತ್ತದೆ. ಜೀವನಪ್ರೀತಿಯೂ ಹದವಾದ ಅಡುಗೆ ಇದ್ದಂತೆ. ಅದನ್ನು ಖುಷಿಯಿಂದ ಸವಿದರೆ ಮಾತ್ರ, ಆಹಾ ಎನಿಸುವುದು. ‘ಭೀಮಸೇನ ನಳಮಹಾರಾಜ’ ಚಿತ್ರದ ಎಳೆಯೂ ಇದೇ.
ಪ್ರೀತಿ ಮತ್ತು ಮುನಿಸಿನ ಹಳಿ ಮೇಲೆ ಸಾಗುವ ಒಂದು ಪಯಣ. ಇಲ್ಲಿ ಬೇಸರದ ಪಯಣವೂ ಇದೆ. ಇಷ್ಟಪಟ್ಟು ಬೇಕೆನಿಸುವ ಪ್ರೀತಿಯ ಪಯಣವೂ ಇದೆ. ಈ ಪಯಣಕ್ಕೆ ಭಕ್ಷ್ಯ ಭೋಜನದ ನಂಟು ಅಂಟಿಕೊಂಡಿದೆ. ಲತ್ತೇಶ (ಅರವಿಂದ್ ಅಯ್ಯರ್) ಒಬ್ಬ ಬಾಣಸಿಗ. ಕೈ ರುಚಿಯಿಂದಲೇ ಎಲ್ಲರ ಹೊಟ್ಟೆ ತುಂಬಿಸಿ ಮೊಗದಲ್ಲಿ ನಗು ಮೂಡಿಸುವಾತ. ಆತನ ಬದುಕಿಗೆ ಎಂಟ್ರಿ ಕೊಡುವವಳು ವೇದವಲ್ಲಿ (ಆರೋಹಿ). ಚಿಕ್ಕಂದಿನಲ್ಲಿ ಅಮ್ಮನನ್ನು ಕಳೆದುಕೊಂಡು, ಅಪ್ಪನಲ್ಲಿ ರಾಕ್ಷಸನನ್ನು ಕಂಡು, ಆತನ ವಿರುದ್ಧ ಕೆಂಡಕಾರುವ ವೇದ, ಲತ್ತೇಶನ ಸಾಂಗತ್ಯದ ಬಲೆಗೆ ಬೀಳುತ್ತಾಳೆ. ಪುಟಾಣಿ ಲಿಲ್ಲಿ ಎಂಬ ಮಗುವೂ ಆಗುತ್ತದೆ. ಒಂದಷ್ಟು ಏರಿಳಿತಗಳ ನಡುವೆ ಆ ಸಂಬಂಧದಲ್ಲಿ ಬಿರುಕೂ ಮೂಡುತ್ತದೆ. ಹಳಸಿದ ಸಂಬಂಧ ಅಪಘಾತಕ್ಕೆ ಎಡೆ ಮಾಡಿಕೊಡುತ್ತದೆ. ವೇದ ಹಳೆಯದನ್ನೆಲ್ಲ ಮರೆತು ಮಂಕಾಗುತ್ತಾಳೆ. ಆಕೆಯನ್ನು ಲತ್ತೇಶ ಹೇಗೆ ಮೊದಲಿನ ಸ್ಥಿತಿಗೆ ತರುತ್ತಾನೆ ಎಂಬುದೇ ಭೀಮಸೇನನ ಕಥಾಹಂದರ ಮತ್ತು ಹೋರಾಟ.
ಒಂದೆಳೆ ಕೇಳುತ್ತಿದ್ದಂತೆ ಇಷ್ಟೇನಾ ಕಥೆ ಎನ್ನುವಂತಿಲ್ಲ. ಒಂದಷ್ಟು ರೋಚಕ ತಿರುವುಗಳನ್ನು ಭೀಮಸೇನ ತನ್ನೊಳಗಿರಿಸಿಕೊಂಡಿದ್ದಾನೆ. ಚಿತ್ರದ ಮೊದಲ ಭಾಗದಲ್ಲಿ ಅಂದುಕೊಂಡಿದ್ದೆಲ್ಲ, ದ್ವಿತೀಯಾರ್ಧಕ್ಕೆ ಬಹುದೊಡ್ಡ ಟ್ವಿಸ್ಟ್ ಆಗಿ ನೋಡುಗರನ್ನು ಕುತೂಹಲಿಗಳನ್ನಾಗಿ ಮಾಡುತ್ತದೆ. ಅಲ್ಲಿಂದ ಇಡೀ ಸಿನಿಮಾ ಬೇರೆ ಮಗ್ಗುಲಿಗೆ ಹೊರಳುತ್ತದೆ. ಆರಂಭದಿಂದ ಕಥಾನಾಯಕನ ಕಣ್ಣೀರ ಕಥೆ ಕೇಳುತ್ತ ಸೈಲೆಂಟ್ ಆಗಿ ಕಾಣಿಸುವ ಸಾರಾ (ಪ್ರಿಯಾಂಕಾ ತಿಮ್ಮೇಶ್), ಚಿತ್ರ ಕೊನೇ ಹಂತಕ್ಕೆ ಬರುತ್ತಿದ್ದಂತೆ ಬೇರೆ ರೂಪ ತಾಳುತ್ತಾಳೆ. ಇಡೀ ಚಿತ್ರದಲ್ಲಿ ಸಂಗೀತದ ಪಾತ್ರ ಮಹತ್ವದ್ದು. ಮೆಲೋಡ್ರಾಮಾ ಶೈಲಿಯಲ್ಲಿ ಸಾಗುವ ಚಿತ್ರಕ್ಕೆ ಚರಣ್ ರಾಜ್ ಅಚ್ಚುಕಟ್ಟಾದ ಸಂಗೀತ ಒದಗಿಸಿದ್ದಾರೆ. ನಿರ್ದೇಶಕರ ಕಥೆ ಹೇಳುವಿಕೆ ಶೈಲಿಯೂ ಮಜವೆನಿಸುತ್ತದೆ. ಆದರೆ, ಭೀಮಸೇನನ ಅಡುಗೆ ಪ್ರಹಸನ ದೀರ್ಘವಾಗಿದೆ. ಚೂರು ಟ್ರಿಮ್ ಮಾಡಿದ್ದರೆ, ಮತ್ತಷ್ಟು ರುಚಿಸುತ್ತಿತ್ತೇನೋ.