

ಬೆಂಗಳೂರು: ಲಾಕ್ಡೌನ್ ಶುರುವಾಗುವುದಕ್ಕೆ ಮುಂಚೆಯೇ '100' ಚಿತ್ರ ಬಿಡುಗಡೆಯಾಗಿತ್ತು. ಸೆನ್ಸಾರ್ನಿಂದ 'ಯು/ಎ' ಪ್ರಮಾಣ ಪತ್ರವನ್ನು ಚಿತ್ರ ಪಡೆದಿದ್ದರೂ, ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಚಿತ್ರ ಬಿಡುಗಡೆ ತಡವಾಯಿತು. ಈಗ ಚಿತ್ರ ಬಿಡುಗಡೆ ಯಾವಾಗ ಗೊತ್ತಿಲ್ಲದಿದ್ದರೂ, ಸದ್ಯಕ್ಕೆ ಚಿತ್ರದ ಒಂದು ಹಾಡನ್ನಂತೂ ಇಂದು ಬಿಡುಗಡೆ ಮಾಡಲಾಗಿದೆ.
ಇಂದು (ಸೆಪ್ಟೆಂಬರ್ 10) ರಮೇಶ್ ಅವರ ಹುಟ್ಟುಹಬ್ಬ. ಇದರ ಅಂಗವಾಗಿ ಹಾಡು ಬಿಡುಗಡೆಯಾಗುತ್ತಿರುವುದು ವಿಶೇಷ. ‘ಚಿತ್ರದಲ್ಲಿ ಹುಟ್ಟುಹಬ್ಬದ ಕುರಿತಾದ ಒಂದು ಹಾಡಿದೆ. ಆ ಹಾಡು ತಯಾರಾದಾಗ, ನೀವೇ ಹಾಡಿದರೆ ಚೆನ್ನ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಒತ್ತಾಯಿಸಿದರು. ಹಾಗಾಗಿ ಈ ಹಾಡನ್ನು ನಾನೇ ಹಾಡಿದ್ದೇನೆ. ಇದಕ್ಕೂ ಮುನ್ನ 'ಬಿಸಿಬಿಸಿ' ಚಿತ್ರಕ್ಕಾಗಿ ನಾಲ್ಕು ಸಾಲು ಹಾಡಿದ್ದೆ. ಈಗ ಮೊದಲ ಬಾರಿಗೆ ನನ್ನ ಪಾತ್ರಕ್ಕೆ ನಾನೇ ಪೂರ್ಣಪ್ರಮಾಣವಾಗಿ ಹಾಡಿದ್ದೇನೆ’ ಎನ್ನುತ್ತಾರೆ ರಮೇಶ್.
ಇನ್ನು ಚಿತ್ರದ ಬಗ್ಗೆ ಮಾತನಾಡುವ ಅವರು, 'ಇಂಟರ್ನೆಟ್ ಮತ್ತು ಸೋಷಿಯಲ್ ಮೀಡಿಯಾಗಳನ್ನು ಅಗತ್ಯಕ್ಕೆ ತಕ್ಕಷ್ಟು ಬಳಸಿದರೆ ಅದು ವರ. ಅದೇ ಜಾಸ್ತಿಯಾದರೆ ಹೇಗೆ ಶಾಪವಾಗುತ್ತದೆ ಎಂದು ಈ ಚಿತ್ರದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ. ತಂತ್ರಜ್ಱಆನವನ್ನು ಬಳಸಿಕೊಂಡು ನಯವಂಚಕರು ಮಹಿಳೆಯರ ಖಾಸಗೀ ಬದುಕಿನ ಮೇಲೆ ಹೇಗೆಲ್ಲಾ ಕಣ್ಣಿಡುತ್ತಾರೆ ಮತ್ತು ಏನೆಲ್ಲಾ ಆಟವಾಡುತ್ತಾರೆ ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ. ಇದೊಂದು ಫ್ಯಾಮಿಲಿ ಕ್ರೈಮ್ ಥ್ರಿಲ್ಲರ್ ಚಿತ್ರ' ಎನ್ನುತ್ತಾರೆ ರಮೇಶ್ ಅರವಿಂದ್.
ಇದನ್ನೂ ಓದಿ: ಶಿವಸೇನಾ ಈಗ ಸೋನಿಯಾ ಸೇನಾ ಆಗಿದೆ … ಕಂಗನಾ ಆರೋಪ
ಈ ಚಿತ್ರದಲ್ಲಿ ರಮೇಶ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜತೆಗೆ ಪೂರ್ಣಾ, ರಚಿತಾ ರಾಮ್, ವಿಶ್ವ, ಅಮಿತಾ ರಂಗನಾಥ್ ಮುಂತಾದವರು ನಟಿಸಿದ್ದಾರೆ. ಇನ್ನು ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದರೆ, ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. 'ಉಪ್ಪು ಹುಳಿ ಖಾರ', 'ಪಡ್ಡೆಹುಲಿ', 'ನಾತಿಚರಾಮಿ' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.