ಯಾರ ಮನಸ್ಸು ನೋಯಿಸಲು ಹೋಗಿರಲಿಲ್ಲ; 15 ದಿನಕ್ಕೆ ಹೊರಬಂದ ನಿರ್ಮಲಾ ನೇರಮಾತು

Nirmala
Published on

ಬೆಂಗಳೂರು: ‘‘ಬಿಗ್​ಬಾಸ್’ ಮನೆಗೆ ಹೋಗುವಾಗಲೇ ಅದರಿಂದ ಬಂದ ದುಡ್ಡನ್ನು ಒಂದಷ್ಟು ಸೇವಾ ಕಾರ್ಯಗಳಿಗೆ ನೀಡಬೇಕೆಂದೇ ಅಂದುಕೊಂಡು ಹೋಗಿದ್ದೆ. ಅದನ್ನು ಬಿಟ್ಟು ಅಲ್ಲಿ ಯಾರನ್ನೂ ಜರಿಯಬೇಕೆಂದೋ, ಇನ್ಯಾರದ್ದೋ ಮನಸ್ಸು ನೋಯಿಸಬೇಕೆಂದೋ ನಾನು ಹೋಗಿಲ್ಲ’- ಹೀಗೆ ಕಡ್ಡಿ ಮುರಿದಂತೆ ಹೇಳಿಕೊಳ್ಳುತ್ತಾರೆ 15ದಿನದ ‘ಬಿಗ್​ಬಾಸ್’ ಪಯಣವನ್ನು ಮುಗಿಸಿಕೊಂಡು ಬಂದ ನಿರ್ಮಲಾ ಚನ್ನಪ್ಪ. ಆ 15 ದಿನದ ಒಂದಷ್ಟು ನೆನಪುಗಳನ್ನು ನಿರ್ಮಲಾ ಹಂಚಿಕೊಂಡಿದ್ದಾರೆ. ಅವರು ಆಡಿದ ಮಾತುಗಳನ್ನು ಅವರ ಧಾಟಿಯಲ್ಲಿಯೇ ‘ವಿಜಯವಾಣಿ’ ನಿಮ್ಮ ಮುಂದಿಟ್ಟಿದೆ.

‘ನಾನು ನನ್ನ ಮನೆಯಿಂದ ಹೊರಹೋಗುವಾಗ ಹೇಗೆ ಹೋಗಿದ್ದೆನೋ, ಅದೇ ಮನಸ್ಥಿತಿಯಲ್ಲಿಯೇ ‘ಬಿಗ್​ಬಾಸ್’ ಮನೆಯ ಹೊಸ್ತಿಲು ತುಳಿದಿದ್ದೆ. ಖುಷಿಯ ವಿಚಾರ ಏನೆಂದರೆ, ಭಗವಂತ ಆ ದೊಡ್ಡ ವೇದಿಕೆಯಲ್ಲಿ 15 ದಿನ ಇರಲು ನನಗೆ ಅವಕಾಶ ನೀಡಿದ್ದ್ದು. ಅದನ್ನು ಅಷ್ಟೇ ಚೆನ್ನಾಗಿ ಬಳಸಿಕೊಂಡಿದ್ದೇನೆ. ಇನ್ನು, ಕಷ್ಟದ ಬಗ್ಗೆ ಮಾತನಾಡುವುದಾದರೆ, ನಾನೂ ನಿರ್ವಪಕಿ ಆಗಿರುವುದರಿಂದ ಸಾಕಷ್ಟು ಕಷ್ಟ-ನಷ್ಟಗಳನ್ನು ನೊಡಿದ್ದೇನೆ. ಆ ಕಷ್ಟದ ಅರಿವು ನನಗೂ ಇದೆ. ಹಾಗಾಗಿ ಬಿಗ್ ಮನೆಯಲ್ಲಿ ಇದ್ದಿದ್ದು ಕಷ್ಟ ಅನಿಸಲಿಲ್ಲ’ ಎನ್ನುತ್ತಾರೆ ನಿರ್ಮಲಾ. ‘ಕ್ಯಾಮರಾ ಮುಂದೆ ನಾನು ಸಾಕಷ್ಟು ಮಾತನಾಡಿದ್ದೇನೆ. ಅದು ನಿಜ. ನನಗೆ ಅನಿಸಿದ ಕಥೆಗಳು, ನೀತಿ ಪಾಠಗಳು, ವಿವೇಕಾನಂದ, ಅಬ್ದುಲ್ ಕಲಾಂ, ಡಾ. ರಾಜಕುಮಾರ್, ಓಬವ್ವ, ತಿಮ್ಮಕ್ಕ ಸೇರಿ ಸಾಕಷ್ಟು ಮಂದಿಯ ನೀತಿ ಪಾಠಗಳನ್ನು ಹೇಳಿಕೊಂಡಿದ್ದೇನೆ. ಕರೊನಾ ದಿನಗಳಲ್ಲಿ ಎದುರಾದ ಸಮಸ್ಯೆ ಬಗ್ಗೆ ಮಾತನಾಡಿದ್ದೇನೆ. ಆತ್ಮಹತ್ಯೆ ಅನ್ನೋ ಸುಳಿಗೆ ಸಿಲುಕುವವರಿಗೆ ಧೈರ್ಯವನ್ನೂ ತುಂಬಿದ್ದೇನೆ. ಆದರೆ, ಅವೆಲ್ಲವೂ ತೆರೆಯ ಮೇಲೆ ಬರುವುದಿಲ್ಲ. ನನ್ನ ಭಾಗದ ವಿಡಿಯೋಗಳನ್ನು ಬೇಕಾದರೆ ವೂಟ್​ನಲ್ಲಿ ನೋಡಬಹುದು. ಅಲ್ಲಿ ನಾನು ಹೇಗಿದ್ದೆ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ ನಿರ್ಮಲಾ.

ಆಟವನ್ನು ಆಟದ ಥರ ಆಡಿದ್ದೇನೆ!: ‘ಬಿಗ್​ಬಾಸ್’ ಶೋದಲ್ಲಿನ ಎಲ್ಲರಿಗೂ ನಿರ್ಮಲಾ ಕಿವಿಮಾತೊಂದನ್ನು ಹೇಳಿದ್ದಾರೆ. ‘ಆಟವನ್ನು ಆಟದ ರೀತಿಯಲ್ಲಿಯೇ ಆಡಿ. ತಪ್ಪಿದ್ದರೆ, ತಪು್ಪ ಮಾಡಿದವರ ಮುಂದೆಯೇ ಹೇಳಿ. ಏಕೆಂದರೆ ಅದನ್ನು ಸರಿಪಡಿಸಿಕೊಳ್ಳುವುದು ಅವರೇ ಅಲ್ಲವೇ. ನೆಚ್ಚಿನ ಸ್ಪರ್ಧಿ ಎಂಬುದಕ್ಕಿಂತ, ‘ಬಿಗ್​ಬಾಸ್’ನಲ್ಲಿ ಜನಗಳ ತೀರ್ಪು ಅಂತಿಮ. ಊಹಿಸಲು ನಾನ್ಯಾರು? ಅದಕ್ಕಾಗಿ 100 ದಿನ ಕಾಯೋಣ’ ಎಂಬುದು ಅವರ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net