ಅಜಯ್ ದೇವಗನ್ ಬಂಗಲೆ ಮೇಲೆ ಬುಲ್ಡೋಜರ್ ಆ್ಯಕ್ಷನ್: ಅನಧಿಕೃತ ಕಾಮಗಾರಿ ತೆರವುಗೊಳಿಸಿದ BMC ಅಧಿಕಾರಿಗಳು! Ajay Devgn

ಮುಂಬೈನ ಜುಹುವಿನಲ್ಲಿರುವ ನಟ ಅಜಯ್ ದೇವಗನ್ ಬಂಗಲೆಯಲ್ಲಿ ನಡೆದಿದ್ದ ಅನಧಿಕೃತ ಕಾಮಗಾರಿಯನ್ನು BMC ತೆರವುಗೊಳಿಸಿದೆ. ನೋಟಿಸ್ ನೀಡಿದ್ದರೂ ಕೆಲಸ ನಿಲ್ಲಿಸದಿದ್ದಕ್ಕೆ ಪಾಲಿಕೆ ಕ್ರಮ; ಪೂರ್ಣ ವಿವರ ಇಲ್ಲಿದೆ.
BMC demolition drive at actor Ajay Devgn's Juhu bungalow
ನಟ ಅಜಯ್ ದೇವಗನ್ ಜುಹು ಬಂಗಲೆ ಬಿಎಂಸಿ ತೆರವು ಕಾರ್ಯಾಚರಣೆ
Published on: 

ಮುಂಬೈ: ಬಾಲಿವುಡ್‌ನ ‘ಸಿಂಗಂ’ ಖ್ಯಾತಿಯ ನಟ ಅಜಯ್ ದೇವಗನ್​ಗೆ ಬೃಹತ್​ ಮುಂಬೈ ಮಹಾನಗರ ಪಾಲಿಕೆ (BMC) ಶಾಕ್ ನೀಡಿದೆ. ಮುಂಬೈನ ಜುಹು ಪ್ರದೇಶದಲ್ಲಿರುವ ಇವರ ಐಷಾರಾಮಿ ಬಂಗಲೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ನಿರ್ಮಾಣ ಕಾಮಗಾರಿಯ ವಿರುದ್ಧ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ್ದಾರೆ.

ಬಿಎಂಸಿ ಕೆಂಗಣ್ಣಿಗೆ ಗುರಿಯಾಗಿದ್ದು ಯಾಕೆ?

ಮುಂಬೈನ ಜುಹು ಜಿವಿಪಿಡಿ (JVPD) ಸ್ಕೀಮ್‌ನ ಎನ್.ಎಸ್. ರಸ್ತೆ ಸಂಖ್ಯೆ 11, ಪ್ಲಾಟ್ S-10 ನಲ್ಲಿ ಅಜಯ್ ದೇವಗನ್ ಅವರ ಬರೋಬ್ಬರಿ 7,802 ಚದರ ಅಡಿ ವಿಸ್ತೀರ್ಣದ ಬೃಹತ್ ಬಂಗಲೆಯಿದೆ. ಇಲ್ಲಿ ದುಬಾರಿ ಸಲೂನ್ ಹಾಗೂ ಸ್ಪಾ ಆರಂಭಿಸಲು ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದವು.

ಆದರೆ, ಈ ಆಸ್ತಿ ಇರುವ ಕಪೋಲ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯು ಈ ಕಾಮಗಾರಿಯ ಬಗ್ಗೆ ಪಾಲಿಕೆಗೆ ದೂರು ಸಲ್ಲಿಸಿತ್ತು. ವಸತಿ ಪ್ರದೇಶದಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡದ ಒಳಾಂಗಣ ವಿನ್ಯಾಸ, ವಿಭಜಕ ಗೋಡೆಗಳ ನಿರ್ಮಾಣ, ಹೊಸ ಕಿಟಕಿಗಳ ಅಳವಡಿಕೆ ಸೇರಿದಂತೆ ಭಾರೀ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂದು ಸೊಸೈಟಿ ಆರೋಪಿಸಿತ್ತು.

ಸೆಪ್ಟೆಂಬರ್‌ನಲ್ಲೇ ನೀಡಲಾಗಿತ್ತು ನೋಟಿಸ್!

ಸೊಸೈಟಿ ದೂರು ನೀಡಿದ ಬೆನ್ನಲ್ಲೇ ಬಿಎಂಸಿಯ ‘K-ವೆಸ್ಟ್’ ವಾರ್ಡ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ, ಅಲ್ಲಿ ಪ್ರಸ್ತಾಪಿಸಲಾದ ವಾಣಿಜ್ಯ ಚಟುವಟಿಕೆಗಳಿಗೆ ಪಾಲಿಕೆಯಿಂದ ಯಾವುದೇ ಅಧಿಕೃತ ಅನುಮೋದನೆ ಪಡೆದುಕೊಂಡಿಲ್ಲ ಎಂಬುದು ಬೆಳಕಿಗೆ ಬಂದಿತ್ತು.

Also Read
ಕಾವ್ಯಾ-ಅನಿರುದ್ಧ್ ಮದುವೆ ಫಿಕ್ಸ್​! ಗ್ರೀಸ್​​ನಲ್ಲಿ ಸಪ್ತಪದಿ, ನ. 21 ಕ್ಕೆ ಅದ್ಧೂರಿ ರಿಸೆಪ್ಷನ್; ಅಧಿಕೃತ ಘೋಷಣೆ ಮಾಡಿದ ಸಿಎಂ ರೇವಂತ್ ರೆಡ್ಡಿ! Kavya Anirudh Wedding
BMC demolition drive at actor Ajay Devgn's Juhu bungalow

ತಕ್ಷಣವೇ ಎಚ್ಚೆತ್ತ ಬಿಎಂಸಿ, ಕಳೆದ ಸೆಪ್ಟೆಂಬರ್ 10 ರಂದು ಮುಂಬೈ ಮಹಾನಗರ ಪಾಲಿಕೆ ಕಾಯ್ದೆಯ ಸೆಕ್ಷನ್ 354A ಅಡಿಯಲ್ಲಿ ಅಜಯ್ ದೇವಗನ್ ಅವರಿಗೆ 'ಸ್ಟಾಪ್ ವರ್ಕ್' ನೋಟಿಸ್ ಜಾರಿ ಮಾಡಿತ್ತು. ಕಾಮಗಾರಿಯನ್ನು ತಕ್ಷಣ ನಿಲ್ಲಿಸಿ, ಅಗತ್ಯ ದಾಖಲೆ ಮತ್ತು ಅನುಮತಿ ಪತ್ರಗಳನ್ನು ಹಾಜರುಪಡಿಸುವಂತೆ ತಾಕೀತು ಮಾಡಿತ್ತು.

ಅಂತಿಮವಾಗಿ ತೆರವು ಕಾರ್ಯಚರಣೆ!

ಪಾಲಿಕೆಯ ಕಟ್ಟುನಿಟ್ಟಿನ ನೋಟಿಸ್ ಹೊರಬಿದ್ದರೂ ಬಂಗಲೆಯಲ್ಲಿ ಆಂತರಿಕ ಬದಲಾವಣೆಗಳ ಕೆಲಸ ಸದ್ದಿಲ್ಲದೆ ಮುಂದುವರಿದಿತ್ತು ಎನ್ನಲಾಗಿದೆ. ಮತ್ತೊಂದೆಡೆ, ನಮ್ಮಲ್ಲಿ ಅಗತ್ಯ ಅನುಮತಿಗಳಿವೆ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಅಜಯ್ ದೇವಗನ್ ಅವರ ಪ್ರತಿನಿಧಿಗಳು ವಾದಿಸಿದ್ದರು. ಆದರೆ, ನಿಯಮಬದ್ಧ ಅನುಮತಿ ದಾಖಲೆಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ ಬಿಎಂಸಿ ಅಧಿಕಾರಿಗಳ ತಂಡ ಬಂಗಲೆಗೆ ತೆರಳಿ, ಅನಧಿಕೃತ ಎಂದು ಗುರುತಿಸಲಾದ ಭಾಗಗಳನ್ನು ತೆರವುಗೊಳಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net