ರಿಲೀಸ್ ಆಯ್ತು ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಬಯೋಪಿಕ್​ ಚಿತ್ರದ ಟ್ರೇಲರ್; ಪ್ರೇಕ್ಷಕರು ಹೇಳಿದ್ದೇನು?

Untitled design - 2023-09-05T170137.509
Published on

ಆಂಧ್ರಪ್ರದೇಶ: ಕ್ರಿಕೆಟ್​ ದಿಗ್ಗಜ, ಶ್ರೀಲಂಕಾದ ಹೆಸರಾಂತ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಜೀವನಾಧರಿತ '800' ಚಿತ್ರದ ಟ್ರೇಲರ್​ ಅನ್ನು ಇಂದು ಚಿತ್ರತಂಡ ಅಧಿಕೃತವಾಗಿ ಯೂಟ್ಯೂಬ್​ನಲ್ಲಿ ಬಿಡುಗಡೆಗೊಳಿಸಿದೆ.

ಹಿಂದಿ ಬಾಷೆಯಲ್ಲಿ ಬಿಡುಗಡೆಗೊಂಡಿದ್ದ 'ಸ್ಲಮ್‌ಡಾಗ್ ಮಿಲಿಯನೇರ್‌' ಚಿತ್ರದಲ್ಲಿ ತನ್ನ ವಿಶೇಷ ಅಭಿನಯಕ್ಕಾಗಿ ಹೆಸರುವಾಸಿಯಾದ ಮಧುರ್ ಮಿತ್ತಲ್, '800' ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಎಂ.ಎಸ್​. ಶ್ರೀಪತಿ ನಿರ್ದೇಶನದ ಈ ಚಿತ್ರವು ಅಕ್ಟೋಬರ್ 2023 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಬಹುನಿರೀಕ್ಷಿತ ಸಿನಿಮಾದ ಟ್ರೇಲರ್​ ಅನ್ನು ನಿರ್ಮಾಪಕ ವಿವೇಕ್​ ರಂಗಾಚಾರಿ ಇಂದು ಸೋನಿ ಮ್ಯೂಸಿಕ್​ ಸೌತ್​ ಚಾನಲ್​ನಲ್ಲಿ ಅಧಿಕೃತವಾಗಿ ರಿಲೀಸ್ ಮಾಡಿದ್ದಾರೆ. 

ಕ್ರಿಕೆಟ್​ ಅಖಾಡದಲ್ಲಿ ತಮ್ಮ ವಿಶಿಷ್ಟ ಸ್ಪಿನ್​ ದಾಳಿಗೆ ಹೆಚ್ಚು ಖ್ಯಾತರಾದ ಮುತ್ತಯ್ಯ ಮುರಳೀಧರನ್ ಅವರ ಬಾಲ್ಯ, ಶೈಕ್ಷಣಿಕ ಮತ್ತು ಕ್ರಿಕೆಟ್​ ವೃತ್ತಿಗೆ ಬಂದ ದಿನಗಳನ್ನು ದೊಡ್ಡ ಪರೆದಯ ಮುಖೇನ ತೋರಿಸುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಸದ್ಯ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಟ್ರೇಲರ್‌ ರಿಲೀಸ್​ ಮಾಡಿರುವ ಚಿತ್ರತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಟ್ರೇಲರ್​ನಲ್ಲಿ ಮುತ್ತಯ್ಯ ಮುರಳೀಧರನ್ ಆಗಿ ನಟಿಸಿರುವ ನಟ ಮಧುರ್ ಮಿತ್ತಲ್, ಚಿತ್ರದಲ್ಲಿ ಮುರುಳಿ ಅವರನ್ನು ಹೋಲುತ್ತಾರೆ. ಬೌಲಿಂಗ್ ಅನುಕರಣೆ ಕೂಡ ಚೆನ್ನಾಗಿ ಮೂಡಿಬಂದಿದ್ದು, ಟ್ರೇಲರ್​ ಪೂರ ಮಧುರ್ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. "ಯಾವ ನಟ ಅಥವಾ ಯಾವ ದೇಶವನ್ನು ಪ್ರತಿನಿಧಿಸುವ ಕ್ರಿಕೆಟ್ಟಿಗ ಎಂದು ನೋಡದೆ, ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಎಲ್ಲರೂ ಈ ಸಿನಿಮಾ ವೀಕ್ಷಿಸಬೇಕು" ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

ಟ್ರೈನ್ ಮೋಷನ್ ಪಿಕ್ಚರ್ಸ್‌ನ ವಿವೇಕ್ ರಂಗಾಚಾರಿ ನಿರ್ಮಿಸಿರುವ ಈ ಚಿತ್ರದಲ್ಲಿ ನಾಸರ್, ನರೇನ್, ಮಹಿಮಾ ನಂಬಿಯಾರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಗಿಬ್ರಾನ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net