ನವರಸಗಳ ಬೈರಾಗಿ: ಸಿನಿಮಾ ವಿಮರ್ಶೆ

Byragi
Published on
  • ಚಿತ್ರ: ಬೈರಾಗಿ
  • ನಿರ್ಮಾಣ: ಕೃಷ್ಣ ಸಾರ್ಥಕ್
  • ನಿರ್ದೇಶನ: ವಿಜಯ್ ಮಿಲ್ಟನ್
  • ತಾರಾಗಣ: ಶಿವರಾಜಕುಮಾರ್, ಧನಂಜಯ್, ಪೃಥ್ವಿ ಅಂಬರ್, ಅಂಜಲಿ, ಶಶಿಕುಮಾರ್ ಮುಂತಾದವರು

| ಚೇತನ್ ನಾಡಿಗೇರ್ ಬೆಂಗಳೂರು

ಇನ್ಮುಂದೆ ಕೋಪ ಮಾಡಿಕೊಳ್ಳುವುದಿಲ್ಲ ಎಂದು ತೀರ್ವನಿಸಿರುತ್ತಾನೆ ಶಿವಪ್ಪ. ಅದಕ್ಕೆ ಸರಿಯಾಗಿ ಇನ್​ಸ್ಪೆಕ್ಟರ್ ಸಹ, ‘ಹುಲಿ ಅಂದ್ರೆ ಯಾವಾಗಲೂ ಕೋಪ ಮಾಡ್ಕೊಂಡೇ ಇರಬೇಕಾ? ಅದೂ ಸ್ವಲ್ಪ ಕಾಯಬೇಕು. ಮಲಗಬೇಕು. ನೀನು ಸಹ ಒಂದು ಕಣ್ಣು ತೆರೆದುಕೊಂಡೇ ಮಲಗು’ ಎಂದು ಸಲಹೆ ನೀಡಿರುತ್ತಾರೆ. ಸರಿ, ಹುಲಿ ಕೋಪ-ತಾಪ ಬಿಟ್ಟು ಜನರ ಜತೆಗೆ ಬೆರೆತು ತನ್ನ ಪಾಡಿಗೆ ತಾನಿದ್ದು ಬಿಡುತ್ತದೆ. ಒಂದು ಹಂತದಲ್ಲಿ ಅದಕ್ಕೆ ಲವ್ ಸಹ ಆಗುತ್ತದೆ. ಇನ್ನೇನು ಅದರ ಜೀವನವೇ ಬದಲಾಯಿತು ಎನ್ನುವಷ್ಟರಲ್ಲಿ ಅದೊಂದು ಕೆಟ್ಟ ಘಟನೆ ನಡೆದು ಬಿಡುತ್ತದೆ. ಅಲ್ಲಿಯವರೆಗೂ ಒಂದು ಕಣ್ಣು ತೆರೆದುಕೊಂಡು ಮಲಗಿದ್ದ ಹುಲಿ ಎದ್ದುಬಿಡುತ್ತದೆ. ಆ ಕೆಟ್ಟ ಘಟನೆ ಏನು ಮತ್ತು ಮಲಗಿದ್ದ ಹುಲಿ ಎದ್ದು ಏನು ಮಾಡುತ್ತದೆ ಎಂದು ಹೇಳಿಬಿಟ್ಟರೆ ‘ಬೈರಾಗಿ’ಯಲ್ಲಿ ಹೇಳಲು ಇನ್ನೇನೂ ಉಳಿಯುವುದಿಲ್ಲ.

ಹಾಗೆ ನೋಡಿದರೆ, ಆ ಘಟನೆಯೇ ಚಿತ್ರಕ್ಕೊಂದು ತಿರುವು ಕೊಡುವುದು ಎಂದರೆ ತಪ್ಪಿಲ್ಲ. ಅದಕ್ಕೂ ಮೊದಲು ಚಿತ್ರದಲ್ಲಿ ಮಹತ್ವದ್ದೇನೂ ಆಗಿರುವುದಿಲ್ಲ. ಅದೊಂದು ಘಟನೆಯಿಂದ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಎದುರಾಗುತ್ತದೆ. ಒಬ್ಬರು ಬಲಿಪಶುವಾದರೆ, ಇನ್ನೊಬ್ಬರಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ಮತ್ತೊಬ್ಬರಿಗೆ ಹತಾಶೆ ಆವರಿಸುತ್ತದೆ. ಅಲ್ಲಿಂದ ಕುತೂಹಲ ಹೆಚ್ಚಾಗುವುದಷ್ಟೇ ಅಲ್ಲ, ಕಥೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತದೆ. ನಾಲ್ಕು ಜನ ನಮ್ಮನ್ನು ನೋಡಿ ಹೆಮ್ಮೆ ಪಡುವುದಕ್ಕಿಂತ, ಕನ್ನಡಿ ಮುಂದೆ ನಿಂತಾಗ ಹೆಮ್ಮೆ ಆಗುವಂತೆ ಬದುಕಬೇಕು ಎಂಬ ಸಂದೇಶದೊಂದಿಗೆ ಚಿತ್ರ ಮುಗಿಯುತ್ತದೆ. ‘ಬೈರಾಗಿ’ ಕಮರ್ಷಿಯಲ್ ಚಿತ್ರವಾದರೂ, ಬೇರೆ ತರಹದ ಚಿತ್ರ. ಆದರೆ, ಅಷ್ಟೇ ವಿಭಿನ್ನವಾಗಿ ಮೂಡಿಬಂದಿದೆ ಎಂದು ಹೇಳುವುದು ಕಷ್ಟ. ಚಿತ್ರದ ಆರಂಭ ಹೊರತುಪಡಿಸಿದರೆ, ಮಿಕ್ಕಂತೆ ನಿಧಾನವಾಗಿ ಸಾಗುತ್ತದೆ.

ದ್ವಿತೀಯಾರ್ಧದಲ್ಲಿ ಒಂದಿಷ್ಟು ಕುತೂಹಲ ಕೆರಳಿಸುತ್ತಾದರೂ, ಅದೇ ಕೊನೆಯವರೆಗೂ ಮುಂದುವರೆಯುತ್ತದೆ ಎಂದು ಹೇಳುವುದು ಕಷ್ಟ. ಇಡೀ ಚಿತ್ರ ನಿಂತಿರುವುದು ಶಿವರಾಜಕುಮಾರ್ ಹೆಗಲ ಮೇಲೆ. ನೋವು, ನಲಿವು, ಸಿಟ್ಟು, ಹತಾಶೆ ಎಲ್ಲವನ್ನೂ ಶಿವರಾಜಕುಮಾರ್ ಬಹಳ ಚೆನ್ನಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಧನಂಜಯ್, ಪೃಥ್ವಿ, ಅಂಜಲಿ ಮತ್ತು ಶಶಿಕುಮಾರ್ ಸಹ ಹಿಂದೆ ಬಿದ್ದಿಲ್ಲ. ತಮ್ತಮ್ಮ ಪಾತ್ರಗಳನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಇಷ್ಟೆಲ್ಲಾ ವಿಷಯಗಳು ಮತ್ತು ಪಾತ್ರಗಳ ಮಧ್ಯೆ ಹಾಡುಗಳಾಗಲೀ, ತಾಂತ್ರಿಕ ವಿಚಾರಗಳು ನೆನಪಿನಲ್ಲುಳಿಯುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net