ಈ 2 ಸ್ಪರ್ಧಿಗಳ ಕಾಂಬಿನೇಷನ್​ ಬಗ್ಗೆಯೇ ಭಾರಿ ಚರ್ಚೆ! ಸಖತ್​ ಕಿಕ್​ ಇರಲಿದೆಯಂತೆ ಈ ಸಲದ ಬಿಗ್​ಬಾಸ್ | Bigg Boss Kannada 11

Bigg Boss Kannada
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 11 ( Bigg Boss Kannada 11 ) ಇಂದಿನಿಂದ ಆರಂಭವಾಗಲಿದೆ. ಯಾರೆಲ್ಲ ಮನೆಯನ್ನು ಪ್ರವೇಶಿಸಲಿದ್ದಾರೆ ಎಂಬ ಕುತೂಹಲಕ್ಕೆ ಇಂದು ತೆರೆಬೀಳಲಿದೆ. ಈಗಾಗಲೇ ನಾಲ್ಕು ಸ್ಪರ್ಧಿಗಳ ಹೆಸರು ಖಚಿತವಾಗಿದೆ. ನಿನ್ನೆ ನಡೆದ ರಾಜಾ-ರಾಣಿ ಶೋನ ಗ್ರ್ಯಾಂಡ್​ ಫಿನಾಲೆಯಲ್ಲಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಅವರ ಹೆಸರುಗಳು ಘೋಷಣೆಯಾಗಿದೆ.

ಈ ಬಾರಿಯ ಶೋನಲ್ಲಿ ಸ್ವರ್ಗ ಮತ್ತು ನರಕ ಎಂಬ ಪರಿಕಲ್ಪನೆ ಇದೆ. ಯಾರು ಸ್ವರ್ಗಕ್ಕೆ ಮತ್ತು ಯಾರು ನರಕಕ್ಕೆ ಹೋಗಬೇಕು ಎಂಬುದನ್ನು ಪ್ರೇಕ್ಷಕರೇ ನಿರ್ಧಾರ ಮಾಡಲಿದ್ದಾರೆ. ಇಂದು ನಡೆಯುವ ಗ್ರ್ಯಾಂಡ್​ ಓಪನಿಂಗ್​ನಲ್ಲಿ ಯಾವ ಸ್ಪರ್ಧಿಗಳು ನರಕಕ್ಕೆ ಮತ್ತು ಸ್ವರ್ಗಕ್ಕೆ ಹೋಗಲಿದ್ದಾರೆ ಎಂಬುದು ಖಚಿತವಾಗಲಿದೆ.

ಇನ್ನು ಬಿಗ್​ಬಾಸ್​ ಹೊಸ ಸೀಸನ್​ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದರಲ್ಲೂ ಇಬ್ಬರು ಸ್ಪರ್ಧಿಗಳ ಕಾಂಬಿನೇಷನ್​ ಸಖತ್​ ಚರ್ಚೆಯಾಗುತ್ತಿದೆ. ಯಾರು ಆ ಇಬ್ಬರು ಸ್ಪರ್ಧಿಗಳೆಂದರೆ, ಒಂದು ಲಾಯರ್​ ಜಗದೀಶ್​, ಮತ್ತೊಬ್ಬರು ಚೈತ್ರಾ ಕುಂದಾಪುರ. ಈ ಇಬ್ಬರು ಕೂಡ ಜೈಲಿಗೆ ಹೋಗಿ ಬಂದವರು.

ಚೈತ್ರಾ ಕುಂದಾಪುರ ಹಿಂದು ಕಾರ್ಯಕರ್ತೆಯಾಗಿ ತಮ್ಮ ಭಾಷಣದಿಂದಲೇ ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಲಾಯರ್​ ಜಗದೀಶ್​ ಅವರು ಸಾಮಾಜಿಕ ಕಾರ್ಯಕರ್ತನಾಗಿ ಅನ್ಯಾಯದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಚುನಾವಣೆಗೆ ಟಿಕೆಟ್​ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಈ ಹಿಂದೆ ಜೈಲುಪಾಲಾಗಿದ್ದರು. ಇನ್ನು ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ನಡೆದ ಗಲಾಟೆ ಸಂಬಂಧ ಲಾಯರ್​ ಜಗದೀಶ್​ ಅವರನ್ನು ಬಂಧಿಸಲಾಗಿತ್ತು. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದರಲ್ಲಿ ಸದಾ ಮುಂದಿರುವ ಜಗದೀಶ್​, ಇತ್ತೀಚೆಗೆ ನಟ ದರ್ಶನ್​ ಪ್ರಕರಣದಿಂದಲೂ ಭಾರಿ ಸುದ್ದಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಅವರನ್ನು ಸಿಲುಕಿಸಲಾಗಿದೆ. ಶಾಸಕ ಮುನಿರತ್ನನ ಕೈವಾಡ ಇದೆ. ಸರಿಯಾದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು.

ಒಂದೆಡೆ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಜೈಲು, ಇನ್ನೊಂದೆಡೆ ನ್ಯಾಯಕ್ಕಾಗಿ ಹೋರಾಟ ಎಂದು ಹೇಳಿಕೊಂಡು ಜಗದೀಶ್​ ಜೈಲು ಸೇರಿದ್ದರು. ಇನ್ನು ಇಬ್ಬರ ಸಿದ್ಧಾಂತವೂ ಕೂಡ ತದ್ವಿರುದ್ಧವಾಗಿದ್ದು, ಇವರಿಬ್ಬರು ಒಂದೇ ಮನೆಗೆ ಸೇರಿರುವುದರಿಂದ ಈ ಬಾರಿಯ ಬಿಗ್​ಬಾಸ್​ ಸಖತ್​ ಕಿಕ್​ ಇರಲಿದೆ ಎಂದು ನೆಟ್ಟಿಗರು ಭಾರಿ ಚರ್ಚೆಯಲ್ಲಿ ತೊಡಗಿದ್ದಾರೆ. ಇಬ್ಬರ ನಡುವೆ ದೊಡ್ಮನೆಯಲ್ಲಿ ವಾಗ್ವಾದ ಜೋರಾಗಿರಲಿದ್ದು, ನೋಡುಗರನ್ನು ಸೆಳೆಯುವುದರಲ್ಲಿ ಸಂದೇಹವೇ ಇಲ್ಲ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಮಾತುಗಳು ನಿಜವಾಗಲಿದೆಯಾ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಅಂದಹಾಗೆ ರಾಜಾ ರಾಣಿ ಫಿನಾಲೆಯಲ್ಲಿ ಗೌತಮಿ ಜಾಧವ್, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಅವರ ಹೆಸರುಗಳು ಘೋಷಣೆಯಾಗಿದೆ. ಇವರಲ್ಲಿ ಲಾಯರ್ ಜಗದೀಶ್ ಮತ್ತು ಗೌತಮಿ ಜಾಧವ್ ಅವರುಗಳು ಸ್ವರ್ಗಕ್ಕೆ ಹೋಗಲಿದ್ದು, ಚೈತ್ರಾ ಕುಂದಾಪುರ ಮತ್ತು ಗೋಲ್ಡ್ ಸುರೇಶ್ ಅವರುಗಳು ನರಕಕ್ಕೆ ಹೋಗಲಿದ್ದಾರಂತೆ. ಗಿಚ್ಚಿ ಗಿಲಿ-ಗಿಲಿ ಧನರಾಜ್, ನಟರಾದ ಕೀರ್ತಿ ಧರ್ಮರಾಜ್, ನಟ ಉಗ್ರಂ ಮಂಜು ಸಹ ಈ ಬಾರಿ ಬಿಗ್​ಬಾಸ್ ಮನೆಗೆ ಹೋಗಲಿದ್ದಾರೆ. ನಟಿಯರಾದ ಯಮುನಾ, ಭವ್ಯ, ಐಶ್ವರ್ಯಾ, ತ್ರಿವಿಕ್ರಮ್ ಮತ್ತು ಹಂಸ ಅವರುಗಳು ಸಹ ಬಿಗ್​ಬಾಸ್ ಮನೆಯಲ್ಲಿದ್ದು, ಇವರೆಲ್ಲರೂ ಸ್ವರ್ಗದಲ್ಲಿ ಇರಲಿದ್ದಾರಂತೆ. ನಟ ಶಿಶಿರ, ನಟಿ ಮೋಕ್ಷಿತ ಹಾಗೂ ಕಳೆದ ಬಾರಿ ಬಿಗ್​ಬಾಸ್​ಗೆ ಹೋಗಿದ್ದ ತುಕಾಲಿ ಸಂತೋಷ್ ಅವರ ಪತ್ನಿ ತುಕಾಲಿ ಮಾನಸ, ರಂಜಿತಾ, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಸಹ ನರಕದಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆಲ್ಲ ಉತ್ತರ ಬಿಗ್​ಬಾಸ್​ ಗ್ರ್ಯಾಂಡ್​ ಓಪನಿಂಗ್​ ಎಪಿಸೋಡ್​ನಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net