ಅವ್ರು ಇವ್ರು ಜತೆ ಬೀರ್​ಬಲ್; 2023ರಲ್ಲಿ ಪ್ರಾರಂಭ, ಬಿಡುಗಡೆ

Birbal
Published on

ಬೆಂಗಳೂರು: ‘ಬೀರಬಲ್’ನ ಸಾಹಸಗಳು ಮೂರು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕೆಲವು ವರ್ಷಗಳ ಹಿಂದೆಯೇ ಘೋಷಿಸಿದ್ದರು, ಆ ಚಿತ್ರದ ನಾಯಕ ಕಂ ನಿರ್ಮಾಪಕ ಎಂ.ಜಿ. ಶ್ರೀನಿವಾಸ್ ಅಲಿಯಾಸ್ ಆರ್​ಜೆ ಶ್ರೀನಿ. ಅದರಂತೆ ‘ಬೀರ್​ಬಲ್ - ವಜ್ರಮುನಿ’ ಎಂಬ ಮೊದಲ ಭಾಗವನ್ನೂ ಅವರು ತೆರೆಗೆ ತಂದರು. ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುವುದರ ಜತೆಗೆ ಎರಡನೆಯ ಭಾಗ ಯಾವಾಗ ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇತ್ತು. ಈಗ ಆ ಪ್ರಶ್ನೆಗೆ ಕೊನೆಗೂ ಶ್ರೀನಿ ಉತ್ತರಿಸಿದ್ದಾರೆ. ಚಿತ್ರ ಮುಂದಿನ ವರ್ಷ ಪ್ರಾರಂಭವಾಗಿ ಮುಂದಿನ ವರ್ಷವೇ ಬಿಡುಗಡೆ ಆಗಲಿದೆ.

ಶನಿವಾರ, ಶ್ರೀನಿ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ‘ಬೀರ್​ಬಲ್ 2’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡುವುದರ ಮೂಲಕ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಚಿತ್ರಕ್ಕೆ ‘ಅವ್ರನ್ ಬಿಟ್ ಇವ್ರನ್ ಬಿಟ್ ಅವ್ರ್ ಯಾರು’ ಎಂದು ಹೆಸರಿಡಲಾಗಿದೆ. ಇದು ಇನ್ನೊಂದು ಮಿಸ್ಟ್ರಿ ಥ್ರಿಲ್ಲರ್ ಚಿತ್ರವಾಗಿದ್ದು, ಗದ್ದೆಯ ಮಧ್ಯೆ ವ್ಯಕ್ತಿಯೊಬ್ಬ ಹೆಣಗಳನ್ನು ಸುಡುತ್ತಿರುವುದನ್ನು ಗಮನಿಸಬಹುದು. ಅವನ್ಯಾರು? ಸತ್ತವರು ಯಾರು? ಅವನಿಗೆ ಅವರೇನು ಸಂಬಂಧ? ಈ ಕೇಸ್​ಗೂ ಬೀರ್​ಬಲ್​ಗೂ ಏನು ಸಂಬಂಧ ಎಂಬುದು ಚಿತ್ರ ಬಿಡುಗಡೆ ಆದ ಮೇಲೆ ಗೊತ್ತಾಗಲಿದೆ.

ಅಂದಹಾಗೆ, ಶ್ರೀನಿ ಸದ್ಯ ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ಬಿಜಿಯಾಗಿದ್ದು, ಆ ಚಿತ್ರ ಬಿಡುಗಡೆಯಾದ ಮೇಲೆ ‘ಬೀರ್​ಬಲ್’ ಶುರು ಮಾಡುವುದಾಗಿ ಹೇಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net