ಅಶ್ವತ್ಥಾಮನಾಗಿ ಸೆಂಚುರಿ ಸ್ಟಾರ್; ಪುಷ್ಕರ್ ನಿರ್ಮಾಣದಲ್ಲಿ ಬಿಗ್‌ಬಜೆಟ್ ಸಿನಿಮಾ

collage (19)
Published on

ಬೆಂಗಳೂರು: ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಇದೀಗ ಅಶ್ವತ್ಥಾಮನ ಅವತಾರ ಎತ್ತಲಿದ್ದಾರೆ. ಹಾಗಂತ ಮಹಾಭಾರತದ ಪೌರಾಣಿಕ ಪಾತ್ರದಲ್ಲಿ ಮಿಂಚು ಹರಿಸಲಿದ್ದಾರೆ ಎಂದಲ್ಲ. ಚಿತ್ರದ ಶೀರ್ಷಿಕೆಯೂ ಅಶ್ವತ್ಥಾಮ ಅಲ್ಲ. ಬದಲಿಗೆ, ಆಧುನಿಕ ಅಶ್ವತ್ಥಾಮನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ನ.1 ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇನ್ನು ಶೀರ್ಷಿಕೆ ಅಂತಿಮವಾದ ಹೊಸ ಸಿನಿಮಾದ ಫಸ್ಟ್ ಲುಕ್‌ವೊಂದನ್ನು ಚಿತ್ರತಂಡ ಬಹಿರಂಗಪಡಿಸಿದೆ.

‘ಅವನೇ ಶ್ರೀಮನ್ನಾರಾಯಣ’ ಚಿತ್ರ ನಿರ್ದೇಶನ ಮಾಡಿದ್ದ ಸಚಿನ್ ರವಿ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಬಿಗ್ ಬಜೆಟ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಹಾಗಾದರೆ ಏನಿದು ಸಿನಿಮಾ? ಈ ಬಗ್ಗೆ ಸ್ವತಃ ನಿರ್ದೇಶಕ ಸಚಿನ್ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

‘ನಾವಿಲ್ಲಿ ಮಹಾಭಾರತದ ಅಶ್ವತ್ಥಾಮನ ಬಗ್ಗೆ ಸಿನಿಮಾ ಮಾಡುತ್ತಿಲ್ಲ. ಆ ಅಶ್ವತ್ಥಾಮ ಪ್ರಸ್ತುತ ಕಾಲಘಟ್ಟದಲ್ಲಿದ್ದರೆ ಏನು ಮಾಡ್ತಿದ್ದ ಎಂಬುದನ್ನು ಕಾಲ್ಪನಿಕ ಕಥೆ ಸೃಷ್ಟಿ ಮಾಡಿಕೊಂಡು ತೆರೆಮೇಲೆ ತರಲಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಲಿದ್ದೇವೆ. ಸ್ಪೈ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿರುವುದರಿಂದ ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಶಿವಣ್ಣ ಇಲ್ಲಿರಲಿದ್ದಾರೆ. ಸ್ಕ್ರಿಪ್ಟ್ ಬರೆಯುವಿಕೆ ಕೊನೇ ಹಂತದಲ್ಲಿದೆ. ಮುಂದಿನ ವರ್ಷ ಸಿನಿಮಾ ಶುರುವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಸಚಿನ್.

ಇನ್ನು ಇತ್ತೀಚೆಗಷ್ಟೇ ಸುದೀಪ್ ಮತ್ತು ಅನೂಪ್ ಭಂಡಾರಿ ಅಶ್ವತ್ಥಾಮ ಸಿನಿಮಾ ಘೋಷಣೆ ಮಾಡಿಕೊಂಡಿದ್ದರು. ಆ ಚಿತ್ರಕ್ಕೂ ಈ ಸಿನಿಮಾಕ್ಕೂ ಯಾವುದೇ ಸಂಬಂಧ ಇಲ್ಲ ಎಂದೂ ಹೇಳಿಕೊಳ್ಳುತ್ತಾರೆ ನಿರ್ದೇಶಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net