ಬಾಲಿವುಡ್ ಬೆಡಗಿ ಆಲಿಯಾ ಭಟ್ ಕನ್ನಡ ಪ್ರೀತಿ

Aliya Bhatt
Published on

ಬಾಲಿವುಡ್​ನ ‘ಬ್ರಹ್ಮಾಸ್ತ್ರ’ ಸಿನಿಮಾ ಮೂರು ಭಾಗಗಳಲ್ಲಿ ತೆರೆಗೆ ಬರಲಿದೆ ಎಂಬ ವಿಚಾರವನ್ನು ಚಿತ್ರತಂಡ ಇತ್ತೀಚೆಗಷ್ಟೇ ಹೇಳಿಕೊಂಡಿತ್ತು. ಅದರಂತೆ ಹಿಂದಿ ಮಾತ್ರವಲ್ಲದೆ, ದಕ್ಷಿಣದ ನಾಲ್ಕು ಭಾಷೆಗೂ ಸಿನಿಮಾ ಡಬ್ ಆಗಲಿದೆ ಎಂಬ ಅಂಶವೂ ಹೊರಬಿದ್ದಿತ್ತು. ಇದೀಗ ದಕ್ಷಿಣದ ನಾಲ್ಕು ಭಾಷೆಯ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ರಾಜಮೌಳಿ ಅಭಯವೂ ಸಿಕ್ಕಿದೆ.

ಅಂದರೆ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ರಾಜಮೌಳಿ ಚಿತ್ರವನ್ನು ಅರ್ಪಿಸಲಿದ್ದಾರೆ. ಇದಷ್ಟೇ ಅಲ್ಲ ‘ಬ್ರಹ್ಮಾಸ್ತ್ರ’ ಚಿತ್ರದ ನಾಯಕಿ ಆಲಿಯಾ ಭಟ್, ಕನ್ನಡದಲ್ಲಿಯೇ ಟ್ವೀಟ್ ಮಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ‘ಬ್ರಹ್ಮಾಂಡದಲ್ಲಿ ಮಹಾಶಕ್ತಿಶಾಲಿಯಾದ ಅಸ್ತ್ರವೊಂದು ಉದ್ಭವಿಸಲಿದೆ. ಮಹಾಯೋಧನೊಬ್ಬನ ಉದಯವಾಗಲಿದೆ’ ಎಂದು ಟ್ವೀಟ್ ಮಾಡಿ ಚಿತ್ರದ ಕನ್ನಡ ಅವತರಣಿಕೆಯ ಮೋಷನ್ ಪೋಸ್ಟರ್ ಟೀಸರ್ ಹಂಚಿಕೊಂಡಿದ್ದಾರೆ.

ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿರುವ ‘ಬ್ರಹ್ಮಾಸ್ತ್ರ’ ತಂಡ, 2022ರ ಸೆಪ್ಟೆಂಬರ್ 9ಕ್ಕೆ ಚಿತ್ರದ ಮೊದಲ ಭಾಗ ಬಿಡುಗಡೆ ಮಾಡಲಿದೆ. ಆ ನಂತರ ಕೆಲವು ತಿಂಗಳುಗಳ ಗ್ಯಾಪ್​ನಲ್ಲಿ ಎರಡು ಮತ್ತು ಮೂರನೆಯ ಭಾಗಗಳು ಬಿಡುಗಡೆಯಾಗಲಿವೆ. ಚಿತ್ರದಲ್ಲಿ ರಣಬೀರ್ ಮತ್ತು ಆಲಿಯಾ ಭಟ್ ಜತೆಗೆ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ, ಮೌನಿ ರಾಯ್, ಡಿಂಪಲ್ ಕಪಾಡಿಯಾ ಮುಂತಾದವರು ನಟಿಸಿದ್ದು, ಅಯಾನ್ ಮುಖರ್ಜಿ ನಿರ್ದೇಶನವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net