ಎನ್​ಟಿಆರ್​ಗೆ ಭಾರತ ರತ್ನ ಕೊಡಿ ... ಕೇಂದ್ರ ಸರ್ಕಾರಕ್ಕೆ ಚಿರಂಜೀವಿ ಮನವಿ

Chiranjeevi - NTR - Final
Published on

ಹೈದರಾಬಾದ್​: ಟಾಲಿವುಡ್​ನ ದಿಗ್ಗಜ ನಟ ನಂದಮೂರಿ ತಾರಕ ರಾಮರಾವ್​ (ಎನ್​ಟಿಆರ್​) ಬಗ್ಗೆ ಹೆಚ್ಚು ಪರಿಚಯ ಮಾಡಿಕೊಡುವುದರ ಅವಶ್ಯಕತೆ ಇಲ್ಲ. ತೆಲುಗು ಚಿತ್ರರಂಗದಲ್ಲಿ ನಟ-ನಿರ್ದೇಶಕ-ನಿರ್ಮಾಪಕ-ಸಂಕಲನಕಾರರಾಗಿ ಗುರುತಿಸಿಕೊಂಡ ಎನ್​ಟಿಆರ್​ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು. ರಾಜಕೀಯದಲ್ಲೂ ಗುರುತಿಸಿಕೊಂಡು, ಆಂಧ್ರದ ಮುಖ್ಯಮಂತ್ರಿಯಾಗಿದ್ದವರು. ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು 'ಮೆಗಾ ಸ್ಟಾರ್' ಚಿರಂಜೀವಿ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು ಎನ್​ಟಿಆರ್​ ಅವರ 98ನೇ ಹುಟ್ಟುಹಬ್ಬ. ಎನ್​ಟಿಆರ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದು ಬಿಟ್ಟರೆ, ಮಿಕ್ಕಂತೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರಶಸ್ತಿ ಬಂದಿಲ್ಲ. ಹಾಗಾಗಿ, ಖ್ಯಾತ ಗಾಯಕ ಭುಪೆನ್​ ಹಜಾರಿಕ ಅವರಿಗೆ ಕೊಟ್ಟಂತೆ, ಎನ್​ಟಿಆರ್​ ಅವರಿಗೂ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಕೊಡಿ ಎಂದು ಚಿರಂಜೀವಿ ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಖ್ಯಾತ ಗಾಯಕ ಭುಪೆನ್​ ಹಜಾರಿಕಾ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಅದೇ ತರಹ, ಎನ್​ಟಿಆರ್​ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು ಎಂದು ತೆಲುಗು ಸಮುದಾಯದ ಪರವಾಗಿ ಕೇಳಿಕೊಳ್ಳುತ್ತೇನೆ. ಎನ್​ಟಿಆರ್​ ಅವರ ಶತಮಾನೋತ್ಸವ ಸಂದರ್ಭದಲ್ಲಿ, ಎನ್​ಟಿಆರ್​ ಅವರಿಗೆ ಮರಣೋತ್ತರ ಭಾರತ ರತ್ನ ಘೋಷಿಸುವ ಮೂಲಕ ದಿಗ್ಗಜ ನಟನಿಗೆ ಗೌರವ ಸಲ್ಲಿಸಬೇಕು' ಎಂದು ಮನವಿ ಸಲ್ಲಿಸಿದ್ದಾರೆ.

ಚಿರಂಜೀವಿ ಅವರ ಮನವಿಗೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೋ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net