

ಬೆಂಗಳೂರು: ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮವಾದ ‘ಬಿಗ್ ಬಾಸ್’ ಇದೀಗ ಕೊನೆಯ ಹಂತಕ್ಕೆ ಬಂದಿದೆ. ಕಾರ್ಯಕ್ರಮ ಮುಗಿಯುವುದಕ್ಕೆ ಇನ್ನು ಆರು ದಿನಗಳು ಮಾತ್ರ ಇದ್ದು, ಎಂಟನೇ ಸೀಸನ್ನ ವಿಜೇತರು ಯಾರು ಎಂಬುದು ಭಾನುವಾರ ಬಹಿರಂಗವಾಗಲಿದೆ. ಎಲ್ಲ ಸರಿ, ಈ ಸೀಸನ್ನಲ್ಲಿ ಸಿನಿಮಾ, ಕಿರುತೆರೆ, ಗಾಯನ, ಕ್ರೀಡೆ, ಸಾಮಾಜಿಕ ಸೇವೆ ಸೇರಿ ವಿವಿಧ ಕ್ಷೇತ್ರಗಳ 20 ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಈ ಪೈಕಿ ಯಾರ್ಯಾರಿಗೆ ಎಷ್ಟೆಷ್ಟು ಸಂಭಾವನೆ ಸಿಕ್ಕಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಸಹಜವಾಗಿಯೇ ಇದೆ.
ಮೂಲಗಳ ಪ್ರಕಾರ, ಈ ಬಾರಿಯ ಸಂಭಾವನೆ ವಾರಕ್ಕೆ 25 ಸಾವಿರ ರೂ.ಗಳಿಂದ ಎರಡು ಲಕ್ಷದವರೆಗೂ ಇದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದವರೆಂದರೆ ಅದು ಶುಭಾ ಪೂಂಜ ಮತ್ತು ನಿಧಿ ಸುಬ್ಬಯ್ಯ ಅಂತೆ. ಅವರಿಬ್ಬರೂ ಪ್ರತೀ ವಾರ ಎರಡು ಲಕ್ಷದಷ್ಟು ಸಂಭಾವನೆ ಪಡೆಯುತ್ತಿದ್ದರು ಎಂಬ ಸುದ್ದಿ ಇದೆ. ಅವರ ನಂತರ ಅರವಿಂದ್, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ ಮುಂತಾದವರು ವಾರಕ್ಕೆ 50 ಸಾವಿರದಿಂದ ಒಂದು ಲಕ್ಷ ರೂ.ಗಳವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಿಕ್ಕಂತೆ ಬಹಳಷ್ಟು ಸ್ಪರ್ಧಿಗಳ ಸಂಭಾವನೆ ವಾರಕ್ಕೆ 50 ಸಾವಿರ ರೂ.ಗಳಿಗಿಂತ ಕಡಿಮೆ ಇದೆಯಂತೆ.
ಇನ್ನು, ಈ ಕೊನೆಯ ವಾರದ ವಿಶೇಷತೆಯೆಂದರೆ, ಸೋಮವಾರದಿಂದ ಪ್ರತಿದಿನ ಒಬ್ಬೊಬ್ಬ ಸದಸ್ಯರ ಫೋಟೋ ವಾಲ್ ನಿರ್ವಿುಸಲಾಗುತ್ತಿದೆ. ಈ ಗೋಡೆಯಲ್ಲಿ, ಪ್ರತಿಯೊಬ್ಬ ಸ್ಪರ್ಧಿಯು ‘ಬಿಗ್ ಬಾಸ್’ ಮನೆಗೆ ಬಂದಾಗಿನಿಂದ ಅಲ್ಲಿಯವರೆಗಿನ ಪಯಣದವರೆಗೂ ಹಲವು ಫೋಟೋಗಳನ್ನು ಪ್ರದರ್ಶನಕ್ಕಿಡಲಾಗಿದೆ. ಅಷ್ಟೇ ಅಲ್ಲ, ಯಾರ ಫೋಟೋ ವಾಲ್ ಇದೆಯೋ, ಅವರ ಕುರಿತು ಮಿಕ್ಕ ಸ್ಪರ್ಧಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ವೇದಿಕೆ ಸಿಗಲಿದೆ. ಸೋಮವಾರ, ಅರವಿಂದ್ ಅವರ ಫೋಟೋ ವಾಲ್ ಇಡಲಾಗಿದ್ದು, ಅರವಿಂದ್ ಅವರ ಬಗ್ಗೆ ಬೇರೆ ಸದಸ್ಯರು ಮಾತನಾಡಿದ್ದಾರೆ. ಅಷ್ಟೇ ಅಲ್ಲ, ‘ಬಿಗ್ ಬಾಸ್’ ಮನೆಯಲ್ಲಿ ಈಡೇರದ ಒಂದು ಆಸೆಯನ್ನು, ಗಾರ್ಡನ್ ಏರಿಯಾದಲ್ಲಿರುವ ಕೃತಕ ಕಿವಿಯಲ್ಲಿ ಹೇಳಿಕೊಂಡರೆ, ಅವರ ಆಸೆ ನೆರವೇರಿಸಲಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಅರವಿಂದ್, ‘ಬಿಗ್ ಬಾಸ್’ ಮನೆಯ ಎಂಟ್ರಿಗೆ ಬಂದ ಬೈಕ್ನ್ನು ಇಲ್ಲಿ ನೋಡಬೇಕು ಎಂದು ಆಸೆಪಟ್ಟಿದ್ದರು. ಅದರಂತೆ, ಅರವಿಂದ ಅವರ ಬೈಕ್ ತರಿಸುವ ಮೂಲಕ ಅವರ ಆಸೆ ಈಡೇರಿಸಲಾಗಿದೆ.