ಏಳು ತಿಂಗಳ ಬಳಿಕ ಚಂದನವನದಲ್ಲಿ ಆಡಿಯೋ ಬಿಡುಗಡೆ ಸಂಭ್ರಮ; ಆ್ಯಕ್ಟ್​ 1978 ಚಿತ್ರಕ್ಕೆ ಶಿವಣ್ಣ ಸಾಥ್​

collage (14)
Published on

ಬೆಂಗಳೂರು: ಮಂಸೋರೆ ನಿರ್ದೇಶನದ ಮೂರನೆಯ ಚಿತ್ರ ‘ಆ್ಯಕ್ಟ್​ 1978’ ನವೆಂಬರ್​ ತಿಂಗಳಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. ಇನ್ನೇನು ಕೆಲ ದಿನಗಳಲ್ಲಿ ಬಿಡುಗಡೆ ದಿನಾಂಕವನ್ನೂ ತಂಡ ಘೋಷಿಸಿಕೊಳ್ಳಲಿದೆ. ಹೀಗಿರುವಾಗಲೇ ಆಡಿಯೋ ಮೂಲಕ ಆಗಮಿಸಲು ತಂಡ ಪ್ಲಾನ್​ ಮಾಡಿದೆ. ಅದರಂತೆ, ಅ. 25ರಂದು ಚಿತ್ರದ ಹಾಡುಗಳು ಬಿಡುಗಡೆ ಆಗಲಿದ್ದು, ಈ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​ ಸಾಥ್​ ನೀಡಲಿದ್ದಾರೆ.

ಮಾರ್ಚ್ ನಲ್ಲಿಯೇ ಕರೊನಾ ಲಾಕ್​ಡೌನ್​ ಘೋಷಣೆ ಆಗಿತ್ತು. ಅಂದಿನಿಂದ ಇಂದಿನವರೆಗೂ ಚಂದನವನದಲ್ಲಿ ಒಂದೇ ಒಂದು ಆಡಿಯೋ ಬಿಡುಗಡೆ ಸಮಾರಂಭ ನಡೆದಿರಲಿಲ್ಲ. ಇದೀಗ ಆ ಘಳಿಗೆಯೂ ಬಂದೇ ಬಿಟ್ಟಿದೆ. ಮಂಸೋರೆ ನಿರ್ದೇಶನದ ಆ್ಯಕ್ಟ್ 1978 ಚಿತ್ರದ ಹಾಡುಗಳು ಬಿಡುಗಡೆ ಆಗಲಿದ್ದು, ಪುನೀತ್​ ರಾಜ್​ಕುಮಾರ್ ಒಡೆತನದ ಪಿಆರ್​ಕೆ ಆಡಿಯೋದಲ್ಲಿ ಸಂಜೆ 6 ಗಂಟೆಗೆ ರಿಲೀಸ್​ ಆಗಲಿವೆ.

ಇದು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಚಿತ್ರೀಕರಿಸಿರುವ ಹಾಗೂ ಕರ್ನಾಟಕದ ಜನಸಾಮಾನ್ಯರು, ವಿಶೇಷವಾಗಿ ರೈತರೇ ಕಾಣಿಸಿಕೊಂಡಿರುವ ಹಾಡಿದು. ಹತಾಷೆ, ಸಾಲ, ಕಷ್ಟಗಳಲ್ಲಿ ಸಿಲುಕಿಕೊಂಡಿರುವ ದೇಶದ ರೈತರು ಹಾಗೂ ಸಾಮಾನ್ಯ ಪ್ರಜೆಗಳಿಗೆ ಈ ಹಾಡನ್ನು ಚಿತ್ರತಂಡ ಅರ್ಪಣೆ ಮಾಡುತ್ತಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿರುವ ಈ ಹಾಡಿಗೆ ರಾಹುಲ್ ಶಿವಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಡಬಗೆರೆ ಮುನಿರಾಜು ಧ್ವನಿ ನೀಡಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ.

ಒಂದಿಷ್ಟು ಘಟನೆಗಳಿಂದ ಸ್ಪೂರ್ತಿಗೊಂಡು ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ, ಶ್ರುತಿ, ಪ್ರಮೋದ್ ಶೆಟ್ಟಿ, ಅವಿನಾಶ್, ಅಚ್ಯುತ್ ಕುಮಾರ್, ದತ್ತಣ್ಣ, ಬಿ. ಸುರೇಶ, ಕೃಷ್ಣ ಹೆಬ್ಬಾಳೆ, ಸಂಚಾರಿ ವಿಜಯ್, ಶೋಭರಾಜ್ ಇತರರು ಪಾತ್ರವರ್ಗದಲ್ಲಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net