ಬಾಲಿವುಡ್​ ಸ್ಟಾರ್​ ಅಮಿತಾಭ್ ಬಚ್ಚನ್‌ರ ಕುಟುಂಬದಲ್ಲಿ ಆಸ್ತಿಗಾಗಿ ಕಿತ್ತಾಟ? ‘ಜಲ್ಸಾ’ ಮಾಲೀಕತ್ವ ಪ್ರಶ್ನಿಸಿದ ರಮೋಲಾ | Amitabh Bachchan

Amitabh Bachchan
ಬಾಲಿವುಡ್​ ಸ್ಟಾರ್​ ಅಮಿತಾಭ್ ಬಚ್ಚನ್‌ರ ಕುಟುಂಬದಲ್ಲಿ ಆಸ್ತಿಗಾಗಿ ಕಿತ್ತಾಟ? ‘ಜಲ್ಸಾ’ ಮಾಲೀಕತ್ವ ಪ್ರಶ್ನಿಸಿದ ರಮೋಲಾ | Amitabh Bachchan
Published on: 

ಮುಂಬೈ: ಬಾಲಿವುಡ್‌ನ 'ಬಿಗ್‌ ಬಿ', ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಕುಟುಂಬದ ಆಸ್ತಿಯ ವಿಚಾರ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮುಂಬೈನ ಜುಹುನಲ್ಲಿರುವ ಅವರ ಹೆಸರಾಂತ ‘ಜಲ್ಸಾ’ ಬಂಗಲೆಯ ಮಾಲೀಕತ್ವದ ಬಗ್ಗೆ ಕುಟುಂಬಸ್ಥರಲ್ಲೇ ತಕರಾರು ಭುಗಿಲೆದ್ದಿದೆ.

1993ರಲ್ಲಿ ಜಯಾ ಬಚ್ಚನ್ ಅವರ ಹೆಸರಿಗೆ ಆಸ್ತಿ ವರ್ಗಾಯಿಸಿದ್ದ ಉಡುಗೊರೆ ಪತ್ರವನ್ನೇ ಪ್ರಶ್ನಿಸಿ ಅಮಿತಾಭ್ ಅವರ ಕಿರಿಯ ಸಹೋದರ ಅಜಿತಾಭ್ ಬಚ್ಚನ್ ಅವರ ಪತ್ನಿ ರಮೋಲಾ ಬಚ್ಚನ್ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅಧಿಕಾರಿಗಳು ವಿಚಾರಣೆ ಆರಂಭಿಸಿರುವುದು ಸದ್ಯ ಬಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಮೋಲಾ ಅವರ ಹೆಸರಿದೆ

ಈ ಸಂಬಂಧ ರಮೋಲಾ ಅವರು ಕಳೆದ ಏಳು ತಿಂಗಳಲ್ಲಿ ನೋಂದಣಿ ಅಧಿಕಾರಿಗಳಿಗೆ ಹಲವು ದೂರುಗಳನ್ನು ಸಲ್ಲಿಸಿದ್ದಾರೆ ಎಂದು ‘ಮುಂಬೈ ಮಿರರ್’ ವರದಿ ಮಾಡಿದೆ. ಜಲ್ಸಾ ಬಂಗಲೆ ಮೂಲತಃ ತಮ್ಮ ಹೆಸರಿನಲ್ಲಿ ನೋಂದಣಿಯಾಗಿತ್ತು. ಆದರೆ, ತಮ್ಮ ಅರಿವಿಗೆ ಅಥವಾ ಒಪ್ಪಿಗೆಯಿಲ್ಲದೆ ಗಿಫ್ಟ್ ದಾಖಲೆ ಮೂಲಕ ಜಯಾ ಬಚ್ಚನ್ ಅವರ ಹೆಸರಿಗೆ ಮಾಲೀಕತ್ವ ವರ್ಗಾಯಿಸಲಾಗಿದೆ ಎಂದು ರಮೋಲಾ ಆರೋಪಿಸಿದ್ದಾರೆ.

ಈ ದೂರು ಮುಂಬೈನ ಅಂಧೇರಿಯ ಸಹಕಾರ ಸಂಘಗಳ ಉಪನೋಂದಣಾಧಿಕಾರಿ ಕಚೇರಿಗೆ ತಲುಪಿದ್ದು, ವಿಚಾರಣೆ ಆರಂಭವಾಗಿದೆ. ಕಪೋಲ್ ಹೌಸಿಂಗ್ ಸೊಸೈಟಿಯ ದಾಖಲೆಗಳಲ್ಲಿ ಜಯಾ ಬಚ್ಚನ್ ಅವರನ್ನು ಮಾಲೀಕರಾಗಿ ಗುರುತಿಸಲಾಗಿದೆ. ಆದರೆ, ಮಹಾರಾಷ್ಟ್ರ ಸರ್ಕಾರದ ಆಸ್ತಿ ದಾಖಲೆಯಲ್ಲಿ (ಪ್ರಾಪರ್ಟಿ ಕಾರ್ಡ್) ಇನ್ನೂ ರಮೋಲಾ ಅವರ ಹೆಸರಿದೆ ಎನ್ನಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ ತಮ್ಮ ಹೆಸರನ್ನು ತೆಗೆದು ಜಯಾ ಅವರ ಹೆಸರನ್ನು ಸೇರಿಸಲು ಪ್ರಯತ್ನ ನಡೆದ ಬಳಿಕ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ ಎಂದು ವರದಿಯಾಗಿದೆ.

Also Read
ಚಿಕ್ಕ ಮಕ್ಕಳನ್ನು ಕಬ್ಬಿಣ್ಣದ ಲಾಕರ್‌ನಲ್ಲಿ ಕೂಡಿ ಹಾಕಿದ ಶಾಲಾ ಸಿಬ್ಬಂದಿ! ಕಾರಣ ಕೇಳಿ ಸಿಡಿದೆದ್ದ ಪಾಲಕರು, ಸ್ಥಳೀಯರು ಆಕ್ರೋಶ | Children In Lockers
Amitabh Bachchan

ಇದಲ್ಲದೆ, ವಿವಾದಿತ ದಾಖಲೆಗಳ ನೋಂದಣಿ ಮತ್ತು ಮಹಾರಾಷ್ಟ್ರ ಸರ್ಕಾರದ ‘ಅಭಯ್ ಯೋಜನೆ’ ಅಡಿಯಲ್ಲಿ ಅವುಗಳನ್ನು ಕ್ರಮಬದ್ಧಗೊಳಿಸಿರುವ ಪ್ರಕ್ರಿಯೆಯ ಬಗ್ಗೆಯೂ ರಮೋಲಾ ಪ್ರಶ್ನೆ ಎತ್ತಿದ್ದಾರೆ. ದೂರು ಸ್ವೀಕರಿಸಿರುವುದನ್ನು ಉಪನೋಂದಣಾಧಿಕಾರಿ ಫೈಯಾಜ್ ಮುಲಾನಿ ಖಚಿತಪಡಿಸಿದ್ದು, ಸಂಬಂಧಪಟ್ಟ ಎಲ್ಲರಿಗೂ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ದಾಖಲೆಗಳ ಸಿಂಧುತ್ವ ಮತ್ತು ಆಸ್ತಿಯ ಅಸಲಿ ಮಾಲೀಕತ್ವದ ಬಗ್ಗೆ ಅಧಿಕಾರಿಗಳು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಈ ವಿವಾದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಅಮಿತಾಭ್ ಬಚ್ಚನ್ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಜಯಾ ಬಚ್ಚನ್ ಆಗಲಿ, ಅಭಿಷೇಕ್ ಬಚ್ಚನ್ ಮತ್ತು ಅವರ ವಕ್ತಾರರೇ ಆಗಲಿ, ಯಾರೊಬ್ಬರೂ ಸಹ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಇದು ಕುಟುಂಬದ ಆಂತರಿಕ ವಿಚಾರ ಎಂದು ಹೇಳಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಸಿನಿ ಮೂಲಗಳು ತಿಳಿಸಿವೆ,(ಏಜೆನ್ಸೀಸ್).