

ಮುಂಬೈ: ಬಾಲಿವುಡ್‌ನಲ್ಲಿ ತಮ್ಮ ಅದ್ಭುತ ನಟನೆಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿರುವ ನಟ ನವಾಜುದ್ದೀನ್ ಸಿದ್ದಿಕಿ ಈಗ ಹೊಸದೊಂದು ಆಸೆಯನ್ನು ಹೊರಹಾಕಿದ್ದಾರೆ. ಈಗಾಗಲೇ ಹಲವು ನೈಜ ವ್ಯಕ್ತಿಗಳ ಪಾತ್ರಗಳಿಗೆ ಜೀವ ತುಂಬಿ ಸೈ ಎನಿಸಿಕೊಂಡಿರುವ ನವಾಜ್, ಅವಕಾಶ ಸಿಕ್ಕರೆ ವಿಶ್ವವಿಖ್ಯಾತ ಆಧ್ಯಾತ್ಮಿಕ ಗುರು ಓಶೋ (Osho) ಅವರ ಪಾತ್ರವನ್ನು ತೆರೆಯ ಮೇಲೆ ಮಾಡಬೇಕೆಂದು ಬಯಸಿದ್ದಾರೆ. ಇತ್ತೀಚೆಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ ನವಾಜುದ್ದೀನ್, ತಮ್ಮ ಮುಂದಿನ ಕನಸಿನ ಪಾತ್ರ ಮತ್ತು ಸಿನಿಮಾ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಸಂವಾದದ ವೇಳೆ ನಿರೂಪಕರು, "ನಿಮಗೆ ನಿಜ ಜೀವನದ ಯಾವುದಾದರೂ ವ್ಯಕ್ತಿಯ ಪಾತ್ರ ಮಾಡುವ ಅವಕಾಶ ಸಿಕ್ಕರೆ ಯಾರ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ?" ಎಂದು ಕೇಳಿದರು. ಇದಕ್ಕೆ ಒಂದು ಕ್ಷಣವೂ ಯೋಚಿಸದೆ ನವಾಜುದ್ದೀನ್ ಸಿದ್ದಿಕಿ ಓಶೋ ಹೆಸರನ್ನು ಹೇಳಿದ್ದಾರೆ.
ಓಶೋ ಅವರ ಪಾತ್ರದ ಬಗ್ಗೆ ತಮಗಿರುವ ಆಸಕ್ತಿಯನ್ನು ವಿವರಿಸಿದ ನವಾಜ್, ನನಗೆ ಓಶೋ ಅವರ ಪಾತ್ರ ಮಾಡಬೇಕೆಂಬ ಆಸೆಯಿದೆ. ಅವರ ತತ್ವಜ್ಞಾನ, ಅವರ ಬದುಕಿನ ಶೈಲಿ, ಅವರ ವಿಶಿಷ್ಟ ವ್ಯಕ್ತಿತ್ವ ಮತ್ತು ಜಗತ್ತನ್ನು ನೋಡುವ ಅವರ ದೃಷ್ಟಿಕೋನಗಳು ನನ್ನನ್ನು ತುಂಬಾ ಆಕರ್ಷಿಸುತ್ತವೆ.
ಹಾಗಾಗಿ, ಮುಂದೆಂದಾದರೂ ಅಂತಹ ಒಂದು ಒಳ್ಳೆಯ ಅವಕಾಶ ಸಿಕ್ಕರೆ, ನಾನು ಖಂಡಿತವಾಗಿಯೂ ಓಶೋ ಪಾತ್ರವನ್ನು ಮಾಡುತ್ತೇನೆ ಎಂದು ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡಿದ್ದಾರೆ. ನವಾಜ್ ಅವರ ಈ ಮಾತು ಕೇಳಿದ ಅಭಿಮಾನಿಗಳು, ನಿಜಕ್ಕೂ ಓಶೋ ಪಾತ್ರಕ್ಕೆ ನವಾಜುದ್ದೀನ್ ಸಿದ್ದಿಕಿ ಪರ್ಫೆಕ್ಟ್ ಮ್ಯಾಚ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ರಂಗದಲ್ಲಿ ಒಂದಷ್ಟು ವರ್ಷ ನಟಿಸಿದ ಮೇಲೆ, ಅನೇಕ ನಟರು ನಿರ್ದೇಶನದತ್ತ ಮುಖ ಮಾಡುತ್ತಾರೆ. ಇದೇ ಪ್ರಶ್ನೆಯನ್ನು ನವಾಜುದ್ದೀನ್ ಅವರಿಗೂ ಕೇಳಲಾಯಿತು. ಆದರೆ, ನಿರ್ದೇಶನದ ಬಗ್ಗೆ ತಮಗೆ ಕಿಂಚಿತ್ತೂ ಆಸಕ್ತಿಯಿಲ್ಲ ಎಂದು ನವಾಜ್ ಖಡಾಖಂಡಿತವಾಗಿ ಹೇಳಿದ್ದಾರೆ.
ಇಲ್ಲ, ನಿರ್ದೇಶನ ಎನ್ನುವುದು ನನ್ನ ಕೆಲಸವೇ ಅಲ್ಲ. ನನಗೆ ಡೈರೆಕ್ಷನ್ ಮಾಡುವ ಬಗ್ಗೆ ಸ್ವಲ್ಪವೂ ಆಸಕ್ತಿಯಿಲ್ಲ ಎಂದು ನೇರವಾಗಿ ಉತ್ತರಿಸಿದ ಅವರು, ನಾನು ಯಾವಾಗಲೂ ಒಬ್ಬ ನಟನಾಗಿಯೇ ಉಳಿಯಲು ಇಷ್ಟಪಡುತ್ತೇನೆ. ನನ್ನ ಕೊನೆಯ ಉಸಿರಿರುವವರೆಗೂ ಒಬ್ಬ ಉತ್ತಮ ನಟನಾಗಲು ನಿರಂತರವಾಗಿ ಶ್ರಮಿಸುತ್ತೇನೆ ಎಂದಿದ್ದಾರೆ.
ಜಗತ್ತಿನಾದ್ಯಂತ ಅಪಾರ ಸಂಖ್ಯೆಯ ಶಿಷ್ಯರನ್ನು ಹೊಂದಿದ್ದ ಓಶೋ ಒಬ್ಬ ಪ್ರಸಿದ್ಧ ಭಾರತೀಯ ಆಧ್ಯಾತ್ಮಿಕ ನಾಯಕ ಮತ್ತು ತತ್ವಜ್ಞಾನಿ. 1931ರ ಡಿಸೆಂಬರ್ 11ರಂದು ಮಧ್ಯಪ್ರದೇಶದ ಕುಚ್ವಾಡದಲ್ಲಿ ಚಂದ್ರ ಮೋಹನ್ ಜೈನ್ ಎಂಬ ಹೆಸರಿನಲ್ಲಿ ಇವರು ಜನಿಸಿದರು. ಮುಂದೆ ಭಗವಾನ್ ಶ್ರೀ ರಜನೀಶ್ ಮತ್ತು ಓಶೋ ಎಂದೇ ಜಗತ್ಪ್ರಸಿದ್ಧರಾದರು.
ಆಧ್ಯಾತ್ಮಿಕತೆ, ಧ್ಯಾನ, ಪ್ರೀತಿ, ಸಂಬಂಧಗಳು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಇವರು ನೀಡುತ್ತಿದ್ದ ಬೋಧನೆಗಳು ಸಾಕಷ್ಟು ಚರ್ಚೆಗೂ, ಜನಪ್ರಿಯತೆಗೂ ಕಾರಣವಾಗಿದ್ದವು. 1974ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಇವರು ಸ್ಥಾಪಿಸಿದ ಆಶ್ರಮಕ್ಕೆ ವಿದೇಶಗಳಿಂದಲೂ ಸಾವಿರಾರು ಜನರು ಬರಲಾರಂಭಿಸಿದರು.
ನಂತರ 1981ರಲ್ಲಿ ಅಮೆರಿಕಕ್ಕೆ ತೆರಳಿದ ಓಶೋ, ಅಲ್ಲಿನ ಒರೆಗಾನ್‌ನಲ್ಲಿ 'ರಜನೀಶ್‌ಪುರಂ' ಎಂಬ ದೊಡ್ಡ ಸಮುದಾಯವನ್ನು ಕಟ್ಟಿದರು. ಆದರೆ, ಕೆಲವು ಕಾನೂನು ವಿವಾದಗಳಿಂದಾಗಿ 1985ರಲ್ಲಿ ಅವರನ್ನು ಅಮೆರಿಕದಿಂದ ಹೊರಹಾಕಲಾಯಿತು. ಬಳಿಕ ಭಾರತಕ್ಕೆ ಮರಳಿದ ಓಶೋ, 1990ರ ಜನವರಿ 19ರಂದು ಪುಣೆಯಲ್ಲಿ ಕೊನೆಯುಸಿರೆಳೆದರು, (ಏಜೆನ್ಸೀಸ್).