

ಬೆಂಗಳೂರು: ‘ಬಿಗ್ಬಾಸ್ ನನ್ನ ಜೀವನವನ್ನೇ ಬದಲಿಸಿದೆ. ಜೀವನ ಪಾಠ ಕಲಿಸಿದೆ. ನಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರ ಎಷ್ಟು ಮುಖ್ಯ, ಸ್ನೇಹ ಎಷ್ಟು ಮುಖ್ಯ.. ಹೀಗೆ ಎಲ್ಲವನ್ನೂ ಕಲಿಸಿದೆ. ವೋಟ್ ಹಾಕಿ ಗೆಲ್ಲಿಸಿದ ಜನರ ಋಣವನ್ನೂ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ’ ಎಂದು ಬಿಗ್ಬಾಸ್ ಸೀಸನ್ 8ರ ವಿಜೇತ ಮಂಜು ಪಾವಗಡ ಹೇಳಿಕೊಂಡಿದ್ದಾರೆ.ರಂಗಭೂಮಿ ಹಿನ್ನೆಲೆಯಿಂದ ಬಂದು, ‘ಮಜಾಭಾರತ’ ಮೂಲಕ ಮನೆ ಮಾತಾದ ಮಂಜು ಪಾವಗಡ ಸೀಸನ್ 8ರಲ್ಲಿ 45 ಲಕ್ಷ ಮತಗಳನ್ನು ಪಡೆದು ಟ್ರೋಫಿ ಎತ್ತಿ ಹಿಡಿದಿದ್ದಾರೆ. ಹಾಗಾದರೆ ಅವರ ಮುಂದಿನ ಪ್ಲಾನ್ ಏನು? ಅದನ್ನು ಸ್ವತಃ ಮಂಜು ಅವರೇ ಹೇಳಿಕೊಂಡಿದ್ದಾರೆ.
‘ಬಿಗ್ ಬಾಸ್ನ ಅಭಿಮಾನಿ ನಾನು. ಯಾವೆಲ್ಲ ಸ್ಪರ್ಧಿಗಳು ಭಾಗವಹಿಸುತ್ತಾರೆ ಎಂದು ಪ್ರತಿ ಸೀಸನ್ನಲ್ಲಿಯೂ ನೋಡಿ ಕೊಂಡು ಬಂದವನು. ಅಂಥ ಒಂದು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಏಕೆಂದರೆ, ದೊಡ್ಡ ಕಲಾವಿದರು, ಈಗಾಗಲೇ ಗುರುತಿಸಿಕೊಂಡವರೆಲ್ಲ ಸ್ಪರ್ಧಿಗಳಾಗಿರುತ್ತಾರೆ. ಅವರ ನಡುವೆ ನಾವು ಉಳಿಯುತ್ತೇವಾ ಎಂದೆನಿಸಿತ್ತು. ಕೊನೆಗೆ ಟಾಪ್ 5ರಲ್ಲಿ ಸ್ಥಾನ ಸಿಕ್ಕಾಗ ಗೆದ್ದೆ ಎಂಬ ಫೀಲ್ ಆಗಿತ್ತು. ಇದೀಗ ಟ್ರೋಫಿಯೇ ಸಿಕ್ಕಿದೆ. ಸದ್ಯಕ್ಕೆ ಮುಂದಿನ ಪ್ಲಾನ್ ಏನು ಎಂಬುದು ಗೊತ್ತಿಲ್ಲ. ಬಂದ ದುಡ್ಡಿಂದ ಅಪ್ಪ, ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುವ ಆಸೆ ಇದೆ’ ಎನ್ನುತ್ತಾ ರವರು. ರಿಯಾಲಿಟಿ ಶೋ ಮೂಲಕವೇ ಈ ಹಂತಕ್ಕೆ ಬಂದಿರುವ ಮಂಜು, ಮುಂದೆ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗುತ್ತಾರಂತೆ. ದೊಡ್ಡ ಸ್ಟಾರ್ ನಟರ ಜತೆಗೆ ಸಿನಿಮಾ ಮಾಡಬೇಕೆಂಬ ಆಸೆಯೂ ಅವರಿಗಿದೆಯಂತೆ.
ಬಿಗ್ ಬಾಸ್ ಸೀಸನ್ 8ರ ವಿಜೇತ ಮಂಜು ಪಾವಗಡ ಮಂಗಳವಾರ ಸಂಜೆ 6 ಗಂಟೆಗೆ ‘ವಿಜಯವಾಣಿ ಮತ್ತು ದಿಗ್ವಿಜಯ’ ಅರ್ಪಿಸುವ ಕ್ಲಬ್ ಹೌಸ್ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ. ಇಲ್ಲಿ ಕಾಣಿಸಿದ ಕ್ಯೂ ಆರ್ ಕೋಡ್ ಸ್ಕಾ್ಯನ್ ಮಾಡಿ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಈ ಕ್ಲಬ್ ಹೌಸ್ ಕಾರ್ಯಕ್ರಮದಲ್ಲಿ ಪಾವಗಡದಿಂದ ಬಿಗ್ಬಾಸ್ ಸಿಂಹಾಸನದ ವರೆಗಿನ ಪಯಣವನ್ನು ಮೆಲುಕು ಹಾಕಲಿದ್ದಾರೆ.