ಮರೆಯಾದ ಬಾಲಿವುಡ್​ನ ಚಾಕಲೇಟ್​ ಹೀರೋ ರಿಷಿ ಕಪೂರ್, ಜನಮಾನಸದಲ್ಲಿ ನಾಟೌಟ್

page 10 1
Published on

ಮುಂಬೈ: ಖಂಡಿತಾ ಯಾರೆಂದರೆ ಯಾರೂ ನಿರೀಕ್ಷಿಸಿರಲಿಲ್ಲ. ಬುಧವಾರವಷ್ಟೇ ಇರ್ಫಾನ್ ಖಾನ್ ಅವರ ಸಾವಿನ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದ ದೇಶ, ಗುರುವಾರ ಇನ್ನೊಬ್ಬ ಜನಪ್ರಿಯ ನಟನನ್ನು ಕಳೆದುಕೊಳ್ಳುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಹಾಗೆ ನೋಡಿದರೆ, ಕಳೆದ ಎರಡು ವರ್ಷಗಳಿಂದ ರಿಷಿ ಕಪೂರ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅದಕ್ಕೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಆದರೆ, ಇಷ್ಟು ಅನಿರೀಕ್ಷಿತವಾಗಿ ಬಿಟ್ಟು ಹೋಗಬಹುದು ಎಂದು ಯಾರಿಗೂ ಗೊತ್ತಿರಲಿಲ್ಲ. ರಿಷಿ ಈಗ ದೈಹಿಕವಾಗಿ ಮರೆಯಾಗಿರಬಹುದು. ಆದರೆ, ಸಿನಿಪ್ರಿಯರ ಮನದಲ್ಲಿ ಅವರು ಎಂದೆಂದಿಗೂ ನಾಟೌಟ್.

ಸಾವಿನಲ್ಲಷ್ಟೇ ಅಲ್ಲ, ರಿಷಿ ಕಪೂರ್ ಅವರ ಜೀವನದಲ್ಲೂ ಅನಿರೀಕ್ಷಿತಗಳೇ ಹೆಚ್ಚು. ರಾಜ್ ಕಪೂರ್ ಕುಟುಂಬವೆಂದರೆ, ಭಾರತೀಯ ಚಿತ್ರರಂಗದ ಮೊದಲ ಕುಟುಂಬ ಎಂದು ಗುರುತಿಸಲಾಗುತ್ತದೆ. ನಾಲ್ಕು ತಲೆಮಾರಿನ ಇತಿಹಾಸವಿರುವ ಈ ಕುಟುಂಬದಲ್ಲಿ, ರಿಷಿ ಕಪೂರ್ ಹೀರೋ ಆಗುವಷ್ಟರಲ್ಲಿ ನಾಲ್ವರು ಹೀರೋಗಳಿದ್ದರು. ಅವರೆಲ್ಲರ ಮಧ್ಯೆ ತಾನೂ ಒಬ್ಬ ಹೀರೋ ಆಗಬಹುದು ಎಂದು ಯಾವತ್ತೂ ಅಂದುಕೊಂಡಿರಲಿಲ್ಲವಂತೆ. ಅಪ್ಪ ರಾಜ್ ಕಪೂರ್ ಹೇಳಿದ್ದಿಕ್ಕೆ ‘ಮೇರಾ ನಾಮ್ ಜೋಕರ್’ನಲ್ಲಿ ಪುಟ್ಟ ಪಾತ್ರ ಮಾಡಿದ್ದ ರಿಷಿ, ಮುಂದೊಂದು ದಿನ ತಾನೊಬ್ಬ ಹೀರೋ ಆಗಬಹುದು ಎಂದುಕೊಂಡಿರಲಿಲ್ಲವಂತೆ. ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ‘ಬಾಬ್ಬಿ’ ಚಿತ್ರದಲ್ಲಿ ಮೊದಲಿಗೆ ರಾಜೇಶ್ ಖನ್ನಾ ನಟಿಸಬೇಕಿತ್ತಂತೆ. ಆದರೆ, ಅವರಿಗೆ ಸಂಭಾವನೆ ಕೊಡುವುದಕ್ಕೆ ದುಡ್ಡಿಲ್ಲದ ಕಾರಣ, ಮಗನನ್ನೇ ಹೀರೋ ಮಾಡಿದ್ದಾರೆ ರಾಜ್ ಕಪೂರ್. ಕ್ಯಾನ್ಸರ್ ವಿರುದ್ಧ ಹೋರಾಟ

ಬಹುಶಃ ಇನ್ನಷ್ಟು ಚಿತ್ರಗಳಲ್ಲಿ ರಿಷಿ ಕಪೂರ್ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಿದ್ದರೇನೋ? ಆದರೆ, ಅಷ್ಟರಲ್ಲಿ ಅವರಿಗೆ ಬೋನ್ ಮ್ಯಾರೋ ಕ್ಯಾನ್ಸರ್ ಎಂಬ ವಿಷಯದ ಅರಿವಾಯಿತು. ಅಭಿನಯವನ್ನು ಪಕ್ಕಕ್ಕಿಟ್ಟು 2018ರಲ್ಲಿ ನ್ಯೂಯಾರ್ಕ್​ಗೆ

ಹೋಗಿ ಚಿಕಿತ್ಸೆ ಪಡೆದು ಬಂದರು. ಕಳೆದ ವರ್ಷ ಭಾರತಕ್ಕೆ ವಾಪಸ್ಸಾದರೂ, ಅವರು ಹೊಸ ಚಿತ್ರಗಳನ್ನೇನೂ ಒಪ್ಪಿಕೊಳ್ಳಲಿಲ್ಲ. ಈ ಹಿಂದೆ ಒಪ್ಪಿದ ಚಿತ್ರಗಳನ್ನೆಲ್ಲಾ ಮುಗಿಸಿಕೊಟ್ಟರು. ಕಳೆದ ವರ್ಷ ಬಿಡುಗಡೆಯಾದ ‘ದಿ ಬಾಡಿ’ ಅವರ ಕೊನೆಯ ಚಿತ್ರವಾಯಿತು.

ಸಿಹಿ-ಕಹಿಗಳ ದಾಂಪತ್ಯ: ರಿಷಿ ಕಪೂರ್ ಮತ್ತು ನೀತು ಸಿಂಗ್ ಮದುವೆಯಾಗಿದ್ದು 1980ರಲ್ಲಾದರೂ, ಅದ್ಕಕೂ ಮುನ್ನ ಇಬ್ಬರೂ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವರಿಬ್ಬರೂ ಜತೆಯಾಗಿ ನಟಿಸಿದ ಮೊದಲ ಚಿತ್ರ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಜಹ್ರೀಲಾ ಇನ್ಸಾನ್’. ಈ ಜೋಡಿ ಜನತೆಗೆ ಇಷ್ಟವಾದ ಕಾರಣ, ಮುಂದೆ ಹಲವು ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದರು. ‘ದೋ ಅಂಜಾನೆ’, ‘ಕಭಿ ಕಭಿ’, ‘ಜಿಂದಾ ದಿಲ್’, ‘ರಫೂ ಚಕ್ಕರ್’, ‘ಅಮರ್ ಅಕ್ಬರ್ ಆಂಟೋನಿ’ ಮುಂತಾದ ಚಿತ್ರಗಳಲ್ಲಿ ಜತೆಯಾಗಿ ನಟಿಸುವಾಗ ಅವರಿಬ್ಬರ ಮಧ್ಯೆ ಪ್ರೀತಿ ಟಿಸಿಲೊಡೆದು ದಾಂಪತ್ಯ ಜೀವನಕ್ಕೆ ಕಾಲಿಡುವಂತಾಯಿತು. ಮದುವೆಯಾಗಿ ಕೆಲವು ವರ್ಷಗಳವರೆಗೂ ಸುಖ ಸಂಸಾರ ನಡೆಸಿದರಾದರೂ, ನಂತರ ಸಾಕಷ್ಟು ಸಮಸ್ಯೆಗಳಾದವು. ಒಂದು ಹಂತದಲ್ಲಿ ಇಬ್ಬರೂ ದೂರಾಗುತ್ತಾರೆ ಎಂಬ ಸುದ್ದಿಗಳು ಕೇಳಿ ಬಂದವು. ಇವೆಲ್ಲವನ್ನೂ ಸುಳ್ಳು ಮಾಡಿದ ರಿಷಿ, ಬದುಕಿರುವವರೆಗೂ ನೀತೂ ಸಿಂಗ್ ಜತೆಗೆ ಸಂಸಾರ ನಡೆಸಿದರು. ಅಷ್ಟೇ ಅಲ್ಲ, ಕೆಲ ವರ್ಷಗಳ ಹಿಂದೆಯೂ ‘ದೋ ದೂನಿ ಚಾರ್’, ‘ಬೇಷರಮ್, ‘ಜಬ್ ತಕ್ ಹೇ ಜಾನ್’ ಮುಂತಾದ ಚಿತ್ರಗಳಲ್ಲಿ ಜತೆಯಾಗಿಯೇ ನಟಿಸಿದರು.

ಬಾಲಿವುಡ್​ಗೊಬ್ಬ ರೊಮ್ಯಾಂಟಿಕ್ ಹೀರೋ: ‘ಬಾಬ್ಬಿ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ ರಿಷಿ ಕಪೂರ್, ಮೊದಲ ಚಿತ್ರದಲ್ಲೇ ದೊಡ್ಡ ಯಶಸ್ಸು ಕಂಡರು. ಆ ಚಿತ್ರದಿಂದ ಬಾಲಿವುಡ್​ಗೆ ಒಬ್ಬ ಹೊಸ ರೊಮ್ಯಾಂಟಿಕ್ ಹೀರೋ ಸಿಕ್ಕಿದ ಹಾಗಾಯಿತು. ಅಲ್ಲಿಂದ ಮುಂದಿನ 25 ವರ್ಷಗಳ ಕಾಲ ರಿಷಿ ಕಪೂರ್, ಬಾಲಿವುಡ್​ನ ರೊಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡರು. ‘ಖೇಲ್ ಖೇಲ್ ಮೇ’, ‘ಲೈಲಾ ಮಜ್ನು’, ‘ಸರಗಮ್, ‘ಕರ್ಜ್’, ‘ಸಾಗರ್’, ‘ಪ್ರೇಮ್ ರೋಗ್’, ‘ಚಾಂದಿನಿ’, ‘ಹೆನ್ನಾ’, ‘ದೀವಾನಾ’ ಹೀಗೆ ಹಲವು ಚಿತ್ರಗಳಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಅಭಿನಯಿಸಿದ್ದರು.

ಅಮಿತಾಭ್​ ಜತೆಗೂ ಮುನಿಸು: ರಿಷಿ ಕಪೂರ್ ತಮ್ಮ ವೃತ್ತಿಜೀವನದಲ್ಲಿ ಹಲವು ಮಲ್ಟಿಸ್ಟಾರರ್ ಚಿತ್ರಗಳಲ್ಲಿ ನಟಿಸಿದರು. ಆ ಕಾಲದ ಎಲ್ಲಾ ಸ್ಟಾರ್​ಗಳ ಜತೆಗೂ ರಿಷಿ ಕಪೂರ್ ನಟಿಸಿದ್ದರು. ಅದರಲ್ಲೂ ಅಮಿತಾಭ್ ಬಚ್ಚನ್ ಮತ್ತು ರಿಷಿ ಕಪೂರ್ ಜೋಡಿ ಬಹಳ ಜನಪ್ರಿಯ. ‘ಕಭೀ ಕಭೀ’, ‘ಅಮರ್ ಅಕ್ಬರ್ ಆ್ಯಂಟೋನಿ’, ‘ನಸೀಬ್’, ‘ಕೂಲಿ’ಮುಂತಾದ ಹಲವು ಚಿತ್ರಗಳಲ್ಲಿ ಅಮಿತಾಭ್ ಜತೆಗೆ ನಟಿಸಿದ್ದ ರಿಷಿ, ಒಂದು ಹಂತದಲ್ಲಿ ಅವರ ವಿರುದ್ಧ ಮುನಿಸಿಕೊಂಡಿದ್ದರು. ಆ ಬಗ್ಗೆ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು. ಅಮಿತಾಭ್ ಯಾವತ್ತೂ ತಮ್ಮ ಜತೆಗೆ ನಟಿಸಿದ ಹೀರೋಗಳಿಗೆ ಕ್ರೆಡಿಟ್ ಕೊಡುತ್ತಿರಲಿಲ್ಲ. ಅವರಿಗೆ ಹೋಲಿಸಿದರೆ ನಾವು ಕಡಿಮೆ ಸ್ಟಾರ್​ಗಳಿರಬಹುದು, ಕಡಿಮೆ ನಟರಲ್ಲ ಎಂದು ಬರೆದುಕೊಂಡಿದ್ದರು. ಅಮಿತಾಭ್ ಮೇಲೆ ಸಣ್ಣ ಮುನಿಸಿದ್ದರೂ, ಅವರೊಂದಿಗೆ ನಟಿಸುವ ಅವಕಾಶವನ್ನು ರಿಷಿ ಕಪೂರ್ ಬಿಡುತ್ತಿರಲಿಲ್ಲ. ತೀರಾ ಇತ್ತೀಚೆಗೆ ‘102 ನಾಟೌಟ್’ ಚಿತ್ರದಲ್ಲಿ ಅವರ ಮಗನಾಗಿ ಕಾಣಿಸಿಕೊಂಡಿದ್ದರು.

ರಿಷಿ ನಾಯಕಿಯಾಗಲು ದುಂಬಾಲು: ರೊಮ್ಯಾಂಟಿಕ್ ಹೀರೋ ಆಗಿ ಅವರ ಖ್ಯಾತಿ ಅದೆಷ್ಟಿತ್ತೆಂದರೆ, ಆಗಿನ ಕಾಲದ ನಾಯಕಿಯರೆಲ್ಲಾ ರಿಷಿ ಜತೆಗೆ ಒಂದಾದರೂ ಸಿನಿಮಾದಲ್ಲಿ ನಟಿಸಬೇಕು ಎಂದು ಆಸೆಪಡುತ್ತಿದ್ದರಂತೆ. ಆಗಿನ ಕಾಲದ ಖ್ಯಾತ ನಟಿಯರಾದ ಶ್ರೀದೇವಿ, ಜಯಪ್ರದಾ, ಜೂಹಿ ಚಾವ್ಲಾ, ಮೀನಾಕ್ಷಿ ಶೇಷಾದ್ರಿ, ಮಾಧುರಿ ದೀಕ್ಷಿತ್, ದಿವ್ಯ ಭಾರತಿ ಸೇರಿದಂತೆ ಹಲವರು ರಿಷಿ ಕಪೂರ್ ಜತೆಗೆ ನಟಿಸಿದ್ದರು. ಈ ಪೈಕಿ ರಿಷಿ ಕಪೂರ್ ಅವರಿಗೆ ಕೆಲವರೊಂದಿಗೆ ಅಫೇರ್ ಇದೆ ಎಂಬ ವಿಷಯಗಳು ಸಹ ಕೇಳಿ ಬರುತ್ತಿದ್ದವು. ಆದರೆ, ರಿಷಿ ಕಪೂರ್ ಮಾತ್ರ ಅದೆಲ್ಲವನ್ನೂ ಸುಳ್ಳು ಮಾಡಿ, ಪ್ರೀತಿಸಿ ಮದುವೆಯಾದ ನೀತು ಕಪೂರ್ ಜತೆಗೆ ಕೊನೆಯವರೆಗೂ ಸಂಸಾರ ನಡೆಸಿದರು.

ನೇರ, ನಿಷ್ಠುರ, ನಿರಂತರ: ರಿಷಿ ಕಪೂರ್ ಅವರು ನೇರ ನಡೆಯ, ನಿಷ್ಠುರ ಮಾತುಗಳಿಂದ ಮುಂಗೋಪಿ ಎಂದೇ ಹೆಸರಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದೇ ಮನೋಭಾವದಿಂದ ಸಾಕಷ್ಟು ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದರು. ತಮ್ಮ ಟ್ವೀಟ್​ಗಳ ಮೂಲಕವೂ ಸದಾ ಸುದ್ದಿಯಲ್ಲಿದ್ದರು. ಕೆಲವು ವರ್ಷಗಳ ಹಿಂದೆ, ‘ಖುಲ್ಲಂ ಖುಲ್ಲಾ’ ಎಂಬ ಆತ್ಮ ಚರಿತ್ರೆ ಬರೆದ ಅವರು, ಅದರಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆಯುವುದಕ್ಕೆ ದುಡ್ಡು ಕೊಟ್ಟಿದ್ದಾಗಿ ಹೇಳಿಕೊಂಡಿದ್ದರು. ತಮ್ಮ ತಂದೆಗೆ ಹಲವು ನಟಿಯರ ಜತೆಗೆ ಅಫೇರ್ ಇತ್ತೆಂದು ಒಪ್ಪಿಕೊಂಡಿದ್ದರು. ‘ಜೆಹ್ರೀಲಾ ಇನ್ಸಾನ್’ ಚಿತ್ರದಲ್ಲಿ ಮಹಿಳೆಯರ ಪ್ಯಾಂಟ್ ಹಾಕಿಕೊಂಡಿದ್ದನ್ನು ಬರೆದುಕೊಂಡಿದ್ದರು.

ಮರುಜನ್ಮ ನೀಡಿದ ‘ಅಗ್ನಿಪಥ್’: ಇನ್ನು ವೃತ್ತಿಜೀವನದ ವಿಷಯದಲ್ಲಿ ಹೇಳುವುದಾದರೆ, ನಾಯಕನಾಗಿ ಅವರದ್ದು 25 ವರ್ಷಗಳ ಸುದೀರ್ಘ ಪಯಣ. ‘ಬಾಬ್ಬಿ’ಯಿಂದ ‘ಖಾರೋಬಾರ್’ವರೆಗೂ ಹೀರೋ ಆಗಿಯೇ ನೂರಾರು ಚಿತ್ರಗಳಲ್ಲಿ ನಟಿಸಿದ ರಿಷಿ ಕಪೂರ್, ಕ್ರಮೇಣ ವಯಸ್ಸಾಗುತ್ತಿದ್ದಂತೆಯೇ ಪೋಷಕ ಪಾತ್ರಗಳತ್ತ ಜಿಗಿದರು. ಒಂದು ಹಂತದಲ್ಲಿ ತಂದೆ ಪಾತ್ರಗಳನ್ನೂ ಮಾಡಿ ಸುಸ್ತಾಗಿದ್ದ ರಿಷಿ ಕಪೂರ್​ಗೆ ಮರುಜನ್ಮನೀಡಿದ್ದು ಹೃತಿಕ್ ರೋಶನ್ ಮತ್ತು ಸಂಜಯ್ ದತ್ ಅಭಿನಯದ ‘ಅಗ್ನಿಪಥ್’. ಈ ಚಿತ್ರದ ರೌಫ್ ಲಾಲ ಪಾತ್ರ ಅವರಿಗೆ ಮರುಜನ್ಮ ನೀಡಿತು. ಅಲ್ಲಿಯವರೆಗೂ ಸಾಫ್ಟ್ ಪಾತ್ರಗಳನ್ನೇ ಮಾಡುತ್ತಿದ್ದ ರಿಷಿ ಕಪೂರ್, ಈ ಚಿತ್ರದಲ್ಲಿ ಪರಿಪೂರ್ಣವಾದ ನೆಗೆಟಿವ್ ಪಾತ್ರ ಮಾಡಿ ಗಮನಸೆಳೆದರು. ಆ ನಂತರ ಅವರಿಗೆ ‘ಡಿ ಡೇ’, ‘ಔರಂಗಜೇಬ್’, ‘ಕಪೂರ್ ಆಂಡ್ ಸನ್ಸ್’, ‘ಬೇವಕೂಫಿಯಾನ್’, ‘102 ನಾಟ್ ಔಟ್’, ‘ಮುಲ್ಕ್’, ‘ದಿ ಬಾಡಿ’ ಮುಂತಾದ ಹಲವು ಚಿತ್ರಗಳಲ್ಲಿ ವಿಭಿನ್ನ ಮತ್ತು ವಿಶೇಷ ಪಾತ್ರಗಳು ಸಿಕ್ಕವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net