

ಮುಂಬೈ: ವಿಶ್ವದ ನಂ.1 ಶ್ರೀಮಂತ, ತಂತ್ರಜ್ಞಾನ ಕ್ಷೇತ್ರದ ದೈತ್ಯ ಎಲಾನ್ ಮಸ್ಕ್ ಅವರ ಹೊಸ ಸಂಶೋಧನೆಯನ್ನು "ರಾಮಾಯಣ" ದ‘ಪುಷ್ಪಕ ವಿಮಾನ’ಕ್ಕೆ ಹೋಲಿಸಿ ಬಾಲಿವುಡ್ ನಟ ರಣಬೀರ್ ಕಪೂರ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದಾರೆ. ಬಹುನಿರೀಕ್ಷಿತ ಪೌರಾಣಿಕ ಸಿನಿಮಾ ‘ರಾಮಾಯಣದ ಪ್ರಚಾರದ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುವಾಗ ರಣಬೀರ್ ನೀಡಿದ ಈ ಹೇಳಿಕೆ ಸದ್ಯ ಸಖತ್ ವೈರಲ್ ಆಗುತ್ತಿದೆ.
ಸಂದರ್ಶನದಲ್ಲಿ ಮಾತನಾಡುತ್ತಾ ರಣಬೀರ್ ಕಪೂರ್, ಎಲಾನ್ ಮಸ್ಕ್ ಇತ್ತೀಚೆಗೆ ಪ್ರದರ್ಶಿಸಿದ ಹಾರುವ ಕಾರು 'ಟೆಸ್ಲಾ ರೋಡ್‌ಸ್ಟರ್' ಅನ್ನು ಪ್ರಸ್ತಾಪಿಸಿದ್ದಾರೆ. "ಎಲಾನ್ ಮಸ್ಕ್ ಇತ್ತೀಚೆಗೆ ಹಾರುವ ಕಾರೊಂದನ್ನು ಕಂಡುಹಿಡಿದಿದ್ದಾರೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ.
ಆದರೆ ನನ್ನ ಪ್ರಕಾರ, ಭಾರತವು 5,000 ವರ್ಷಗಳ ಹಿಂದೆಯೇ ಇಂತಹದ್ದೊಂದು ಅದ್ಭುತ ಸಾಧನೆಯನ್ನು ಮಾಡಿ ಮುಗಿಸಿತ್ತು" ಎಂದು ಹೇಳಿದ್ದಾರೆ. ತಾನಾಗಿಯೇ ಚಲಿಸುವ ಮತ್ತು ಗಾಳಿಯಲ್ಲಿ ತೇಲುವ ಶಕ್ತಿ ಹೊಂದಿದ್ದ ದೈವಿಕ ವಾಹನವಾದ ಪುಷ್ಪಕ ವಿಮಾನವನ್ನು ಮಸ್ಕ್ ಅವರ ಆಧುನಿಕ ತಂತ್ರಜ್ಞಾನದ ಕಾರಿಗೆ ಹೋಲಿಸಿದ್ದು ನೆಟ್ಟಿಗರ ಕಣ್ಣನ್ನು ಕೆಂಪಾಗಿಸಿದೆ.
ರಣಬೀರ್ ಅವರ ಈ ಹೇಳಿಕೆ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು, ತಮಾಷೆಯ ಮೀಮ್‌ಗಳು ಮತ್ತು ತೀವ್ರ ಟೀಕೆಗಳು ಪ್ರಾರಂಭವಾಗಿದೆ. ಸಿನಿಮಾ ಪ್ರಚಾರಕ್ಕಾಗಿ ಇತಿಹಾಸ ಮತ್ತು ವಿಜ್ಞಾನವನ್ನು ಈ ರೀತಿ ತಳುಕು ಹಾಕುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.
ಸಾಮಾನ್ಯ ಜನರಿಗೆ ಸಿನಿಮಾ ಟಿಕೆಟ್ ಮಾರಾಟ ಮಾಡಲು ಇಂತಹ ಚಮತ್ಕಾರದ ಮಾತುಗಳನ್ನು ಆಡಲೇಬೇಕಾಗುತ್ತದೆ. ರಣಬೀರ್ ಅವರ ವ್ಯಕ್ತಿತ್ವಕ್ಕೆ ಇದು ಮುಜುಗರ ತಂದರೂ, ಬಾಕ್ಸಾಫೀಸ್ ಕಲೆಕ್ಷನ್‌ಗಾಗಿ ಇದು ಅನಿವಾರ್ಯ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, "ಚಿತ್ರದ ಬಜೆಟ್ ವಸೂಲಿ ಮಾಡಲು, ಇಂತಹ ಮೂರ್ಖತನದ ಮಾತುಗಳೇ ಬಂಡವಾಳ ಎಂದು ಕಟುವಾಗಿ ಟೀಕಿಸಿದ್ದಾರೆ.
ಹಿಂದೂ ಪುರಾಣಗಳ ಪ್ರಕಾರ, ಪುಷ್ಪಕ ವಿಮಾನವನ್ನು ದೇವಶಿಲ್ಪಿ ವಿಶ್ವಕರ್ಮನು ಬ್ರಹ್ಮದೇವನಿಗಾಗಿ ಸೃಷ್ಟಿಸಿದನು. ಆ ಬಳಿಕ ಬ್ರಹ್ಮನು ಅದನ್ನು ಸಂಪತ್ತಿನ ಒಡೆಯ ಕುಬೇರನಿಗೆ ನೀಡಿದನು. ನಂತರ ಲಂಕಾಧಿಪತಿ ರಾವಣನು ಯುದ್ಧದಲ್ಲಿ ಕುಬೇರನನ್ನು ಮಣಿಸಿ, ಈ ವಿಮಾನವನ್ನು ತನ್ನ ವಶಕ್ಕೆ ಪಡೆದುಕೊಂಡನು. ರಾಮಾಯಣ ಮಹಾಕಾವ್ಯದ ಪ್ರಕಾರ, ಸೀತೆಯನ್ನು ಅಪಹರಿಸಿ ಲಂಕೆಗೆ ಕರೆದೊಯ್ಯಲು ರಾವಣ ಇದೇ ಪುಷ್ಪಕ ವಿಮಾನವನ್ನು ಬಳಸಿದ್ದನು.
ಇತ್ತೀಚೆಗೆ ಟೆಕ್ಸಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆ ಮುಂದಿನ ಪೀಳಿಗೆಯ ‘ರೋಡ್‌ಸ್ಟರ್’ (Tesla Roadster) ವಾಹನವನ್ನು ಜಗತ್ತಿಗೆ ಪರಿಚಯಿಸಿತ್ತು. ಈ ಪ್ರದರ್ಶನದಲ್ಲಿ ಕಾರು ನೆಲದಿಂದ ಹಲವು ಅಡಿ ಮೇಲಕ್ಕೆ ಏರುವುದು, ಗಾಳಿಯಲ್ಲೇ ಪಲ್ಟಿ ಹೊಡೆಯುವುದು ಹಾಗೂ ಸುರಕ್ಷಿತವಾಗಿ ರಸ್ತೆಗೆ ಇಳಿಯುವುದನ್ನು ಲೈವ್ ಆಗಿ ತೋರಿಸಲಾಗಿತ್ತು.
ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ಸಂಸ್ಥೆಯ ಅತ್ಯಾಧುನಿಕ ರಾಕೆಟ್ ತಂತ್ರಜ್ಞಾನವನ್ನು ಕಾರಿನಲ್ಲಿ ಬಳಸಲಾಗಿದೆ. ಕಾರಿನಲ್ಲಿರುವ ಅಧಿಕ ಒತ್ತಡದ ಕೋಲ್ಡ್-ಗ್ಯಾಸ್ ಥ್ರಸ್ಟರ್‌ಗಳು ಕಾರನ್ನು ಗಾಳಿಯಲ್ಲಿ ಎತ್ತಿ ನಿಲ್ಲಿಸಲು ಮತ್ತು ಚಲಿಸಲು ನೆರವಾಗುತ್ತವೆ. ಇಂತಹ ಅತ್ಯಾಧುನಿಕ ವೈಜ್ಞಾನಿಕ ಆವಿಷ್ಕಾರವನ್ನು, ಧಾರ್ಮಿಕ ಮಹಾಕಾವ್ಯದ ಕಲ್ಪನೆಗೆ ಹೋಲಿಸಿರುವುದು ಈಗ ಬಾಲಿವುಡ್ ಅಂಗಳದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ, (ಏಜೆನ್ಸೀಸ್).