ಬೆಂಗಳೂರಿನಲ್ಲಿ ಕೋಬ್ರಾ: ಭಾಷೆಗೆ ಗಡಿ ಇಲ್ಲ ಎಂದ ಚಿಯಾನ್ ವಿಕ್ರಮ್

Vikram
Published on

ಬೆಂಗಳೂರು: ವಿಕ್ರಮ್ ಅಭಿನಯದ ‘ಕೋಬ್ರಾ’ ಇದೇ ಆ. 31ಕ್ಕೆ ಗಣಪತಿ ಹಬ್ಬದ ದಿನ ಬಿಡುಗಡೆಯಾಗುತ್ತಿದೆ. ಬರೀ ತಮಿಳಷ್ಟೇ ಅಲ್ಲ, ಈ ಚಿತ್ರ ತೆಲುಗು ಮತ್ತು ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಚಾರ ಮಾಡುವುದಕ್ಕೆ ವಿಕ್ರಮ್ ಮತ್ತು ತಂಡದವರು ಶನಿವಾರ ಬೆಂಗಳೂರಿಗೆ ಬಂದಿದ್ದರು. ವಿಕ್ರಮ್​ ನಾಯಕಿಯಾಗಿ ‘ಕೆಜಿಎಫ್’ನ ಶ್ರೀನಿಧಿ ಶೆಟ್ಟಿ ನಟಿಸಿದ್ದು, ಅವರು ಸಹ ಹಾಜರಿದ್ದರು. ಅವರೊಂದಿಗೆ ಮೃಣಾಲಿನಿ ರವಿಶಂಕರ್ ಮತ್ತು ಮೀನಾಕ್ಷಿ ಗೋವಿಂದರಾಜನ್ ಸಹ ಇದ್ದರು.

‘ಕೋಬ್ರಾ’, ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿರುವ ವಿಕ್ರಮ್ ಅಭಿನಯದ ಮೊದಲ ಚಿತ್ರ. ಈ ಕುರಿತು ಮಾತನಾಡುವ ಅವರು, ‘ಕೋವಿಡ್ ನಂತರ ಸಿನಿಮಾದ ಪರಿಭಾಷೆ ಸಾಕಷ್ಟು ಬದಲಾಗಿದೆ. ಒಂದು ಸಿನಿಮಾ ಚಿಕ್ಕದು ಅಥವಾ ದೊಡ್ಡದು ಎಂದಾಗಬೇಕಿಲ್ಲ ಅಥವಾ ಒಂದು ಭಾಷೆಗೆ ಮಾತ್ರ ಸೀಮಿತವಾಗಬೇಕಿಲ್ಲ. ದಕ್ಷಿಣದ ‘ಕೆಜಿಎಫ್’ ಚಿತ್ರವು ಉತ್ತರಕ್ಕೆ ಹೋಯ್ತು. ಹಾಗೆಯೇ ಸಿನಿಮಾಗೆ ಯಾವುದೇ ಗಡಿಗಳಿಲ್ಲ. ಅದೇ ಒಂದು ಭಾಷೆ. ಮೊದಲಿಗೆ ಓಟಿಟಿ ಎಂದರೆ ಸಿನಿಮಾದವರಿಗೆ ಭಯ ಇತ್ತು. ಈಗ ಅದರಿಂದ ಚಿತ್ರರಂಗಕ್ಕೆ ಸಾಕಷ್ಟು ಸಹಾಯವಾಗುತ್ತಿದೆ. ಚಿತ್ರವನ್ನು ಯಾವುದೇ ಭಾಷೆಗೆ ಡಬ್ ಮಾಡಬಹುದಾಗಿದೆ. ಅದೇ ರೀತಿ ‘ಕೋಬ್ರಾ’ ಸಹ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಕನ್ನಡ ಅವತರಣಿಕೆಗೆ ಡಬ್ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಮುಂದೆ ಪ್ರಯತ್ನಿಸುತ್ತೇನೆ’ ಎನ್ನುತ್ತಾರೆ ವಿಕ್ರಮ್

ಏಳೆಂಟು ಗೆಟಪ್​ಗಳಿರುವ ಚಿತ್ರ: ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಎನ್ನುವ ಅವರು, ‘ಇದೊಂದು ವಿಭಿನ್ನ ಚಿತ್ರ. ಈ ಚಿತ್ರದಲ್ಲಿ ನನಗೆ ಏಳೆಂಟು ಗೆಟಪ್​ಗಳಿವೆ. ಮೇಕಪ್ ಮಾಡುವುದಕ್ಕೆ ಐದು ತಾಸು, ತೆಗೆಯುವುದಕ್ಕೆ ಎರಡು ತಾಸು ಬೇಕಾಗುತ್ತಿತ್ತು. ಅಷ್ಟು ಹೊತ್ತು ಸುಮ್ಮನೆ ಕೂತಿರಬೇಕಿತ್ತು. ಅದಕ್ಕಿಂತ ನನಗೆ ಬಹಳ ವಿಶೇಷ ಎನಿಸಿದ್ದು, ಒಂದೊಂದು ಪಾತ್ರಕ್ಕೂ ಅದರದ್ದೇ ಆದ ವಿಭಿನ್ನ ಮ್ಯಾನರಸಿಂ, ಮಾತನಾಡುವ ಮತ್ತು ನಡೆಯುವ ಶೈಲಿ ಇದೆ. ಅದನ್ನು ತೆರೆಯ ಮೇಲೆ ತರುವುದು ನಿಜಕ್ಕೂ ಸವಾಲಿನದ್ದಾಗಿತ್ತು’ ಎನ್ನುತ್ತಾರೆ ವಿಕ್ರಮ್

ಪವನ್ ಜತೆಗೊಂದು ಚಿತ್ರ?: ಕನ್ನಡದಲ್ಲಿ ನಟಿಸುವ ಆಸೆ ಇದೆ ಎಂದು ಇದೇ ಸಂದರ್ಭದಲ್ಲಿ ಹೇಳಿಕೊಂಡ ವಿಕ್ರಮ್ ‘ಅದೊಂದು ದಿನ ಪ್ರಶಾಂತ್ ನೀಲ್ ಸಿಕ್ಕಾಗ ಚಿತ್ರ ಮಾಡೋಣ ಎಂದು ಹೇಳಿದೆ. ನನಗೆ ನಿಜಕ್ಕೂ ಭಾಷೆಯ ಭೇದ ಇಲ್ಲ. ಇದಕ್ಕೂ ಮುನ್ನ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದೇನೆ. ಕನ್ನಡದಲ್ಲಿ ಸಾಧ್ಯವಾಗಿಲ್ಲ. ‘ಲೂಸಿಯಾ’ ನಿರ್ದೇಶಕ ಪವನ್ ಜತೆಗೆ ಒಂದು ಚಿತ್ರದ ಕುರಿತು ಮಾತುಕಥೆ ನಡೆಯುತ್ತಿದೆ. ಯಾವುದೂ ಇನ್ನೂ ಪಕ್ಕಾ ಆಗಿಲ್ಲ’ ಎನ್ನುತ್ತಾರೆ ಅವರು.

ಪುನೀತ್ ನೆನಪು

ಕೋಬ್ರಾ ಚಿತ್ರದ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರನ್ನು ವಿಕ್ರಮ್ ನೆನಪಿಸಿಕೊಂಡರು. ‘ನಾನು ‘ಐ’ ಚಿತ್ರ ಮಾಡಿದಾಗ, ಅದರ ಮೂಹೂರ್ತಕ್ಕೆ ಪುನೀತ್ ಬಂದಿದ್ದರು. ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟ. ಅವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ’ ಎಂದರು ವಿಕ್ರಮ್ ಇನ್ನು, ಯಶ್ ಕುರಿತು ಮಾತನಾಡಿದ ಅವರು, ‘ಕೆಲವು ವರ್ಷಗಳ ಹಿಂದೆ ಚೆನ್ನೈನ ಪ್ರವಾಹ ಕುರಿತು ‘ಸ್ಪಿರಿಟ್ ಆಫ್ ಚೆನ್ನೈ’ ಎಂಬ ವಿಡಿಯೋ ಮಾಡಿದ್ದೆ. ಈ ಸಂದರ್ಭದಲ್ಲಿ ಯಶ್​ಗೆ ಫೋನ್ ಮಾಡಿ ವಿಡಿಯೋದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಾಧ್ಯವಾ ಎಂದು ಕೇಳಿದಾಗ ಅವರು ಪ್ರೀತಿಯಿಂದ ಒಪ್ಪಿದ್ದರು. ಅವರ ‘ಕೆಜಿಎಫ್’ ಚಿತ್ರಗಳು ನನಗೆ ಬಹಳ ಇಷ್ಟವಾಯಿತು’ ಎಂದು ವಿಕ್ರಮ್ ಹೇಳಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net