ಸ್ಯಾಂಡಲ್​ವುಡ್​ನಲ್ಲಿ ಇಂದಿನಿಂದ ಹೊಸ ಯುಗ ಆರಂಭ: BRB ಶೂಟಿಂಗ್​ ಶುರು, ಕಿಚ್ಚನ ಲುಕ್​ಗೆ ಫ್ಯಾನ್ಸ್​ ಫಿದಾ! BRB Frist Blood

BRB Frist Blood
Published on

BRB Frist Blood : ಅಭಿನಯ ಚಕ್ರವರ್ತಿ, ಬಾದ್​ಷಾ ಕಿಚ್ಚ ಸುದೀಪ್​ ಅಭಿಮಾನಿಗಳು ಇದುವರೆಗೂ ಎದುರು ನೋಡುತ್ತಿದ್ದ ಆ ಒಂದು ಕ್ಷಣ ಕೊನೆಗೂ ಬಂದೇ ಬಿಡ್ತು. ಇದೇನು ಇಂದು ಅಥವಾ ನಿನ್ನೆಯದ್ದಲ್ಲ, ಅಷ್ಟೇ ಯಾಕೆ ಒಂದೆರೆಡು ವರ್ಷಗಳ ಕಾಯುವಿಕೆಯೂ ಅಲ್ಲ, ಬರೋಬ್ಬರಿ 7 ವರ್ಷಗಳಿಂದ ಈ ಒಂದು ಸಿನಿಮಾಗಾಗಿ ಅಭಿಮಾನಿಗಳು ಬಹಳ ಆಸೆಯಿಂದ ಎದುರು ನೋಡುತ್ತಿದ್ದರು. ಯಾವಾಗ ಶೂಟಿಂಗ್ ಶುರುವಾಗುತ್ತೆ ಅಂತ ಕಾಯುತ್ತಿದ್ದರು. ಇಷ್ಟು ವರ್ಷಗಳಾದ್ರೂ ಸಿನಿಮಾದ ಕ್ರೇಜ್​ ಮಾತ್ರ ಕಮ್ಮಿಯಾಗಿರಲಿಲ್ಲ. ಪ್ರತಿ ಬಾರಿ ಸಿನಿಮಾದ ಅಪ್​ಡೇಟ್​ ಕೇಳುತ್ತಿದ್ದರು. ಇದೀಗ ಅಭಿಮಾನಿಗಳ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದೆ.

ಹೌದು, ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ಸಿನಿಮಾ ಬಿಲ್ಲ ರಂಗ ಬಾಷ (ಬಿಆರ್​ಬಿ) ಸಿನಿಮಾದ ಶೂಟಿಂಗ್​ ಇಂದಿನಿಂದ ಆರಂಭವಾಗಿದೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಇಂದು ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ನಿರ್ದೇಶಕ ಅನೂಪ್​ ಭಂಡಾರಿ ಹಾಗೂ ನಟ ಸುದೀಪ್​, ಇಂದಿನಿಂದ ಶೂಟಿಂಗ್​ ಶುರುವಾಗುತ್ತಿದೆ ಎಂದು ಹೇಳಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಕೊನೆಗೂ ಬಹುನಿರೀಕ್ಷಿತ ಸಿನಿಮಾ ಸೆಟ್ಟೇರಿತು ಎಂದು ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ.

2018ರಲ್ಲಿ ಘೋಷಣೆಯಾದ ಸಿನಿಮಾ

ಬಿಲ್ಲ ರಂಗ ಬಾಷ ಸಿನಿಮಾ 2018ರಲ್ಲೇ ಘೋಷಣೆಯಾಯಿತು. ವಿಕ್ರಾಂತ್​ ರೋಣ ಸಿನಿಮಾಗೂ ಮುಂಚೆಯೇ ಅನೂಪ್​ ಅವರು ಬಿಆರ್​ಬಿ ಸಿನಿಮಾವನ್ನು ಘೋಷಣೆ ಮಾಡಿದ್ದರು. ಆದರೆ, ಆಗಿನ್ನು ಸ್ಕ್ರಿಪ್ಟ್​ ಕೆಲಸ ಇನ್ನೂ ಪೂರ್ಣಗೊಂಡಿರಲಿಲ್ಲ. ಅಲ್ಲದೆ, ಇದೊಂದು ಫ್ಯೂಚರಿಸ್ಟಿಕ್​ ಸಿನಿಮಾ ಆಗಿದ್ದು, ಸಾಕಷ್ಟು ಪ್ಲಾನಿಂಗ್​ ಬೇಕಿತ್ತು ಮತ್ತು ಬಿಗ್​ ಬಜೆಟ್​ ಸಿನಿಮಾ ಆಗಿದ್ರಿಂದ ಸಾಕಷ್ಟು ತಯಾರಿ ಬೇಕಿತ್ತು. ಈ ಕಾರಣಕ್ಕೆ ಈ ಸಿನಿಮಾವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದರು. ಇದರ ನಡುವೆ ವಿಕ್ರಾಂತ್​ ರೋಣ ಸಿನಿಮಾ ಮಾಡಿದರು. ಅಂದಹಾಗೆ, ವಿಕ್ರಾಂತ್​ ರೋಣ ಸಿನಿಮಾ ಸುದೀಪ್​ ಅವರಿಗಾಗಿ ಬರೆದ ಕತೆಯಲ್ಲ. ಆದರೆ, ಸುದೀಪ್ ಅವರಿಗೆ ಆ ಕತೆ ಇಷ್ಟ ಆಗಿ ತಾವೇ ಆ ಸಿನಿಮಾ ಮಾಡಿದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು.

ಬಿಆರ್​ಬಿ ಕ್ರೇಜ್​ ಶುರು

ಇದೀಗ ಬಿಆರ್​ಬಿ ಶೂಟಿಂಗ್​ ಆರಂಭವಾಗಿದ್ದು, ಕ್ರೇಜ್​ ಡಬಲ್​ ಆಗಿದೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಕ್ಕೆ ಮುತ್ತಿಗೆ ಹಾಕಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಬಿಆರ್​ಬಿ ಸದ್ಯ ಸಿಕ್ಕಾಪಟ್ಟೆ ಟ್ರೆಂಡಿಂಗ್​ನಲ್ಲಿದೆ. ಹೊಸ ಪೋಸ್ಟರ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾ ಗ್ಯಾರಂಟಿ ಹಿಟ್​ ಆಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಸ್ಯಾಂಡಲ್​ವುಡ್​ನಲ್ಲಿ ಹೊಸ ಅಧ್ಯಾಯ ಶುರು ಎಂದು ಕೊಂಡಾಡುತ್ತಿದ್ದಾರೆ.

ಜನ್ಮ ದಿನದಂದು ಕಾನ್ಸೆಪ್ಟ್​ ಟೀಸರ್

ಕಳೆದ ಸೆ.2ರಂದು ಸುದೀಪ್​ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಅವರು ಬಿಲ್ಲ ರಂಗ ಬಾಷ ಸಿನಿಮಾದ ಕಾನ್ಸೆಪ್ಟ್​ ಟೀಸರ್ ರಿಲೀಸ್​ ಮಾಡಿದ್ದರು. ವಿಡಿಯೋದಲ್ಲಿ ಹಿಮ, ಮರುಭೂಮಿ, ಹಸಿರು ಪ್ರದೇಶಗಳು ಕಂಡುಬಂದಿವೆ. ಅದೆಲ್ಲಾ ನೋಡಿದ್ರೆ ಬಹುಶಃ ಸುದೀಪ್​ ಅವರು ಮೂರು ಕಾಲಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿಯೇ ಇದೆ.

ಅಂದಹಾಗೆ ಬಿಲ್ಲ ರಂಗ ಬಾಷಾ ಸಿನಿಮಾ ಕಥೆಯು 2209 A.D ನಲ್ಲಿ ನಡೆಯುತ್ತದೆ. ಅಂದರೆ ಮುಂದಿನ 200 ವರ್ಷಗಳ ಕಾಲ್ಪನಿಕ ಕತೆ ಇದಾಗಿದ್ದು, ಸ್ಟೋರಿ ಲೈನ್​ನಿಂದಲೇ ಬಿಲ್ಲ ರಂಗ ಬಾಷ ಸಿನಿಮಾ ಅಭಿಮಾನಿಗಳಲ್ಲಿ ಹೊಸ ಕಿಚ್ಚು ಹುಟ್ಟುಹಾಕಿದೆ. ಕನ್ನಡದ ಮಟ್ಟಿಗೆ ಇದೇ ಮೊದಲ ಬಾರಿಗೆ ಹೊಸ ಪ್ರಯತ್ನಕ್ಕೆ ನಿರ್ದೇಶಕ ಅನೂಪ್​ ಭಂಡಾರಿ ಅವರು ಕೈಹಾಕಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಹನುಮಾನ್​ ಸಿನಿಮಾ ನಿರ್ಮಾಣ ಮಾಡಿದ್ದ ನಿರಂಜನ್​ ರೆಡ್ಡಿ ಮತ್ತು ರೆಡ್ಡಿ ಚೈತನ್ಯ ರೆಡ್ಡಿ, ಪ್ರೈಮ್​ ಶೋ ಬ್ಯಾನರ್​ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net