

ತೆಲಂಗಾಣ: ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮಾಲಕಿ ಕಾವ್ಯಾ ಮಾರನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಈ ಹೈ-ಪ್ರೊಫೈಲ್ ಮದುವೆ ವದಂತಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಸ್ವತಃ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೇ ಈ ಶುಭ ಸುದ್ದಿಯನ್ನು ಜಗತ್ತಿಗೆ ತಿಳಿಸಿದ್ದಾರೆ.
ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿರುವ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಿವಾಸಕ್ಕೆ ಸನ್ ಗ್ರೂಪ್ ಮುಖ್ಯಸ್ಥ ಕಲಾನಿತಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಮಾರನ್ ಭೇಟಿ ನೀಡಿ ಮಗಳ ಮದುವೆಗೆ ಆಹ್ವಾನಿಸಿದ್ದಾರೆ. ಈ ಭೇಟಿಯ ಫೋಟೋ ಮತ್ತು ವಿಡಿಯೋಗಳನ್ನು ಸಿಎಂ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಸನ್ ಗ್ರೂಪ್ ಅಧ್ಯಕ್ಷ ಶ್ರೀ ಕಲಾನಿತಿ ಮಾರನ್ ಹಾಗೂ ಶ್ರೀಮತಿ ಕಾವೇರಿ ಮಾರನ್ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ, ತಮ್ಮ ಪುತ್ರಿ ಕಾವ್ಯಾ ಮಾರನ್ ಹಾಗೂ ಅನಿರುದ್ಧ್ ರವಿಚಂದರ್ ಅವರ ವಿವಾಹ ಆರತಕ್ಷತೆಗೆ ಆಹ್ವಾನಿಸಿದರು. ಈ ಅದ್ಧೂರಿ ಆರತಕ್ಷತೆಯು ನವೆಂಬರ್ 21 ರಂದು ಚೆನ್ನೈನಲ್ಲಿ ಜರುಗಲಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಅನಿರುದ್ಧ್ ಮತ್ತು ಕಾವ್ಯಾ ಮಾರನ್ ಜೋಡಿ ನವೆಂಬರ್ 11 ರಂದು ವಿದೇಶದಲ್ಲಿ, ಅದರಲ್ಲೂ ಸುಂದರವಾದ ಗ್ರೀಸ್ ದೇಶದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಗ್ರೀಸ್ನಲ್ಲಿ ಮದುವೆ ಮುಗಿಸಿಕೊಂಡು ವಾಪಸಾದ ಬಳಿಕ ನವೆಂಬರ್ 21 ರಂದು ಚೆನ್ನೈನಲ್ಲಿ ತಮಿಳು ಚಿತ್ರರಂಗ, ಉದ್ಯಮ ರಂಗ ಹಾಗೂ ರಾಜಕೀಯ ಗಣ್ಯರಿಗಾಗಿ ಭರ್ಜರಿ ರಿಸೆಪ್ಷನ್ ಆಯೋಜಿಸಲಾಗಿದೆ.
ಕಾವ್ಯಾ ಮತ್ತು ಅನಿರುದ್ಧ್ ಹಲವು ತಿಂಗಳುಗಳಿಂದ ಪ್ರೀತಿಯಲ್ಲಿದ್ದಾರೆ ಎಂಬ ಮಾತುಗಳು ರೆಡ್ಡಿಟ್ನಲ್ಲಿ ಹರಿದಾಡುತ್ತಿದ್ದವು. ಆರಂಭದಲ್ಲಿ, ಇದೊಂದು ಸುಳ್ಳು ಸುದ್ದಿ, ವದಂತಿ ಹಬ್ಬಿಸಬೇಡಿ ಎಂದು ನಕ್ಕು ತಳ್ಳಿಹಾಕಿದ್ದ ಅನಿರುದ್ಧ್, ಬಳಿಕ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಕಳೆದ ಜೂನ್ನಲ್ಲಿ ಅನಿರುದ್ಧ್ ಅವರ ಚಿಕ್ಕಪ್ಪ, ಹಿರಿಯ ನಟ ವೈ. ಜಿ. ಮಹೇಂದ್ರ ನೀಡಿದ ಸಂದರ್ಶನವೊಂದು ಈ ಮದುವೆಗೆ ಬಲವಾದ ಸುಳಿವು ನೀಡಿತ್ತು. ಅನಿರುದ್ಧ್ ಸದ್ದಿಲ್ಲದೆ ದೊಡ್ಡ ಮನೆಯತ್ತ ಹೆಜ್ಜೆ ಇಡುತ್ತಿದ್ದಾನೆ, ಅವನಿಗೆ ಒಳ್ಳೆಯದಾಗಲಿ. ನನಗೆ ತಿಳಿದ ಮಟ್ಟಿಗೆ ಅವರ ಮದುವೆ ಬಹುತೇಕ ಖಚಿತ ಎಂದು ಹೇಳಿ ಕುತೂಹಲ ಹೆಚ್ಚಿಸಿದ್ದರು.
ಅನಿರುದ್ಧ್ ರವಿಚಂದರ್ ಸದ್ಯ ಭಾರತೀಯ ಚಿತ್ರರಂಗದ ಮೋಸ್ಟ್ ವಾಂಟೆಡ್ ಸಂಗೀತ ನಿರ್ದೇಶಕ. 'ಲಿಯೋ', 'ಇಂಡಿಯನ್ 2', 'ವೇಟ್ಟೈಯನ್', 'ವಿದಾಮುಯಾರ್ಚಿ', 'ಕೂಲಿ' ಸೇರಿದಂತೆ ಸಾಲು ಸಾಲು ಬ್ಲಾಕ್ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿ ರಾಕ್ಸ್ಟಾರ್ ಎನಿಸಿಕೊಂಡಿದ್ದಾರೆ. ಇನ್ನೊಂದೆಡೆ, ಸನ್ ಟಿವಿ ನೆಟ್ವರ್ಕ್ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಕಾವ್ಯಾ ಮಾರನ್, ಐಪಿಎಲ್ ಮೈದಾನದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಹುರಿದುಂಬಿಸುತ್ತಾ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ, (ಏಜೆನ್ಸೀಸ್).