

ಬೆಂಗಳೂರು: ಬಾಂಡ್ ರವಿ ಎಂದರೆ ನೆನಪಾಗುವುದು ಪುನೀತ್ ರಾಜಕುಮಾರ್. ಸೂರಿ ನಿರ್ದೇಶನದ "ಅಣ್ಣಾ ಬಾಂಡ್' ಚಿತ್ರದಲ್ಲಿ ಪುನೀತ್, ಬಾಂಡ್ ರವಿಯಾಗಿ ಕಾಣಿಸಿಕೊಂಡಿದ್ದರು. ಈಗ ಅದೇ ಹೆಸರಿನ ಚಿತ್ರವೊಂದು ಶುರುವಾಗಿದ್ದು, ಅದರಲ್ಲಿ "ಪ್ರೀಮಿಯರ್ ಪದ್ಮಿನಿ' ಖ್ಯಾತಿಯ ಪ್ರಮೋದ್, "ಬಾಂಡ್ ರವಿ'ಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಈ ಚಿತ್ರದ ಮುಹೂರ್ತ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ವಿನೋದ್ ಪ್ರಭಾಕರ್ ಮತ್ತು ಧ್ರುವ ಸರ್ಜಾ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರವನ್ನು ಪ್ರಜ್ವಲ್ ನಿರ್ದೇಶನ ಮಾಡಿದರೆ, ಈ ಹಿಂದೆ "ಮಾದ ಮತ್ತು ಮಾನಸಿ' ಚಿತ್ರ ನಿರ್ಮಿಸಿದ್ದ ನರಸಿಂಹಮೂರ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಅಪ್ಪು ಸಾರ್ ಅಭಿಮಾನಿಯಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಮಾತು ಶುರು ಮಾಡಿದ ಪ್ರಮೋದ್, ""ಅಣ್ಣಾ ಬಾಂಡ್' ಚಿತ್ರದಲ್ಲಿ ಅಪ್ಪು ಸಾರ್ ಮಾಡಿದ್ದ ಬಾಂಡ್ ರವಿ ಪಾತ್ರದ ತರಹವೇ ನನ್ನ ಪಾತ್ರವೂ ಇರುತ್ತದೆ. ಹಾಗಾಗಿ ಅವರ ಮ್ಯಾನರಿಸಂ, ನಟನಾ ಶೈಲಿಯನ್ನು ನೋಡಿ ಕಲಿಯುತ್ತಿದ್ದೇನೆ' ಎನ್ನುತ್ತಾರೆ.
ಪ್ರಮೋದ್ಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸುತ್ತಿದ್ದು, ಕಾಜಲ್ ಈ ಹಿಂದೆ "ಮಾಯಾಕನ್ನಡಿ' ಎಂಬ ಚಿತ್ರದಲ್ಲಿ ನಟಿಸಿದ್ದರು. ರವಿ ಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಂತಾದವರು ಚಿತ್ರದಲ್ಲಿದ್ದಾರೆ. ಮನೋಮೂರ್ತಿ ಸಂಗೀತ ಮತ್ತು ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.