

Bigg Boss Kannada 12 : ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಪ್ರಸಿದ್ಧಿಯಾಗಿರುವ ‘ಬಿಗ್ಬಾಸ್ ಕನ್ನಡ ಸೀಸನ್ 12’ಗೆ ಭಾನುವಾರ ಸಂಜೆ 6ಕ್ಕೆ ಅದ್ದೂರಿ ಚಾಲನೆ ದೊರೆಯಿತು. ನಟ, ನಿರೂಪಕ ಸುದೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಿನ್ನ, ವಿಭಿನ್ನ, ವಿಶೇಷ ಅನಿಸುವ ಸಿನಿಮಾ, ಕಿರುತೆರೆ, ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಸೇರಿ ವಿವಿಧ ಕ್ಷೇತ್ರದ ಸ್ಪರ್ಧಾಳುಗಳು ‘ದೊಡ್ಮನೆ’ಯನ್ನು ಪ್ರವೇಶಿಸಿದರು. 100ಕ್ಕೂ ಹೆಚ್ಚು ದಿನಗಳ ಕಾಲ ನಡೆಯುವ ಈ ಶೋನ ಹಣಾಹಣಿಯಲ್ಲಿ ಸ್ಪರ್ಧಿಗಳ ಜಿದ್ದಾಜಿದ್ದಿನ ಆಟ, ಮೈಂಡ್ ಗೇಮ್ ಹಾಗೂ ಹೋರಾಟಕ್ಕೆ ‘ಬಿಗ್ಬಾಸ್’ ಸಾಕ್ಷಿಯಾಗಲಿದ್ದಾರೆ.
ಪ್ರತಿ ಸೋಮವಾರದಿಂದ ಶುಕ್ರವಾರವರೆಗೆ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಇನ್ನು ನಟ ಸುದೀಪ್ ನಡೆಸಿಕೊಡುವ ವೀಕೆಂಡ್ ಶೋ ಪ್ರತಿ ಶನಿವಾರ-ಭಾನುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ.
‘ಬಿಗ್ಬಾಸ್ ಕನ್ನಡ ಸೀಸನ್ 12’ರ ಮನೆಯನ್ನು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ಸಾರುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮೈಸೂರು ಅರಮನೆ, ಅಂಬಾರಿ ಮೆರವಣಿಗೆ, ಹಂಪಿ ಕಲ್ಲಿನ ರಥವು ಮನೆಯಲ್ಲಿ ಮೂಡಿಬಂದಿದೆ. ಇಡೀ ದೊಡ್ಮನೆ ಕಲರ್ಫುಟ್ ಸೆಟ್ನಿಂದ ಝುಗಮಗಗೊಳಿಸುತ್ತಿದೆ. ಸ್ಪರ್ಧಿಗಳು ದೊಡ್ಮನೆ ಪ್ರವೇಶಿಸುವ ಮುನ್ನವೇ ನಿರೂಪಕ ಸುದೀಪ್, ಇಡೀ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದರು.