ಅತ್ತೆ ಸೊಸೆ ಜಗಳದಲ್ಲಿ ಬಿಲ್​ ಗೇಟ್ಸ್​ ಗೆಸ್ಟ್​! ಮೊದಲ ಬಾರಿ ಹಿಂದಿ ಕಿರುತೆರೆಯಲ್ಲಿ ಕಾಣಿಸಿಕೊಂಡ ಹೆಸರಾಂತ ಉದ್ಯಮಿ

FotoJet
Published on

ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಬಿಲ್​ ಗೇಟ್ಸ್​ ಇದೇ ಮೊದಲ ಬಾರಿಗೆ ಹಿಂದಿ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಮಾಜಿ ಕೇಂದ್ರ ಸಚಿವೆ, ನಟಿ ಸ್ಮೃತಿ  ಇರಾನಿ ಅಭಿನಯಿಸುತ್ತಿರುವ "ಕ್ಯೂಂಕಿ ಸಾಸ್​ ಭಿ ಕಭೀ ಬಹೂ ಥಿ 2'ರ ಹೊಸ ಸಂಚಿಕೆಯಲ್ಲಿ ಬಿಲ್​ ಗೇಟ್ಸ್​ ಕಾಣಿಸಿಕೊಂಡಿದ್ದಾರೆ. ಸ್ಮೃತಿ ಅವರಿಲ್ಲಿ ತುಳಸಿ ವಿರಾನಿ ಪಾತ್ರದಲ್ಲಿ ನಟಿಸಿದ್ದು, ಅವರ ಜತೆ ಅಮೆರಿಕದಿಂದ ವಿಡಿಯೋ ಕರೆ ಮೂಲಕ ಸಂಪರ್ಕಿಸಿರುವ ಬಿಲ್​ ಗೇಟ್ಸ್​, "ಜೈ ಶ್ರೀಕೃಷ್ಣ ತುಳಸಿಜೀ..' ಎಂದು ಸಂಭಾಷಣೆ ಆರಂಭಿಸಿರುವ ಪ್ರೋಮೊ ಸದ್ಯ ಜಾಲತಾಣದಲ್ಲಿ ವೈರಲ್​ ಆಗಿದೆ.

ಆರೋಗ್ಯದ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಲ್​ ಗೇಟ್ಸ್​ ತಮ್ಮ ಫೌಂಡೇಷನ್​ ಮೂಲಕ ಸಾಕಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿಯೇ ಇದೀಗ ಜನಪ್ರಿಯ ಧಾರಾವಾಹಿಯ ಮೂಲಕ ಜನರಲ್ಲಿ ಅರಿವು ಮೂಡಿಸಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇಂಗ್ಲೀಷ್​ ಸರಣಿ "ದ ಬಿಗ್​ ಬ್ಯಾಂಗ್​ ಥಿಯರಿ'ಯಲ್ಲಿ ಒಮ್ಮೆ ನಟಿಸಿದ್ದ ಬಿಲ್​ ಗೇಟ್ಸ್​, ಇದೇ ಮೊದಲ ಬಾರಿಗೆ ಭಾರತೀಯ ವಾಹಿನಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. "ಕ್ಯೂಂಕಿ ಸಾಸ್​ ಭಿ ಕಭೀ ಬಹೂ ಥಿ' ಧಾರಾವಾಹಿ ಭಾರತೀಯ ಕಿರುತೆರೆ ಇತಿಹಾಸದಲ್ಲೇ ಅತಿ ದೊಡ್ಡ ಯಶಸ್ಸು ಕಂಡ ಸೀರಿಯಲ್​ಗಳಲ್ಲಿ ಒಂದಾಗಿದ್ದು, 2000ರಿಂದ 2008ರವರೆಗೆ 1800ಕ್ಕೂ ಅಧಿಕ ಸಂಚಿಕೆಗಳು ಪ್ರಸಾರವಾಗಿದ್ದವು.

ಈ ಧಾರಾವಾಹಿ ಮೂಲಕ ಸ್ಮೃತಿ ಇರಾನಿ ತುಳಸಿ ವಿರಾನಿ ಎಂದೇ ಮನೆಮಾತಾಗಿದ್ದರು. ಇದೀಗ 2025ರ ಜುಲೈನಿಂದ ಧಾರಾವಾಹಿಯ ಎರಡನೇ ಸರಣಿ ಆರಂಭವಾಗಿದ್ದು, ಸ್ಮೃತಿ ಮತ್ತೆ ತಂಡ ಸೇರಿಕೊಂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net