

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಸಹಜ ಸಾವಿನ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಸಂಸ್ಥೆಯು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಸುಶಾಂತ್ ಸಿಂಗ್ ರಜಪೂತ್, ಜೂನ್ 14ರಂದು ಮುಂಬೈನ ತಮ್ಮ ಫ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅಸಹಜ ಸಾವಿನ ಬಗ್ಗೆ ಗೊಂದಲವಿದ್ದುದರಿಂದ, ಅವರ ಕೇಸ್ನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಈ ವಿಷಯದಲ್ಲಿ ಸಾಕಷ್ಟು ತನಿಖೆ ಮಾಡಿದ ಸಿಬಿಐ ಅಧಿಕಾರಿಗಳು, ಸುಶಾಂತ್ ಸಿಂಗ್ ಅವರದ್ದು ಕೊಲೆ ಎಂದು ಹೇಳುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದರು.
ಯಾವಾಗ ಸಿಬಿಐ ಅಧಿಕಾರಿಗಳು ಹೀಗೆ ಹೇಳಿದ್ದಾರೆ ಎಂಬ ಸುದ್ದಿ ಹರಡಿತೋ, ಆಗಿನಿಂದ ಸಿಬಿಐನವರು ಸದ್ಯದಲ್ಲೇ ಈ ಕೇಸ್ ಬಂದ್ ಮಾಡಲಿದ್ದಾರೆ ಎಂಬ ಮಾತು ಕೇಳಿಬಂತು. ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಸಿಬಿಐನವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಯಿತು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿಬಿಐ, ಸುಶಾಂತ್ ಸಾವಿನ ತನಿಖೆ ಇನ್ನೂ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ, ಈಗಾಗಲೇ ಒಂದು ಸುತ್ತಿನ ತನಿಖೆ ಮುಗಿಸಿರುವ ಸಿಬಿಐ, ಸದ್ಯದಲ್ಲೇ ಎರಡನೆಯ ಸುತ್ತಿನ ತನಿಖೆ ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ.