

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕುರಿತು ಬಯೋಪಿಕ್ ನಿರ್ವಣವಾಗಲಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಆದರೆ, ವಾಜಪೇಯಿ ಅವರ ಪಾತ್ರವನ್ನು ಯಾರು ಮಾಡುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಈಗ ಆ ಸುದ್ದಿ ಬಹಿರಂಗವಾಗಿದ್ದು, ವಾಜಪೇಯಿ ಅವರ ಪಾತ್ರವನ್ನು ಪಂಕಜ್ ತ್ರಿಪಾಠಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ವಾಜಪೇಯಿ ಕುರಿತು ಉಲ್ಲೇಖ್ ಎನ್.ಪಿ ಎನ್ನುವವರು ‘ದಿ ಅನ್ಟೋಲ್ಡ್ ವಾಜಪೇಯಿ: ಪೊಲಿಟೀಷಿಯನ್ ಆಂಡ್ ಪ್ಯಾರಡಾಕ್ಸ್’ ಎಂಬ ಪುಸ್ತಕ ಬರೆದಿದ್ದು, ಅದನ್ನಾಧರಿಸಿ, ‘ಮೇ ರಹೂಂ ಯಾ ನಾ ರಹೂಂ, ಏ ದೇಶ್ ರೆಹ್ನಾ ಚಾಹಿಯೇ - ಅಟಲ್’ ಎಂಬ ಚಿತ್ರ ನಿರ್ವಣವಾಗುತ್ತಿದೆ. ಈ ಚಿತ್ರದಲ್ಲಿ ಪಂಕಜ್, ಭಾರತದ ಮಾಜಿ ಪ್ರಧಾನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಈ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ? ಇತರೆ ಕಲಾವಿದರು ಮತ್ತು ತಂತ್ರಜ್ಞರು ಯಾರು ಎಂಬ ವಿಷಯ ಇನ್ನಷ್ಟೇ ಬಹಿರಂಗವಾಗಬೇಕಿದೆ. ‘ಮೇ ರಹೂಂ ಯಾ ನಾ ರಹೂಂ’ ಚಿತ್ರವನ್ನು ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್ ಮುಂತಾದವರು ನಿರ್ವಿುಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.
ವಾಜಪೇಯಿ ಅವರ 99ನೇ ಜನ್ಮದಿನದ ಪ್ರಯುಕ್ತ ಈ ಚಿತ್ರವು 2023ರ ಕ್ರಿಸ್ಮಸ್ ಸಂದರ್ಭದಲ್ಲಿ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಉಳಿದಂತೆ ಪಂಕಜ್ ‘ಓಹ್ ಮೈ ಗಾಡ್-2’ ಚಿತ್ರದಲ್ಲಿ ನಟಿಸುತ್ತಿದ್ದು, ‘ಗುಲಕಂದಾ ಟೇಲ್ಸ್’ ಎಂಬ ವೆಬ್ ಸರಣಿಯಲ್ಲೂ ಕಾಣಿಸಿಕೊಳ್ಳಲಿದ್ದಾರೆ. - ಏಜೆನ್ಸೀಸ್