

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಮತ್ತು ನಿರ್ವಣದ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಅರ್ಧ ಚಿತ್ರೀಕರಣ ಮುಗಿದಿದೆ. ಇನ್ನರ್ಧ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈ ಮಧ್ಯೆ ಚಿತ್ರತಂಡಕ್ಕೆ ಇನ್ನೊಬ್ಬ ನಾಯಕಿಯ ಆಯ್ಕೆಯಾಗಿದೆ. ‘ತಲೆದಂಡ’, ‘ಮಾಹಿರಾ’, ‘ಗಿಲ್ಕಿ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಚೈತ್ರಾ ಆಚಾರ್, ಈ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದು, ಸುರಭಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂಬಂಧ ಅವರ ಚಿತ್ರತಂಡದವರು ಶುಕ್ರವಾರ, ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ ಕಳೆದ ವರ್ಷ ಪ್ರಾರಂಭವಾಗಿತ್ತು. ರಕ್ಷಿತ್ ಮತ್ತು ರುಕ್ಮಿಣಿ ವಸಂತ್ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಎರಡು ಕಾಲಘಟ್ಟದ ಚಿತ್ರೀಕರಣವಿದೆಯಂತೆ. ಈಗಾಗಲೇ ನಿರ್ದೇಶಕ ಹೇಮಂತ್ ರಾವ್ ಒಂದು ಕಾಲಘಟ್ಟದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಎರಡನೆಯ ಹಂತ ಸದ್ಯದಲ್ಲೇ ಪ್ರಾರಂಭವಾಗಿದ್ದು, ಈ ಮಧ್ಯೆ ಇನ್ನೊಬ್ಬ ನಾಯಕಿಯ ಪ್ರವೇಶವಾಗಿದೆ.
‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಅವಿನಾಶ್, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಮುಂತಾದವರು ನಟಿಸುತ್ತಿದ್ದು, ಹೇಮಂತ್ ರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಚರಣ್ ರಾಜ್ ಸಂಗೀತವಿರುವ ಈ ಚಿತ್ರವು ವರ್ಷಾಂತ್ಯಕ್ಕೆ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಎರಡನೆಯ ಹಂತದ ಚಿತ್ರೀಕರಣ ಇದೀಗ ಪ್ರಾರಂಭವಾಗಿರುವುದರಿಂದ, ಚಿತ್ರ ಇದೇ ವರ್ಷ ಬಿಡುಗಡೆಯಾಗುತ್ತದೋ ಅಥವಾ ಮುಂದಿನ ವರ್ಷ ತೆರೆಗೆ ಬರುತ್ತದೋ ಎಂಬ ಸ್ಪಷ್ಟನೆ ಇನ್ನಷ್ಟೇ ಸಿಗಬೇಕಿದೆ.