

ಬೆಂಗಳೂರು: 'ರತ್ನನ್ ಪ್ರಪಂಚ'ದಲ್ಲಿ ಉಡಾಳ್ ಬಾಬು ಆಗಿ ಪ್ರೇಕ್ಷಕರನ್ನು ರಂಜಿಸಿದ್ದ ಪ್ರಮೋದ್, ಈಗ ‘ಬಾಂಡ್ ರವಿ’ಯಾಗಿ ತೆರೆ ಮೇಲೆ ಬರೋಕೆ ಸಜ್ಜಾಗಿದ್ದಾರೆ. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಮೊದಲ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ನ್ನು ಸಿನಿಮಾ ಪತ್ರಕರ್ತರು ಬಿಡುಗಡೆ ಮಾಡಿದ್ದು ವಿಶೇಷ.
'ಬಾಂಡ್ ರವಿ' ಕುರಿತು ಮಾತನಾಡುವ ಪ್ರಮೋದ್, 'ನಾನು ಈ ಸಿನಿಮಾವನ್ನು ಇಷ್ಟಪಟ್ಟು ಮಾಡಿದ್ದೇನೆ. ಈ ಸಿನಿಮಾ ಮೇಲೆ ಕೆಟ್ಟ ನಂಬಿಕೆ ಇದೆ. ಅಷ್ಟು ಒಳ್ಳೆಯ ಕಂಟೆಂಟ್, ಕಥೆ ಸಿನಿಮಾದಲ್ಲಿದೆ. ನಾನು ಕೂಡ ಈ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತೇನೆ' ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಪ್ರಮೋದ್.
ಪ್ರಮೋದ್ಗೆ ಚಿತ್ರದಲ್ಲಿ ನಾಯಕಿಯಾಗಿರುವವರು ಕಾಜಲ್ ಕುಂದರ್. ನಂಬಿಕೆ ಇಟ್ಟು ಅವಕಾಶ ನೀಡಿದ ಚಿತ್ರತಂಡದವರಿಗೆ ಥ್ಯಾಂಕ್ಸ್ ಹೇಳುವ ಅವರು, 'ನನ್ನ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆ ಇದೆ. ಪ್ರಮೋದ್ ಅವರ ಜೊತೆ ನಟಿಸಿದ್ದು ತುಂಬಾ ಖುಷಿ ಕೊಟ್ಟಿದೆ' ಎನ್ನುತ್ತಾರೆ.
ಈ ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. 'ನನಗೂ ಈ ಸಿನಿಮಾ ಬಗ್ಗೆ ಅಪಾರ ಭರವಸೆ ಇದೆ. 'ಮುಂಗಾರು ಮಳೆ' ಕೂಡ ಹೀಗೆ ಆರಂಭವಾಗಿದ್ದು. ಅದು ದೊಡ್ಡ ಹಿಟ್ ಆಯ್ತು ಈ ಸಿನಿಮಾ ಕೂಡ ಹಿಟ್ ಆಗುತ್ತೆ. ಪ್ರಮೋದ್ ಮತ್ತು ಕಾಜಲ್ ಕುಂದರ್ ಇಬ್ಬರೂ ಅಮೋಘವಾಗಿ ನಟಿಸಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
'ಬಾಂಡ್ ರವಿ' ಚಿತ್ರವನ್ನು ಪ್ರಜ್ವಲ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ- ಚಿತ್ರಕಥೆಯೂ ಅವರದ್ದೇ. ಇದೊಂದು ಆಕ್ಷನ್-ಲವ್ ಸ್ಟೋರಿ ಚಿತ್ರವಾಗಿದ್ದು, ಬೆಂಗಳೂರು, ಶಿವಮೊಗ್ಗ, ಕೊಡಚಾದ್ರಿ, ಕುದುರೆಮುಖ, ಉಡುಪಿ, ಮಂಗಳೂರು ಭಾಗಗಳಲ್ಲಿ ಬಾಂಡ್ ರವಿ ಚಿತ್ರೀಕರಣ ನಡೆಸಲಾಗಿದೆ.
ಲೈಫ್ ಲೈನ್ ಫಿಲಂ ಬ್ಯಾನರ್ನಡಿ ಈ ಚಿತ್ರವನ್ನು ನರಸಿಂಹಮೂರ್ತಿ ನಿರ್ಮಿಸಿದ್ದು, ಚಿತ್ರದಲ್ಲಿ ಪ್ರಮೋದ್ ಮತ್ತು ಕಾಜಲ್ ಕುಂದರ್ ಜತೆಗೆ ರವಿಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಂತಾದವರಿದ್ದಾರೆ. ಚಿತ್ರಕ್ಕೆ ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ.