ಸಾಯಿ ಪಲ್ಲವಿಯ ವಾರಿಯರ್ ಸೀತಾ ಲುಕ್‌ಗೆ ವಿರೋಧ: ಟ್ರೋಲಿಗರಿಗೆ ಲಾರಾ ದತ್ತಾ ಖಡಕ್ ಕ್ಲಾಸ್! Ramayana movie

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ನಿಮಾದಲ್ಲಿ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿನಿಮಾದ ಮೊದಲ ನೋಟ ಬಿಡುಗಡೆಯಾದಾಗಿನಿಂದಲೂ ಸೀತೆಯ ರೂಪ, ಸೌಂದರ್ಯ, ಕೂದಲಿನ ವಿನ್ಯಾಸ ಮತ್ತು ಉಚ್ಚಾರಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. Ramayana movie
ಸಾಯಿ ಪಲ್ಲವಿಯ ವಾರಿಯರ್ ಸೀತಾ ಲುಕ್‌ಗೆ ವಿರೋಧ
ಸಾಯಿ ಪಲ್ಲವಿಯ ವಾರಿಯರ್ ಸೀತಾ ಲುಕ್‌ಗೆ ವಿರೋಧWEB
Published on: 

ಮುಂಬೈ: ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ನಿಮಾದಲ್ಲಿ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿನಿಮಾದ ಮೊದಲ ನೋಟ ಬಿಡುಗಡೆಯಾದಾಗಿನಿಂದಲೂ ಸೀತೆಯ ರೂಪ, ಸೌಂದರ್ಯ, ಕೂದಲಿನ ವಿನ್ಯಾಸ ಮತ್ತು ಉಚ್ಚಾರಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದೀಗ ಸಿನಿಮಾದಲ್ಲಿ ಸೀತೆಯನ್ನು ಯೋಧೆಯಾಗಿ ಚಿತ್ರಿಸಿರುವ ದೃಶ್ಯಗಳ ಬಗ್ಗೆಯೂ ಟೀಕೆಗಳು ಕೇಳಿಬರುತ್ತಿವೆ. ಈ ವಿವಾದದ ನಡುವೆಯೇ ನಟಿ ಲಾರಾ ದತ್ತಾ ಸಾಯಿ ಪಲ್ಲವಿ ಅವರ ಪಾತ್ರವನ್ನು ಸಮರ್ಥಿಸಿಕೊಂಡಿದ್ದಾರೆ.

ಸೀತೆ ಯುದ್ಧಕಲೆ ಕಲಿತ ಯೋಧೆಯಾಗಿದ್ದರೆ ತಪ್ಪೇನು?

ಚಿತ್ರದಲ್ಲಿ ಸೀತೆಯನ್ನು ಅಸಹಾಯಕ ಮಹಿಳೆಯಾಗಿ ತೋರಿಸಿಲ್ಲ. ಅರಣ್ಯವಾಸದ ಸಂದರ್ಭದಲ್ಲಿ ರಾಮ ಮತ್ತು ಲಕ್ಷ್ಮಣರೊಂದಿಗೆ ರಾಕ್ಷಸರ ವಿರುದ್ಧ ಹೋರಾಡುವ ಧೈರ್ಯಶಾಲಿ ಮಹಿಳೆಯಾಗಿ ಚಿತ್ರಿಸಲಾಗಿದೆ. ಕತ್ತಿವರಸೆ, ಬಿಲ್ಲುವಿದ್ಯೆ ಸೇರಿದಂತೆ ಯುದ್ಧಕಲೆಗಳಲ್ಲಿ ಪರಿಣತಿ ಹೊಂದಿರುವ ಯೋಧೆಯ ರೂಪದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಣವೇ ಕೆಲವರ ಆಕ್ಷೇಪಕ್ಕೆ ಕಾರಣವಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಲಾರಾ ದತ್ತಾ, ರಾಜಮನೆತನಗಳಲ್ಲಿ ಜನಿಸಿದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಆ ಕಾಲದಲ್ಲಿ ಕಲೆಗಳು ಹಾಗೂ ಆಯುಧ ಬಳಕೆಯ ತರಬೇತಿ ನೀಡಲಾಗುತ್ತಿತ್ತು ಎಂಬ ಸಾಧ್ಯತೆಯನ್ನು ಪರಿಗಣಿಸಬೇಕು ಎಂದಿದ್ದಾರೆ. ಹಾಗಿರುವಾಗ ಸೀತೆಯೂ ಯುದ್ಧಕಲೆಯಲ್ಲಿ ತರಬೇತಿ ಪಡೆದಿರಬಹುದು ಎಂದು ಕಲ್ಪಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

14 ವರ್ಷಗಳ ಕಾಲ ಅರಣ್ಯವಾಸಕ್ಕೆ ತೆರಳಲು ನಿರ್ಧರಿಸುವ ಸೀತೆ ಧೈರ್ಯ ಮತ್ತು ಮನೋಬಲ ಹೊಂದಿದ್ದ ಮಹಿಳೆಯಾಗಿರಬೇಕು. ಅಂತಹ ಪರಿಸ್ಥಿತಿಯಲ್ಲಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಯಾವುದಾದರೂ ಆಯುಧವನ್ನು ಕೈಗೆತ್ತಿಕೊಳ್ಳುವುದು ಸಹಜ. ಮಹಿಳೆಯೊಬ್ಬಳು ಸಂಕಷ್ಟ ಎದುರಾದಾಗ ಅಸಹಾಯಕಳಾಗಿಯೇ ಇರಬೇಕೆಂದಿಲ್ಲ ಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಅನಿರುದ್ಧ್-ಕಾವ್ಯಾ ಮದುವೆ ಸಂಭ್ರಮದಲ್ಲಿ ರಜನಿಕಾಂತ್ ಭರ್ಜರಿ ಡ್ಯಾನ್ಸ್! ವಿಡಿಯೋ ವೈರಲ್...Rajani dance

ಕೈಕೇಯಿಯೂ ಸಾಮಾನ್ಯ ಮಹಿಳೆಯಲ್ಲ ಎಂದ ಲಾರಾ

ರಾಮಾಯಣ ಸಿನಿಮಾದಲ್ಲಿ ಕೈಕೇಯಿ ಪಾತ್ರ ನಿರ್ವಹಿಸಿರುವ ಲಾರಾ ದತ್ತಾ, ತಮ್ಮ ಪಾತ್ರದ ಹಿನ್ನೆಲೆಯ ಬಗ್ಗೆಯೂ ಮಾತನಾಡಿದ್ದಾರೆ. ಕೈಕೇಯಿಯನ್ನು ರಾಮನ ವನವಾಸಕ್ಕೆ ಕಾರಣಳಾದ ಖಳನಾಯಕಿಯಾಗಿ ಮಾತ್ರ ನೋಡಲಾಗುತ್ತದೆ. ಆದರೆ ಆಕೆಯ ವ್ಯಕ್ತಿತ್ವದಲ್ಲಿ ಹಲವು ಭಾವನೆಗಳು, ಆಂತರಿಕ ಸಂಘರ್ಷ, ಪಶ್ಚಾತ್ತಾಪ ಮತ್ತು ದುಃಖಗಳಿದ್ದವು ಎಂದು ಅವರು ವಿವರಿಸಿದ್ದಾರೆ. ರಾಜ ದಶರಥನ ಮೂರನೇ ಪತ್ನಿಯಾಗಿದ್ದ ಕೈಕೇಯಿ, ಭರತನ ತಾಯಿಯಾಗಿದ್ದಳು. ದಶರಥನಿಂದ ಪಡೆದಿದ್ದ ಎರಡು ವರಗಳನ್ನು ಬಳಸಿಕೊಂಡು ಭರತನಿಗೆ ಅಯೋಧ್ಯೆಯ ಸಿಂಹಾಸನ ದೊರೆಯಬೇಕು ಮತ್ತು ರಾಮ 14 ವರ್ಷ ವನವಾಸಕ್ಕೆ ತೆರಳಬೇಕು ಎಂದು ಕೇಳಿದ್ದಳು. ಮಂಥರೆಯ ಮಾತುಗಳಿಂದ ಪ್ರಭಾವಿತಳಾದ ಕೈಕೇಯಿಯ ನಿರ್ಧಾರ ರಾಮಾಯಣದ ಕಥೆಯಲ್ಲಿ ಮಹತ್ವದ ತಿರುವಿಗೆ ಕಾರಣವಾಗುತ್ತದೆ.

ಕೈಕೇಯಿ ಕುದುರೆ ಸವಾರಿ, ಬಿಲ್ಲುವಿದ್ಯೆಯಲ್ಲೂ ನಿಪುಣೆ

ಕೈಕೇಯಿ ಕೇಕಯ ರಾಜ್ಯದಿಂದ ಬಂದವಳು. ಆ ರಾಜ್ಯವು ಕುದುರೆಗಳಿಗೆ ಪ್ರಸಿದ್ಧವಾಗಿತ್ತು. ಕೈಕೇಯಿ ಅತ್ಯುತ್ತಮ ಕುದುರೆ ಸವಾರಳಾಗಿದ್ದಳು, ಬಿಲ್ಲುವಿದ್ಯೆಯಲ್ಲೂ ಪರಿಣತಿ ಹೊಂದಿದ್ದಳು ಎಂದು ಲಾರಾ ತಿಳಿಸಿದ್ದಾರೆ. ಸಹೋದರರ ನಡುವೆ ಬೆಳೆದ ಆಕೆ ಬಾಲ್ಯದಿಂದಲೇ ಧೈರ್ಯ ಮತ್ತು ಯುದ್ಧಕಲೆಗಳ ಪರಿಚಯ ಹೊಂದಿದ್ದಳು ಎಂಬುದನ್ನೂ ಹೇಳಿದ್ದಾರೆ.

ಸೀತೆಯ ಯೋಧ ರೂಪದ ಬಗ್ಗೆ ನಡೆಯುತ್ತಿರುವ ಚರ್ಚೆಯ ನಡುವೆ ಲಾರಾ ದತ್ತಾ ಅವರ ಹೇಳಿಕೆ ಹೊಸ ಸಂವಾದಕ್ಕೆ ಕಾರಣವಾಗಿದೆ. ಪೌರಾಣಿಕ ಪಾತ್ರಗಳನ್ನು ಒಂದೇ ರೀತಿಯಲ್ಲಿ ನೋಡುವ ಬದಲು, ಅವುಗಳ ವಿಭಿನ್ನ ಆಯಾಮಗಳನ್ನು ಅರ್ಥಮಾಡಿಕೊಳ್ಳಬೇಕು ಎಂಬುದು ಅವರ ಅಭಿಪ್ರಾಯ. ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ನಿರ್ವಹಿಸಿರುವ ಸೀತೆಯ ಪಾತ್ರ ಮಹಿಳೆಯ ಶಕ್ತಿ ಮತ್ತು ಧೈರ್ಯದ ಮತ್ತೊಂದು ಮುಖವನ್ನು ಪರಿಚಯಿಸುತ್ತಿದೆ ಎಂಬ ಚರ್ಚೆಯೂ ಆರಂಭವಾಗಿದೆ.