'ರಾಮಾಯಣ’ದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಆರ್ಭಟ: ಯಶ್​ ಅಭಿನಯಕ್ಕೆ ತಲೆದೂಗಿದ ರ‍್ಯಾಪರ್ ಬಾದ್‌ಶಾ! Ramayana

Rapper Badshah praises Yash's performance as Ravana in Ramayana
ರಾಮಾಯಣ ಚಿತ್ರದಲ್ಲಿ ರಾವಣನಾಗಿ ನಟಿಸಿದ ಯಶ್ ಅಭಿನಯವನ್ನು ಹೊಗಳಿದ ರ‍್ಯಾಪರ್ ಬಾದ್‌ಶಾ
Published on: 

ಮುಂಬೈ: ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ನೀರಿಕ್ಷೆ ಹಾಗೂ ಸಿನಿಪ್ರಿಯರು ಕಾತರದಿಂದ ಕಾಯುತ್ತಿರುವ ಬಹುಕೋಟಿ ವೆಚ್ಚದ ‘ರಾಮಾಯಣ: ಭಾಗ ಒಂದು’ (Ramayana: Part One) ಸಿನಿಮಾ ಈದೀಗ ತೆರೆಕಂಡಿದ್ದು, ಈ ಬಗ್ಗೆ ಬಿ-ಟೌನ್‌ನಲ್ಲಿ ಭರ್ಜರಿ ಸದ್ದು ಶುರುವಾಗಿದೆ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ದೃಶ್ಯವೈಭವವನ್ನು ವೀಕ್ಷಿಸಿರುವ ಖ್ಯಾತ ಗಾಯಕ ಹಾಗೂ ರ‍್ಯಾಪರ್ ಬಾದ್‌ಶಾ, ಚಿತ್ರದ ಬಗ್ಗೆ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ವಿಡಿಯೋ ಹಂಚಿಕೊಂಡಿರುವ ಅವರು, ಸಿನಿಮಾದ ಮೇಕಿಂಗ್, ಪಾತ್ರವರ್ಗ ಮತ್ತು ಯಶ್ ಅಭಿನಯವನ್ನು ಹಾಡಿ ಹೊಗಳಿದ್ದಾರೆ.

ರೋಮಾಂಚನ ತರಿಸುವ ದೃಶ್ಯ ವೈಭವ!

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿರುವ ಬಾದ್‌ಶಾ, "ನಾನು ನಿಮ್ಮ ಜೊತೆ ತುಂಬಾನೇ ಮುಖ್ಯವಾದ ವಿಷಯ ಮಾತನಾಡಬೇಕಿದೆ. ನಿನ್ನೆ ನಾನು ‘ರಾಮಾಯಣ’ ಸಿನಿಮಾ ನೋಡಿದೆ. ಇದರಲ್ಲಿ ರೋಮಾಂಚನ ತರಿಸದ, ಮೈಜುಮ್ಮೆನ್ನಿಸದ ಒಂದಾದರೂ ಸೀನ್ ಇದೆಯಾ? ಪ್ರತಿಯೊಂದು ದೃಶ್ಯವೂ ಕಣ್ಮುಂದೆ ಜೀವಂತವಾಗಿ ನಿಲ್ಲುತ್ತೆ, ಯಾವುದನ್ನು ಹೊಗಳದೇ ಇರಲು ಸಾಧ್ಯವಿಲ್ಲ" ಎಂದು ಸಿನಿಮಾದ ಮೇಲಿರುವ ತಮ್ಮ ಉತ್ಸಾಹವನ್ನು ಹೊರಹಾಕಿದ್ದಾರೆ.

ರಾವಣನಾಗಿ ಯಶ್ 'ಶೋ ಸ್ಟೀಲರ್'

ಚಿತ್ರದ ತಾರಾಗಣವನ್ನು ಕೊಂಡಾಡಿರುವ ಬಾದ್‌ಶಾ, ಇದು ಕೇವಲ ನಟನೆಯಲ್ಲ, ಕಲಾವಿದರು ಆ ಪಾತ್ರಗಳಲ್ಲೇ ಲೀನವಾಗಿ, ಜೀವಿಸಿದ್ದಾರೆ ಎಂದಿದ್ದಾರೆ. "ಶ್ರೀರಾಮನಾಗಿ ರಣಬೀರ್ ಕಪೂರ್ ಅವರ ನಟನೆ ಅದ್ಭುತ, ಸೀತಾ ಮಾತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಮಿಂಚಿದ್ದಾರೆ, ಲಕ್ಷ್ಮಣನಾಗಿ ರವಿ ದುಬೆ ಅಸಾಧಾರಣವಾಗಿ ನಟಿಸಿದ್ದಾರೆ. ಪ್ರತಿಯೊಬ್ಬ ನಟನೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದರೆ ಇಡೀ ಶೋ ಲೂಟಿ ಮಾಡಿದ್ದು ಮಾತ್ರ ಜಟಾಯು ಮತ್ತು ರಾವಣನಾಗಿ ಬಂದ ಯಶ್" ಎಂದು ಬಾದ್‌ಶಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ರಾವಣನ ಪಾತ್ರಕ್ಕೆ ಯಶ್ ತಂದಿರುವ ಗತ್ತು ಮತ್ತು ಸ್ಕ್ರೀನ್ ಪ್ರೆಸೆನ್ಸ್ ಇಡೀ ಚಿತ್ರದ ಹೈಲೈಟ್ ಎಂದು ರ‍್ಯಾಪರ್ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಚಿತ್ರ ಶುರುವಾದಾಗ ರಾವಣನ ಎಂಟ್ರಿ ಸೀನ್ ಮಿಸ್ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡ ಬಾದ್‌ಶಾ, "ನಾನು ರಾವಣನ ಎಂಟ್ರಿ ಸೀನ್​ಅನ್ನು ಮಿಸ್​ ಮಾಡಿದೆ, ನನಗೆ ಪಾಪ ಬರದಿದ್ದರೆ ಸಾಕೆಂದು ತಮಾಷೆಯಾಗಿ ಹೇಳಿದ್ದಾರೆ.

Also Read
ಬಿಗ್‌ಬಾಸ್ ಸ್ನೇಹಕ್ಕೆ ಮದುವೆ ಮುದ್ರೆ: ರೂಮರ್ಸ್‌ಗೆ ಬಿತ್ತು ತೆರೆ, ಆರಂಭವಾಯ್ತು ‘AISHIR’ ಪಯಣ; ಹಸೆಮಣೆ ಏರಲು ಸಜ್ಜಾದ ಶಿಶಿರ್-ಐಶ್ವರ್ಯಾ!
Rapper Badshah praises Yash's performance as Ravana in Ramayana

ಚಿತ್ರರಂಗದ ಮಾನ ಉಳಿಸಿದ್ದಾರೆ!

ಒಂದೊಂದು ಫ್ರೇಮ್​ನಲ್ಲಿ ನಿರ್ದೇಶಕರು ಕೆಲಸ ಮಾಡಿದ್ದಾರೆ. ಈ ಸಿನಿಮಾದ ದೃಶ್ಯ ಶ್ರೀಮಂತಿಕೆ ಮತ್ತು ಬೆನ್ನುಹುರಿ ನಡುಗಿಸುವ ಹಿನ್ನೆಲೆ ಸಂಗೀತಕ್ಕೆ ಬಾದ್‌ಶಾ ಸಂಪೂರ್ಣ ಫಿದಾ ಆಗಿದ್ದಾರೆ. ಬ್ಯಾಕ್‌ಗ್ರೌಂಡ್ ಸ್ಕೋರ್‌ಗೆ "6ಕ್ಕೆ 6 ಅಂಕ" ನೀಡಿದ ಅವರು, ನಿರ್ಮಾಪಕ ನಮಿತ್ ಮಲ್ಹೋತ್ರಾ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. "ಭಾರತೀಯ ಸಿನಿಮಾದ ಮಾನ ಉಳಸಿ, ನಮ್ಮ ಇತಿಹಾಸದ ಗೌರವವನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಕ್ಕೆ ನಮಿತ್ ಮತ್ತು ನಿತೇಶ್ ಜಿ ಅವರಿಗೆ ಧನ್ಯವಾದಗಳು" ಎಂದು ಮನದುಂಬಿ ಹೇಳಿದ್ದಾರೆ, (ಏಜೆನ್ಸೀಸ್​).