

ರಾಘವ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ನಟಿಸಿರುವ, ಪಿ. ವಾಸು ನಿರ್ದೇಶನದ ‘ಚಂದ್ರಮುಖಿ-2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗಷ್ಟೆ ಚಿತ್ರದ ಧ್ವನಿಸುರಳಿ ಬಿಡುಗಡೆಯ ಕಾರ್ಯಕ್ರಮ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಿತು.
18 ವರ್ಷಗಳ ಹಿಂದೆ ಬಿಡುಗಡೆಯಾದ ‘ಚಂದ್ರಮುಖಿ’ ಸಿನಿಮಾದ ಸೀಕ್ವಲ್ ಇದಾಗಿದ್ದು, ‘ರಾಜ ವೆಟೈಯನ್’ ಪಾತ್ರದಲ್ಲಿ ರಾಘವ್ ಲಾರೆನ್ಸ್ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿದ ನಟಿ ಕಂಗನಾ ಇದರಲ್ಲಿ ‘ಚಂದ್ರಮುಖಿ’ಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಬಗ್ಗೆ, ‘ನಾನು ಸಾಮಾನ್ಯವಾಗಿ ಯಾರ ಬಳಿಯೂ ಆಫರ್ ಕೇಳಲ್ಲ. ಆದರೆ ಈ ಚಿತ್ರಕ್ಕೆ ಅವಕಾಶ ನೀಡಲು ನಾನೇ ನಿರ್ದೇಶಕ ಪಿ.ವಾಸು ಅವರನ್ನು ಕೇಳಿದ್ದು. ನನ್ನ ವೃತ್ತಿಜೀವನದ ಅತ್ಯುತ್ತಮ ಚಿತ್ರವಿದು. ವಾಸು ಸರ್ ನನ್ನ ಪಾತ್ರವಷ್ಟೇ ಅಲ್ಲ ಎಲ್ಲ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ನೀಡಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.
ಇನ್ನು ಚಿತ್ರಕ್ಕೆ ಎಂ.ಎಂ ಕೀರವಾಣಿ ಸಂಗೀತ, ಆರ್.ಡಿ.ರಾಜಶೇಖರ್ ಛಾಯಾಗ್ರಹಣ, ಅಂಥೋನಿ ಸಂಕಲನವಿರಲಿದೆ. ವಡಿವೇಲು, ಲಕ್ಷ್ಮೀ ಮೆನನ್, ಮಹಿಮಾ ನಂಬಿಯಾರ್, ರಾಧಿಕಾ ಶರತ್ ಕುಮಾರ್, ಸುರೇಶ್ ಮೆನನ್ ಪ್ರಮುಖ ತಾರಾಬಳಗದಲ್ಲಿದ್ದಾರೆ. ಸೆ.15ರ ಗಣೇಶ ಚತುರ್ಥಿ ಹಬ್ಬಕ್ಕೆ ಸಿನಿಮಾ ರಿಲೀಸ್ ಆಗಲಿದೆ. (ಏಜೆನ್ಸೀಸ್)