

ಸ್ಯಾಂಡಲ್ವುಡ್ ನಟಿ ರಾಗಿಣಿ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು, ಇದೀಗ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರನ್ನು ಹಲವು ವಿಷಯಗಳ ಕುರಿತು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಪ್ರಮುಖವಾಗಿ ರಾಗಿಣಿ ಮತ್ತು ರವಿಶಂಕರ್ ಅವರ ನಡುವಿನ ಸಂಬಂಧ ಎಂಥದ್ದು ಎಂಬ ವಿಷಯದ ಕುರಿತು ಹೆಚ್ಚು ಚರ್ಚೆ ಆಗುತ್ತಿದೆ ಎಂದು ಹೇಳಲಾಗಿದೆ. ಇದಲ್ಲದೆ, ಅವರಿಬ್ಬರ ನಡುವೆ ಎಷ್ಟು ವರ್ಷಗಳ ಪರಿಚಯ? ಒಂದೆರೆಡು ವರ್ಷಗಳ ಹಿಂದೆ ಸ್ಟಾರ್ ಹೋಟೆಲ್ನಲ್ಲಿ ಗಲಾಟೆಯಾಗಿದ್ದು ಯಾಕೆ? ಪಾರ್ಟಿ ಅರೇಂಜ್ ಮಾಡಿದ್ದು ಯಾರು? ಇದರಲ್ಲಿ ಯಾರೆಲ್ಲಾ ಭಾಗವಹಿಸಿದ್ದರು? ಮುಂತಾದ ಹಲವು ಪ್ರಶ್ನೆಗಳನ್ನು ಸಿಸಿಬಿ ಅಧಿಕಾರಿಗಳು ರಾಗಿಣಿ ಅವರನ್ನು ಕೇಳುತ್ತಿದ್ದಾರೆ ಎಂದು ಹೇಳಲಾಗಿದೆ.
ಪ್ರಮುಖವಾಗಿ, ರವಿಶಂಕರ್ ಹೇಳಿಕೆ ಎಷ್ಟು ಸತ್ಯಾಂಶವಿದೆ ಎಂದು ತಿಳಿಯುವುದಕ್ಕೆ ರಾಗಿಣಿ ಅವರನ್ನು ಪ್ರಶ್ನಿಸಲಾಗುತ್ತಿದ್ದು, ಅದಕ್ಕೆಂದೆ ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ವಿಚಾರಣೆ ಮಾಡಲಾಗುತ್ತಿದೆಯಂತೆ. ಇಬ್ಬರ ಉತ್ತರಗಳು ಟ್ಯಾಲಿ ಆಗುತ್ತಾ ಅಂತ ಪರಿಶೀಲಿಸಲಾಗುತ್ತಿದ್ದು. ವ್ಯತ್ಯಾಸ ಕಂಡು ಬಂದರೆ, ಮುಂದೆ ಹೆಚ್ಚಿನ ತನಿಖೆ ನಡೆಸಲಾಗುವ ಸಾಧ್ಯತೆ ಇದೆ.
ಡ್ರಗ್ಸ್ ಮಾಫಿಯಾ ಸಂಬಂಧ ರಾಗಿಣಿ ಸ್ನೇಹಿತ ರವಿಶಂಕರ್ನನ್ನು ಬುಧವಾರ ಬಂಧಿಸಿದ್ದ ಪೊಲೀಸರು ಆತನನ್ನು ಸಾಕಷ್ಟು ವಿಚಾರಣೆ ಮಾಡಿದ್ದರು. ವಿಚಾರಣೆ ವೇಳೆ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಇಂದು ಬೆಳಿಗ್ಗೆ ಯಲಹಂಕದ ಜ್ಯುಡಿಷಿನಲ್ ಲೇಔಟ್ನಲ್ಲಿರುವ ರಾಗಿಣಿಯವರ ಅಪಾರ್ಟ್ಮೆಂಟ್ಗೆ ಸರ್ಚ್ ವಾರೆಂಟ್ನೊಂದಿಗೆ ತೆರಳಿ ಶೋಧಕಾರ್ಯ ನಡೆಸಿದ್ದರು. ಆ ನಂತರ ಅವರನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆತಂದು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.