ಹುಟ್ಟು ಹಬ್ಬದಂದೇ ಎದುರಾದ ಜವರಾಯ: ಜಲಂಧರ್‌ನಲ್ಲಿ ಭೀಕರ ಕಾರು ಅಪಘಾತ; ಹನಿ ಸಿಂಗ್​ ಸೋದರಳಿಯ ಸೇರಿ ಇಬ್ಬರ ದುರ್ಮರಣ! Yo Yo Honey Singh Nephew

Yo Yo Honey Singh's nephew, Vidit Olak, who died in a road accident in Jalandhar, and the car involved in the accident.
ಜಲಂಧರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯೋ ಯೋ ಹನಿ ಸಿಂಗ್ ಅವರ ಸೋದರಳಿಯ ವಿದಿತ್ ಓಲಾಕ್ ಮತ್ತು ಅಪಘಾತಕ್ಕೀಡಾದ ಕಾರು.
Published on: 

ಜಲಂದರ್​​: ಭಾನುವಾರ ಮುಂಜಾನೆ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಭೀಕರ ರಸ್ತೆ ಅಪಘಾತ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಈ ದುರಂತದಲ್ಲಿ ಬಾಲಿವುಡ್‌ನ ಖ್ಯಾತ ಗಾಯಕ ಯೋ ಯೋ ಹನಿ ಸಿಂಗ್ ಅವರ ಸೋದರಳಿಯ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ವರದಿಯಾಗಿದೆ.

ಖ್ಯಾತ ಉದ್ಯಮಿಗಳ ಮಕ್ಕಳು ಬಲಿ

ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಯುವಕರನ್ನು ವಿದಿತ್ ಓಲಾಕ್ ಮತ್ತು ಆರವ್ ತಲ್ವಾರ್ ಎಂದು ಗುರುತಿಸಲಾಗಿದೆ. ಮೃತ ವಿದಿತ್ ಓಲಾಕ್, ಖ್ಯಾತ ಪಂಜಾಬಿ ಮ್ಯೂಸಿಕ್ ಕಂಪನಿ 'ಸ್ಪೀಡ್ ರೆಕಾರ್ಡ್ಸ್' ಮಾಲೀಕ ದಿನೇಶ್ ಅವರ ಪುತ್ರ ಹಾಗೂ ರ‍್ಯಾಪರ್ ಹನಿ ಸಿಂಗ್ ಅವರ ಸ್ವಂತ ಸೋದರಳಿಯ.

ಇನ್ನು ಮತ್ತೊಬ್ಬ ಮೃತ ಯುವಕ ಆರವ್ ತಲ್ವಾರ್, ಪ್ರಸಿದ್ಧ 'ಪ್ಯಾಪಿ ಸ್ವೀಟ್ಸ್' ಮಾಲೀಕರ ಮಗ. ಇಬ್ಬರೂ ಶ್ರೀಮಂತ ಮತ್ತು ಪ್ರತಿಷ್ಠಿತ ಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆ ಪಂಜಾಬ್ ಮ್ಯೂಸಿಕ್ ಇಂಡಸ್ಟ್ರಿ ಹಾಗೂ ಸ್ಥಳೀಯ ಉದ್ಯಮ ರಂಗದಲ್ಲಿ ತೀವ್ರ ಆಘಾತ ಸೃಷ್ಟಿಯಾಗಿದೆ.

ನಡೆದಿದ್ದೇನು?

ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಯುವಕರು ತಮ್ಮ ಕಾರಿನಲ್ಲಿ ಮನೆಗೆ ಮರಳುತ್ತಿದ್ದರು. ಬೆಳಗಿನ ಜಾವ ಸುಮಾರು 3 ಗಂಟೆಯ ಆಸುಪಾಸಿನಲ್ಲಿ ಜಲಂಧರ್‌ನ ಪೊಲೀಸ್ ಲೈನ್ಸ್ ಬಳಿಯ ಫ್ಲೈಓವರ್ ಮೇಲೆ ಕಾರು ವೇಗವಾಗಿ ಸಾಗುತ್ತಿತ್ತು.

ಆ ಸಮಯದಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಸಿಬ್ಬಂದಿ ಮೇಲ್ಸೇತುವೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಕಸ ತುಂಬಲು ರಸ್ತೆ ಬದಿಯಲ್ಲೇ ಟ್ರಾಕ್ಟರ್-ಟ್ರಾಲಿಯನ್ನು ನಿಲ್ಲಿಸಲಾಗಿತ್ತು. ವೇಗವಾಗಿ ಬಂದ ಕಾರು ನೇರವಾಗಿ ನಿಂತಿದ್ದ ಟ್ರಾಕ್ಟರ್‌ಗೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಒಳಗೆ ಕುಳಿತಿದ್ದ ಇಬ್ಬರೂ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

Also Read
ಸಿಖ್ ಸಮುದಾಯ ನಿಮ್ಮನ್ನು ಎಂದಿಗೂ ಕ್ಷಮಿಸಲ್ಲ: "ಸೋನಿಯಾ ಜೀ, ನಿಮ್ಮ ಮಗ ಪ್ರಧಾನಿ ಆಗಲ್ಲ" ಕಾಂಗ್ರೆಸ್​​ ವಿರುದ್ಧ ಅಮಿತ್​ ಶಾ ಅಬ್ಬರ! Amit Shah
Yo Yo Honey Singh's nephew, Vidit Olak, who died in a road accident in Jalandhar, and the car involved in the accident.

ಪೊಲೀಸರು ಹೇಳಿದ್ದೇನು?

ಘಟನೆ ಕುರಿತು ಮಾಹಿತಿ ಹಂಚಿಕೊಂಡ ಬರಾದರಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಾಹಿಲ್ ಚೌಧರಿ, "ಮುಂಜಾನೆ 3 ಗಂಟೆ ಸುಮಾರಿಗೆ ಕಂಟ್ರೋಲ್ ರೂಂಗೆ ಅಪಘಾತದ ಕರೆ ಬಂದಿತ್ತು. ತಕ್ಷಣವೇ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು. ಪಾರ್ಟಿ ಮುಗಿದ ನಂತರ ಕಾರಿನಲ್ಲಿ ಐವರು ಹೊರಟಿದ್ದರು. ಆದರೆ, ಮಾರ್ಗಮಧ್ಯದಲ್ಲೇ ಮೂವರು ಸ್ನೇಹಿತರು ತಮ್ಮ ಮನೆ ಹತ್ತಿರ ಇಳಿದು ಹೋಗಿದ್ದರು. ಉಳಿದ ಇಬ್ಬರು ಪ್ರಯಾಣ ಮುಂದುವರಿಸಿದಾಗ ಈ ದುರ್ಘಟನೆ ನಡೆದಿದೆ" ಎಂದು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು ನಜ್ಜುಗುಜ್ಜಾಗಿದ್ದ ಕಾರಿನಿಂದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ನಡೆಸಲಾಗಿದೆ. ಆದರೆ, ಮೃತ ಯುವಕರ ಕುಟುಂಬಸ್ಥರು ಯಾವುದೇ ರೀತಿಯ ಕಾನೂನು ಕ್ರಮ ಅಥವಾ ತನಿಖೆ ಬೇಡವೆಂದು ಲಿಖಿತವಾಗಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ, ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಕಣ್ಣೀರಿಟ್ಟ ಹನಿ ಸಿಂಗ್!

ತಮ್ಮ ಮುದ್ದಿನ ಅಳಿಯನ ಅಕಾಲಿಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗಾಯಕ ಯೋ ಯೋ ಹನಿ ಸಿಂಗ್ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ನೋವು ಹಂಚಿಕೊಂಡಿರುವ ಅವರು, ಕುಟುಂಬಕ್ಕೆ ಎದುರಾಗಿರುವ ಈ ಭರಿಸಲಾಗದ ನಷ್ಟವನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮೃತ ಯುವಕರ ಆತ್ಮಕ್ಕೆ ಶಾಂತಿ ಕೋರಿ ಕಂಬನಿ ಮಿಡಿಯುತ್ತಿದ್ದಾರೆ, (ಏಜೆನ್ಸೀಸ್​).