

ಇಂದು ಅಪ್ಪಂದಿರ ದಿನ. ಈ ಸಂದರ್ಭದಲ್ಲಿ ಸೆಲೆಬ್ರಿಟಿಗಳು ತಮ್ಮ ತಂದೆಯಿಂದ ಕಲಿತ ಜೀವನಪಾಠವನ್ನು ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.
ಅಪ್ಪನ ಋಣ ಈ ಜನ್ಮದಲ್ಲಿ ತೀರಿಸಲು ಆಗುವುದಿಲ್ಲ - ಅನಿರುದ್ಧ
ಅಪ್ಪನ ಹೆಸರು ಹರ್ಷವರ್ಧನ್. ಚಿಕ್ಕಂದಿನಿಂದಲೇ ಅವರೇ ನನ್ನ ಗುರು. ಅವರ ಋಣ ಈ ಜನ್ಮದಲ್ಲಿ ತೀರಿಸಲು ಆಗುವುದಿಲ್ಲ. ವೃತ್ತಿಯಲ್ಲಿ ಅವರೊಬ್ಬ ವಾಸ್ತುಶಿಲ್ಪಿ (ಆರ್ಕಿಟೆಕ್ಟ್). ಅದನ್ನು ನೋಡಿ ನಾನೂ ಇಂಟಿರಿಯರ್ ಡಿಸೈನರ್ ಆಗಿ ಕೆಲಸ ಮಾಡಿದ್ದೆ. ಅಪ್ಪನಿಗೆ ಸದಾ ಹಾಡುವ ಅಭ್ಯಾಸ. ಒಳ್ಳೆಯ ಹಾಡುಗಾರ. ಅದು ನನ್ನೊಳಗೂ ಮೂಡಿಬಂದಿದೆ. ಹೀಗೆ ಅವರಿಂದ ಕಲಿತಿದ್ದು ಒಂದಾ, ಎರಡಾ ... ಅದು ಎಣಿಸಲಾರದಷ್ಟಿದೆ. ಇದು ನನ್ನ ತಂದೆಯ ವಿಚಾರವಾದರೆ, ಅಪ್ಪಾವ್ರಿಂದಲೂ (ವಿಷ್ಣುವರ್ಧನ್) ಸಾಕಷ್ಟು ಅಂಶಗಳು ಬಳುವಳಿಯಾಗಿ ಸಿಕ್ಕಿವೆ. ಸಂಸ್ಕಾರ ಕಲಿತಿದ್ದೇನೆ. ಇಂದು ನಾನೇನು ಮಾಡುತ್ತಿದ್ದೇನೋ ಅದೆಲ್ಲದಕ್ಕೂ ಅಡಿಪಾಯ ಅಪ್ರಾವ್ರು ಮತ್ತು ಅಮ್ಮಾವ್ರು. ನಾನು ಏನೆಲ್ಲ ಕಲಿತಿದ್ದೇನೋ, ಅದನ್ನೇ ನನ್ನ ಮಗನಿಗೂ ನೀಡುತ್ತಿದ್ದೇನೆ. ಅಪ್ಪ ನನ್ನ ಜತೆಗೆ ಸ್ನೇಹಿತನಂತಿದ್ದರು. ನನ್ನ ಮಗನ ಜತೆಗೆ ನಾನು ಸ್ನೇಹಿತನಾಗಿದ್ದೇನೆ. ಲಾಕ್ಡೌನ್ ಸಮಯದಲ್ಲಿ ಒಟ್ಟಿಗೆ ಮನೆಯಲ್ಲಿದ್ದಾಗ ಗೊತ್ತಿರುವುದನ್ನು ಹೇಳಿದ್ದೇನೆ. ಗೊತ್ತಿಲ್ಲದ್ದನ್ನ ಅವನಿಂದ ಕೇಳಿ ತಿಳಿದುಕೊಂಡಿದ್ದೇನೆ.
ಅಪ್ಪನ ಸಹಾಯ ಗುಣ ಅನುಕರಣೀಯ - ಮೋಕ್ಷಿತಾ ಪೈ
ಅಪ್ಪ ಅಂದ ತಕ್ಷಣ ನನಗೆ ಮೊದಲಿಗೆ ನೆನಪಿಗೆ ಬರುವುದು, ಅವರ ಸಹಾಯ ಗುಣ. ಇಲ್ಲ ಎಂದವರಿಗೆ ಒಂದಿಲ್ಲೊಂದು ರೀತಿಯಲ್ಲಿ ಅವರು ಸಹಾಯ ಮಾಡುತ್ತಲೇ ಬಂದಿದ್ದಾರೆ. ನಾನು ಚಿಕ್ಕಂದಿನಿಂದಲೇ ಅವರ ಆ ಗುಣವನ್ನು ನೋಡಿಕೊಂಡು ಬಂದಿದ್ದೇನೆ. ಅದನ್ನೇ ನಾನೂ ಅಳವಡಿಸಿಕೊಂಡಿದ್ದೇನೆ. ಇನ್ನೊಬ್ಬರಿಗಾಗಿ ಮಿಡಿಯುವ ಮನಸ್ಸು ನನಗಿಷ್ಟ. ಆ ಗುಣ ನನ್ನೊಳೊಗೂ ಮೂಡಿದೆ. ಎಲ್ಲಾದರೂ ಪ್ರಯಾಣ ಬೆಳೆಸುತ್ತಿದ್ದಾಗ ಆಟೋದವರಿಗೆ ಮೀಟರ್ಗಿಂತ ಹೆಚ್ಚಿನ ಹಣವನ್ನೇ ನೀಡುತ್ತಾರೆ. ಒಮ್ಮೊಮ್ಮೆ ತಡವಾದರೆ, ಮನೆಗೆ ಕರೆದು ಊಟ ಹಾಕಿದ್ದೂ ಉಂಟು.
ಅಪ್ಪನಿಂದ ಸಾಕಷ್ಟು ವಿಷಯ ಕಲಿತಿದ್ದೇನೆ - ರೀಷ್ಮಾ ನಾಣಯ್ಯ
ಈ ಮೊದಲೆಲ್ಲ ಅಪ್ಪ ಆಫೀಸ್ಗೆ ಹೋಗ್ತಿದ್ರು, ಮನೆಯಲ್ಲಿ ಪ್ರತಿ ಭಾನುವಾರವಷ್ಟೇ ಫ್ಯಾಮಿಲಿ ಡೇ ಅಂತ ಇರುತ್ತಿತ್ತು. ಅದನ್ನು ಹೊರತುಪಡಿಸಿದರೆ ನಮ್ಮ ಪಾಡಿಗೆ ನಾವಿರುತ್ತಿದ್ದೇವು. ಆದರೆ, ಲಾಕ್ಡೌನ್ ಜಾರಿಯಾಗಿದ್ದರಿಂದ ಪ್ರತಿ ದಿನವೂ ಕುಟುಂಬದೊಂದಿಗೆ ಕಳೆಯುತ್ತಿದ್ದೇವೆ. ಲಾಕ್ಡೌನ್ನ ಸಾಕಷ್ಟು ಸಮಯವನ್ನು ಇಡೀ ಕುಟುಂಬದ ಜತೆಗೆ ಲೂಡೋ ಆಡುವ ಮೂಲಕ ಕಳೆದಿದ್ದೇನೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಅಪ್ಪನ ಜತೆ ವರ್ಕೌಟ್ ಸಹ ಶುರು ಮಾಡಿದ್ದೆ. ನನಗೂ ಸಹ ಸಾಕಷ್ಟು ವಿಷಯಗಳಲ್ಲಿ ಅಪ್ಪ ಟ್ರೈನ್ ಮಾಡಿದ್ದಾರೆ. ಈ ಲಾಕ್ಡೌನ್ ಅವಧಿಯಲ್ಲಿ, ಅಪ್ಪನಿಂದ ನಾನು ಕಲಿತ ಬಹುಮುಖ್ಯವಾದ ಅಂಶ ಏನೆಂದರೆ, ತಾಳ್ಮೆ. ಅಪ್ಪ ಸದಾ ಯಾವಾಗಲೂ ತುಂಬ ಕೂಲ್ ವ್ಯಕ್ತಿ. ಯಾರದ್ರೂ ಏನೇ ಹೇಳುತ್ತಿದ್ದರೆ ಅದನ್ನು ತುಂಬ ತಾಳ್ಮೆಯಿಂದ ಕೇಳುತ್ತಾರೆ. ಯಾವತ್ತೂ ಅಹಂ ತೋರಿಸಿದವರಲ್ಲ. ಅದರಲ್ಲೂ ಮನೆಯವರೊಂದಿಗೆ ಯಾವತ್ತೂ ಅಹಂ ಇಟ್ಟುಕೊಳ್ಳಬಾರದೆಂದು ಹೇಳಿಕೊಟ್ಟಿದ್ದಾರೆ. ಮೊದಲೆಲ್ಲ ಜಗಳ ಮಾಡಿ ಮಾತನಾಡುವುದನ್ನೇ ಬಿಟ್ಟು ಬಿಡುತ್ತಿದ್ದೆ. ಈಗ ಜಗಳವಾದರೆ ನಾನೇ ಎಲ್ಲರಿಗಿಂತ ಮೊದಲು ರಾಜಿ ಆಗಿಬಿಡುತ್ತೇನೆ.