ಮಾಫಿಯಾದಲ್ಲಿ ಅಪ್ಪ-ಮಗ ಇಬ್ಬರೂ ಪೊಲೀಸ್ ಅಧಿಕಾರಿ..

Mafia
Published on

ಬೆಂಗಳೂರು: ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಜತೆಯಾಗಿ ನಟಿಸುತ್ತಿರುವುದು ಹೊಸದೇನಲ್ಲ. ಈಗಾಗಲೇ ಎರಡು ಚಿತ್ರಗಳಲ್ಲಿ ಅವರಿಬ್ಬರೂ ನಟಿಸಿದ್ದಾರೆ. ಒಂದರಲ್ಲಿ ಅಪ್ಪ-ಮಗನಾಗಿ, ಇನ್ನೊಂದರಲ್ಲಿ ವಿರುದ್ಧ ಪಾತ್ರಗಳಲ್ಲಿ ನಟಿಸಿದ್ದರು. ಇಬ್ಬರೂ ಒಂದೇ ಚಿತ್ರದಲ್ಲಿ ಪೊಲೀಸ್ ಅಧಿಕಾರಿಗಳಾಗಿ ನಟಿಸಿರಲಿಲ್ಲ. ಅಂಥದ್ದೊಂದು ಅವಕಾಶ ‘ಮಾಫಿಯಾ’ ಚಿತ್ರದಲ್ಲಿ ಸಿಕ್ಕಿದೆ. ಇಲ್ಲಿ ದೇವರಾಜ್ ಸೀನಿಯರ್ ಪೊಲೀಸ್ ಅಧಿಕಾರಿಯಾದರೆ, ಪ್ರಜ್ವಲ್ ಜ್ಯೂನಿಯರ್ ಆಗಿ ನಟಿಸುತ್ತಿದ್ದು, ‘ಮಾಫಿಯಾ’ವೊಂದರ ಹೆಡೆಮುರಿ ಕಟ್ಟುವುದಕ್ಕೆ ಸಜ್ಜಾಗುತ್ತಿದ್ದಾರೆ.

ಕಳೆದ ವಾರ ಶುರುವಾದ ‘ಮಾಫಿಯಾ’ದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿದ್ದು, ಅಲ್ಲಿ ಚಿತ್ರಕ್ಕಾಗಿ ಕಂಟ್ರೋಲ್ ರೂಂ ಸೆಟ್ ನಿರ್ವಿುಸಲಾಗಿದೆ. ದೇವರಾಜ್ ಮತ್ತು ಪ್ರಜ್ವಲ್ ಜತೆಗೆ ಸಾಧು ಕೋಕಿಲ ಸಹ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಈ ಮೂವರು ಅಭಿನಯಿಸುತ್ತಿರುವ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತಿದೆ. ಒಟ್ಟು 11 ದಿನಗಳ ಕಾಲ, ಈ ಸೆಟ್​ನಲ್ಲಿ ಚಿತ್ರೀಕರಣ ಮಾಡಲಾಗುತ್ತದಂತೆ.

ನವ ನಿರ್ದೇಶಕರ ಜತೆಗೆ ನಟಿಸುತ್ತಿರುವ ಖುಷಿಯನ್ನು ಹಂಚಿಕೊಂಡ ದೇವರಾಜ್, ‘ನಿರ್ದೇಶಕ ಲೋಹಿತ್ ಚಿಕ್ಕ ಹುಡುಗ. ಅವರು ಕೆಲಸ ಮಾಡುವ ರೀತಿ ಚೆನ್ನಾಗಿದೆ’ ಎಂದರು. ‘ಇಲ್ಲಿನ ತಂಡ ನೋಡಿದರೆ ಯಾರೂ ಹೊಸಬರು ಅನಿಸುವುದಿಲ್ಲ, ಎಲ್ಲರೂ ಪ್ರೊಫೆಶನಲ್ ಆಗಿ ಕೆಲಸ ಮಾಡುತ್ತಿದ್ದಾರೆ’ ಎನ್ನುವುದರ ಜತೆಗೆ ಅಪ್ಪ-ಮಗನ ಜತೆಗೆ ನಟಿಸುತ್ತಿರುವುದು ಬಹಳ ಸಂತೋಷವಾಗುತ್ತಿದೆ ಎಂದರು ಸಾಧುಕೋಕಿಲ.

‘ಖುಷಿಯ ವಿಚಾರವೆಂದರೆ, ಅಪ್ಪನ ಜತೆಗೆ ನಟಿಸುತ್ತಿರುವುದು. ಸಾಧು ಸಹ ಇದ್ದಾರೆ. ಇದೊಂದು ಒಳ್ಳೆಯ ಚಿತ್ರವಾಗಲಿದೆ ಎಂಬ ನಿರೀಕ್ಷೆ ಇದೆ’ ಎಂಬುದು ಪ್ರಜ್ವಲ್ ಮಾತು. ನಿರ್ವಪಕ ಬೆಂಗಳೂರು ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net