

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದಾ ಒಂದಿಲ್ಲೊಂದು ಕಡೆ ಸುತ್ತಾಡುತ್ತಿರುತ್ತಾರೆ. ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಮಲೆಮಹದೇಶ್ವರ ಬೆಟ್ಟ, ಮೈಸೂರು, ಧಾರವಾಡ, ದಾವಣಗೆರೆಗೆ ಹೋಗಿ ಬಂದಿದ್ದರು. ಇದೀಗ ಸ್ನೇಹಿತರ ಜತೆಗೆ ಬೈಕ್ ಟ್ರಿಪ್ ಮಾಡುತ್ತಿದ್ದಾರೆ.
ಸ್ಯಾಂಡಲ್ವುಡ್ ನಟರು ಮತ್ತು ನಿರ್ದೇಶಕರೊಟ್ಟಿಗೆ ದರ್ಶನ್ ಸವಾರಿ ಮಾಡಿದ್ದಾರೆ. ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಪ್ರಜ್ವಲ್ ದೇವರಾಜ್, ಪ್ರಣವ್ ದೇವರಾಜ್, ಧರ್ಮ ಕೀರ್ತಿರಾಜ್, ಪನ್ನಗಾ ಭರಣ, ಯಶಸ್ ಸೂರ್ಯ ಜತೆಗೆ ಇನ್ನೂ ಹಲವರು ಸೇರಿ ಒಟ್ಟಿಗೆ ಬೈಕ್ನಲ್ಲಿ ಸುತ್ತಾಡಿದ್ದಾರೆ.
ಸದ್ಯ ಆ ಜಾಲಿ ಟ್ರಿಪ್ನ ಫೋಟೋಗಳೆಲ್ಲ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಡಿ ಬಾಸ್ ಅಭಿಮಾನಿಗಳಿಗೂ ಇದು ಖುಷಿ ನೀಡಿದ್ದು, ರಾಬರ್ಟ್ ಚಿತ್ರದ ಬಿಡುಗಡೆ ಆಗಲಿ ಎಂಬ ಸಂದೇಶವನ್ನೂ ಕಮೆಂಟಿಸುತ್ತಿದ್ದಾರೆ.