

ಬೆಂಗಳೂರು: ಚಿತ್ರಗಳಲ್ಲಿ ಹಿಂಸೆ ಅಥವಾ ಅಶ್ಲೀಲತೆ ಇರುವ ದೃಶ್ಯಗಳನ್ನು ಕತ್ತರಿಸುವುದಕ್ಕೆ ಸೆನ್ಸಾರ್ ಮಂಡಳಿ ಹೇಳುವುದು ಸಹಜ. ಆದರೆ, ಇದೇ ಮೊದಲ ಬಾರಿಗೆ ಚಿತ್ರದ ಹೆಸರನ್ನು ಬದಲಾಯಿಸುವುದಕ್ಕೆ ಮಂಡಳಿಯು ಸೂಚಿಸಿದ್ದು, ಇದಕ್ಕೆ ಚಿತ್ರತಂಡ ಒಪ್ಪಿಕೊಂಡಿದೆ.‘ಗೋದ್ರ್ರಾ’ ಎಂಬ ಹೆಸರು ಕೇಳುತ್ತಿದ್ದಂತೆಯೇ ನೆನಪಾಗುವುದು ಗುಜರಾತ್ನ ಗೋಧ್ರಾ ಹತ್ಯಾಕಾಂಡ. ಕೆಲವು ವರ್ಷಗಳ ಹಿಂದೆ ಪ್ರಾರಂಭವಾದ ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಅಭಿನಯದ ಚಿತ್ರಕ್ಕೆ ‘ಗೋದ್ರಾ’ ಎಂಬ ಹೆಸರನ್ನು ಇಡಲಾಗಿತ್ತು.
ಚಿತ್ರಕ್ಕೂ, ಹತ್ಯಾಕಾಂಡಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚಿತ್ರತಂಡ ಹೇಳಿಕೊಂಡೇ ಬರುತ್ತಿದೆ. ಈ ಮಧ್ಯೆ, ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿಯು, ಶೀರ್ಷಿಕೆಯು ಕೆಲವರ ಭಾವನೆಗೆ ಧಕ್ಕೆ ತರುವಂತೆ ಇರುವುದರಿಂದ ಹೆಸರನ್ನೂ ಬದಲಾಯಿಸುವುದಕ್ಕೆ ಸೂಚಿಸಿದೆ. ಈ ಸಲಹೆಯನ್ನು ಚಿತ್ರತಂಡ ಒಪ್ಪಿಕೊಂಡಿದ್ದು, ಶೀಘ್ರದಲ್ಲೇ ಹೊಸ ಹೆಸರು ಘೋಷಿಸುವ ಸಾಧ್ಯತೆ ಇದೆ.