

ಬೆಂಗಳೂರು: ಗಾಯಕ, ಗೀತರಚನೆಕಾರ, ಸಂಗೀತ ನಿರ್ದೇಶಕನಾಗಿ ಗಮನ ಸೆಳೆದಿರುವ ಚಂದನ್ ಶೆಟ್ಟಿ, ಈಗ ನಟನೆಯಲ್ಲೂ ಬಿಜಿಯಾಗಿದ್ದಾರೆ. ಅವರು ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ‘ಎಲ್ರ ಕಾಲೆಳೆಯುತ್ತೆ ಕಾಲ’ ಬಿಡುಗಡೆಯಾಗುವ ಮುನ್ನವೇ ಎರಡನೇ ಚಿತ್ರ ಸೆಟ್ಟೇರಿದೆ. ಹೆಸರು ‘ಸೂತ್ರಧಾರಿ’. ಈ ಹಿಂದೆ ‘ದಮಯಂತಿ’ ಚಿತ್ರ ನಿರ್ದೇಶಿಸಿ, ನಿರ್ವಿುಸಿದ್ದ ನವರಸನ್ ಈ ಚಿತ್ರ ನಿರ್ವಿುಸುತ್ತಿದ್ದು, ಅವರ ತಂಡದಲ್ಲಿಯೇ ಪಳಗಿರುವ ಕಿರಣ್ ಕುಮಾರ್ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ‘ಸೂತ್ರಧಾರಿ’ ಚಿತ್ರದಲ್ಲಿ ಚಂದನ್ಗೆ ಅಪೂರ್ವ ನಾಯಕಿಯಾಗಿದ್ದು, ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಚಂದನ್ ಶೆಟ್ಟಿ, ‘‘ಎಲ್ರ ಕಾಲೆಳೆಯುತ್ತೆ ಕಾಲ’ ಚಿತ್ರ ರೆಟ್ರೋ ಶೈಲಿಯಲ್ಲಿದೆ. ಆದರೆ, ‘ಸೂತ್ರಧಾರಿ’ ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಹೀಗಾಗಿಯೇ ಆ ಲುಕ್ಗಾಗಿ 12 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಇದು ಮರ್ಡರ್ ಮಿಸ್ಟರಿ ಕಥೆ. ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ನಾನೇ ಮಾಡುತ್ತಿದ್ದೇನೆ’ ಎಂದು ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಬಳಿಕ ನಾಯಕಿ ಅಪೂರ್ವ, ‘ನವರಸನ್ ಒಮ್ಮೆ ಕಛೇರಿಗೆ ಕರೆಸಿ ಸ್ಟೋರಿ ಹೇಳಿಸಿದ್ದರು. ಕಥೆ ನನಗೇನೋ ಇಷ್ಟವಾಯಿತು. ಆದರೆ, ಆಯ್ಕೆಯಾಗಿದ್ದೀನಾ, ಇಲ್ವಾ ಅಂತ ಹೇಳಿರಲಿಲ್ಲ. ಅದಾಗಿ ಕೆಲವು ದಿನಗಳ ನಂತರ ಮತ್ತೆ ಕರೆ ಮಾಡಿ ಕರೆದು ಅಡ್ವಾನ್ಸ್ ಕೊಟ್ಟು ಆಯ್ಕೆಯಾಗಿದ್ದೀರಾ ಎಂದರು. ಒಳ್ಳೆ ಪಾತ್ರ ಕೊಟ್ಟಿದ್ದಾರೆ’ ಎಂದು ಖುಷಿಯಿಂದ ಹೇಳಿಕೊಂಡರು.
ಚಂದನ್ ಶೆಟ್ಟಿ, ಅಪೂರ್ವ ಜತೆ ತಬಲಾ ನಾಣಿ ಕೂಡ ಚಿತ್ರದಲ್ಲಿ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ‘ಸೂತ್ರಧಾರಿ’ಗೆ ಪಿಕೆಎಚ್ ದಾಸ್ ಛಾಯಾಗ್ರಹಣ, ಕಿನಾಲ್ ರಾಜ್ ಸಂಭಾಷಣೆ, ಸತೀಶ್ ಚಂದ್ರಯ್ಯ ಸಂಕಲನವಿರಲಿದೆ.